ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಸಿದರೆ ಕ್ರಮ

ಆಯುಕ್ತ ಟಿ.ಭೂಬಾಲನ್ ಅವರಿಂದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ವೀಕ್ಷಣೆ; ಅನೈರ್ಮಲ್ಯ: ₹ 38 ಸಾವಿರ ದಂಡ
Last Updated 28 ಮೇ 2019, 12:41 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಮಂಗಳವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ವೀಕ್ಷಣೆ ನಡೆಸಿದರು. ಈ ವೇಳೆ ನೈರ್ಮಲ್ಯ ಕಾಪಾಡದ 19 ಮಂದಿ ಸಾರ್ವಜನಿಕರು ಮತ್ತು ಉದ್ದಿಮೆದಾರರಿಗೆ ಒಟ್ಟು ₹ 38,200 ದಂಡ ವಿಧಿಸಿದರು.

ಬೆಳಿಗ್ಗೆ 6.45ಕ್ಕೆ ವೀಕ್ಷಣೆ ಆರಂಭಿಸಿದ ಆಯುಕ್ತರು 14, 16, 8, 30, 24, 27, 26ನೇ ವಾರ್ಡ್‌ಗಳಲ್ಲಿ ಪ್ರದಕ್ಷಿಣೆ ನಡೆಸಿದರು. 11ಗಂಟೆಯ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಹಲವು ಹೋಟೆಲ್, ಅಂಗಡಿಗಳಿಗೆ ಭೇಟಿ ನೀಡಿದರು.

ತರಕಾರಿ ಮತ್ತು ಹಣ್ಣಿನ ಅಂಗಡಿ, ಇಡ್ಲಿ ಹೋಟೆಲ್, ಮಾವಿನ ಅಂಗಡಿ, ಬೇಕರಿ, ಚಿಕನ್ ಸೆಂಟರ್, ಟೀ ಸ್ಟಾಲ್, ಶಾಪಿಂಗ್ ಸೆಂಟರ್ ಸೇರಿದಂತೆ ಹಲವು ಕಡೆಗಳಿಗೆ ಭೇಟಿ ಇತ್ತರು. ಬೀದಿ ಬದಿಯಲ್ಲಿ ಕಸ ಹಾಕಿರುವುದು, ಉದ್ದಿಮೆ ಪರವಾನಗಿ ಪಡೆಯದೇ ಇರುವುದು, ಪ್ಲಾಸ್ಟಿಕ್ ಬಳಕೆ, ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ಉದ್ದಿಮೆ ನಡೆಸುತ್ತಿರುವುದು, ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುವವರು, ಕಲಬೆರಿಕೆ ಹಣ್ಣುಗಳ ಮಾರಾಟ, ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯ ಕಾರಣಕ್ಕೆ ₹ 500ರಿಂದ ಗರಿಷ್ಠ ₹ 10 ಸಾವಿರದ ವರೆಗೆ ದಂಡ ವಿಧಿಸಿದರು.

ಪಾಲಿಕೆ ಆರೋಗ್ಯ ಅಧಿಕಾರಿ ನಾಗೇಶ್ ಕುಮಾರ್, ಪರಿಸರ ವಿಭಾಗದ ಎಂಜಿನಿಯರ್ ಮೃತ್ಯಂಜಯ, ನಿಖಿತಾ ಹಾಗೂ ಆರೋಗ್ಯ ನಿರೀಕ್ಷಕರು ಈ ವೇಳೆ ಹಾಜರಿದ್ದರು.

ಅನಿರೀಕ್ಷಿತ ಭೇಟಿ ಮುಂದುವರಿಯಲಿದೆ

ರಸ್ತೆ ಬದಿಯಲ್ಲಿ ಮತ್ತು ಬೀದಿಯಲ್ಲಿ ಪ್ಲಾಸ್ಟಿಕ್, ಕಸ ಎಸೆಯುವವರಿಗೆ ದಂಡ ವಿಧಿಸಲಾಗುವುದು. ನಮ್ಮ ಸಿಬ್ಬಂದಿ ಯಾವ ವಾರ್ಡ್‌ನಲ್ಲಿ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎನ್ನುವುದೂ ಸಹ ಈ ಅನಿರೀಕ್ಷಿಯ ಭೇಟಿಯಲ್ಲಿ ನಮಗೆ ತಿಳಿಯಲಿದೆ ಎಂದು ಟಿ.ಭೂಬಾಲನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವಾಗ ಯಾವ ವಾರ್ಡ್, ಬಡಾವಣೆ, ರಸ್ತೆಗೆ ಭೇಟಿ ನೀಡುತ್ತೇನೆ ಎನ್ನುವುದನ್ನು ಯಾರಿಗೂ ಹೇಳುವುದಿಲ್ಲ. ಬೆಳಿಗ್ಗೆ ಅಧಿಕಾರಿಗಳನ್ನು ಕರೆಯಿಸಿ ನಗರ ಪ್ರದಕ್ಷಿಣೆ ಮಾಡಲಾಗುವುದು. ಪಾಲಿಕೆ ಆಸ್ತಿಯ ಕೆಲವು ಕಡೆಗಳಲ್ಲಿ ಉದ್ದಿಮೆಗಳನ್ನು ಮತ್ತು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಬೇರೆ ಜಾಗ ನೋಡಿಕೊಳ್ಳುವಂತೆ ಈ ಭೇಟಿ ವೇಳೆ ತಿಳಿಸುತ್ತೇವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT