ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಗ್ರಾಮೀಣ ಶಾಲೆಗೆ ನೆರವಾದ ಓಸಾಟ್

ಕೆಪಿಎಸ್‌ಗೆ ₹ 40 ಲಕ್ಷ ವೆಚ್ಚದಡಿ ಕೊಠಡಿ ನಿರ್ಮಾಣ
Last Updated 28 ಸೆಪ್ಟೆಂಬರ್ 2021, 3:38 IST
ಅಕ್ಷರ ಗಾತ್ರ

ಕುಣಿಗಲ್: ಗ್ರಾಮೀಣ ಪ್ರದೇಶದ ಶೈಕ್ಷಣಿಕ ಪ್ರಗತಿಗೆ ಚಿಂತಿಸುವ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಓಸಾಟ್ ಸೇವಾ ಸಂಸ್ಥೆಯ ಸದಸ್ಯರು ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ₹ 40 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ಮತ್ತು ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.

ಬೆಂಗಳೂರಿನ ಕಸವನಹಳ್ಳಿಯ ಓಸಾಟ್ ಸಂಸ್ಥೆ (one school at a time) 2003ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸುರಕ್ಷಿತ ಮತ್ತು ಗುಣಮಟ್ಟದ ಕಟ್ಟಡಗಳನ್ನು ಅಗತ್ಯ ಮೂಲಸೌಕರ್ಯದೊಂದಿಗೆ ನಿರ್ಮಿಸಲು ಆದ್ಯತೆ ನೀಡುತ್ತಾ ಬಂದಿದೆ.

ಈ ಸಂಸ್ಥೆ ಬಗ್ಗೆ ಮಾಹಿತಿ ತಿಳಿದ ಅಮೃತೂರು ಕರ್ನಾಟಕ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಕುಮಾರ್ ಅವರು ತಮ್ಮ ಶಾಲೆಯ ಸ್ಥಿತಿಗತಿ ವಿವರಿಸಿ ಗಮನ ಸೆಳೆದರು. ಬಳಿಕ ಓಸಾಟ್ ಸಂಸ್ಥೆಯು ಅಮೃತೂರಿನಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಯಿತು. ಸಂಸ್ಥೆಯ ಪದಾಧಿಕಾರಿಗಳು ಬಂದು ಪರಿಶೀಲಿಸಿ ₹ 40 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೂರು ಕೊಠಡಿ, ಬಾಲಕರು ಮತ್ತು ಬಾಲಕಿಯರಿಗೆ ಅತ್ಯಾಧುನಿಕ ಸೌಲಭ್ಯ ಹೊಂದಿದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಕಳೆದ ವಾರ ಯಾವುದೇ ಆಡಂಬರಗಳಿಲ್ಲದೆ ಸರಳವಾಗಿ ಉದ್ಘಾಟನೆಯನ್ನೂ ಮಾಡಿ ವಿದ್ಯಾರ್ಥಿಗಳಿಗೆ ಸಮರ್ಪಿಸಿದ್ದಾರೆ.

ಓಸಾಟ್ ಸಂಸ್ಥೆಯ ಜತೆ ಸಹ ಸಂಸ್ಥೆಗಳಾದ ಬೆಂಗಳೂರಿನ ಅಮೇಡಿಸ್ ಲ್ಯಾಬ್, ಲಿಂಕಡ್ ಇನ್ ಅಮೆರಿಕ ಮತ್ತು ಸೇವಾ ಮಂದಾರ ಬೋಸ್ಟನ್ ಅಮೆರಿಕ ಸಂಸ್ಥೆಗಳು ಕೈಜೋಡಿಸುತ್ತಿವೆ. ನಾಡಿನಲ್ಲಿರುವ ಹಳೆಯ, ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳ ಬಗ್ಗೆ ಮಾಹಿತಿ ಕಲೆ ಹಾಕುವ ಸಂಸ್ಥೆಯ ಸ್ವಯಂ ಸೇವಕರು ಮೂಲಸೌಕರ್ಯ ಅಗತ್ಯವಿರುವ ಶಾಲೆಗಳನ್ನು ಆಯ್ಕೆ ಮಾಡುತ್ತಾರೆ.

ಕಾರ್ಯ ಯೋಜನೆ, ನಿರ್ವಹಣೆ ಮತ್ತು ಪೂರ್ಣಗೊಳಿಸುವಿಕೆಯ ಪ್ರತಿ ಹಂತದಲ್ಲೂ ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತಾರೆ. ಈ ರೀತಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 45 ಶಾಲೆಗಳನ್ನು ನಿರ್ಮಿಸಿರುವ ಹೆಗ್ಗಳಿಕೆಗೆ ಓಸಾಟ್ ಸಂಸ್ಥೆ ಪಾತ್ರವಾಗಿದೆ.

‌ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಅಮೇಡಿಸ್ ಲ್ಯಾಬ್‌ನ ರಿಭೂ, ‘ಶಾಲೆಗಳನ್ನು ಅತ್ಯಾಧುನಿಕವಾಗಿ ನಿರ್ಮಿಸಿಕೊಟ್ಟಿದ್ದೇವೆ. ಶೈಕ್ಷಣಿಕ ಪ್ರಗತಿಯ ಜತೆಗೆ ಕಟ್ಟಡ, ಶೌಚಾಲಯ ನಿರ್ವಹಣೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಸ್ಥಳೀಯ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಓಸಾಟ್ ಸಂಸ್ಥೆಯ ಬಾಲಕೃಷ್ಣರಾವ್, ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, ಅಧಿಕಾರಿಗಳಾದ ಧನಂಜಯ್ಯ, ಉಷಾದೇವಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಫಣಿ, ಮುಖಂಡ ಹರೀಶ್, ಕೆಪಿಎಸ್ ಶಾಲೆಯ ನರಸಿಂಹಪ್ರಸಾದ್, ಲಕ್ಷ್ಮೀಶಮೂರ್ತಿ, ದೇವರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT