ಗರಿಗೆದರಿದ ರಾಜಕೀಯ ಚಟುವಟಿಕೆ

ಶುಕ್ರವಾರ, ಏಪ್ರಿಲ್ 19, 2019
30 °C
ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದ ನೋಟಾ ಅಭಿಯಾನ

ಗರಿಗೆದರಿದ ರಾಜಕೀಯ ಚಟುವಟಿಕೆ

Published:
Updated:
Prajavani

ಪಾವಗಡ: ಚುನಾವಣೆ ಸಮೀಪಿಸುತ್ತಿದ್ದಂತೆ ತಾಲ್ಲೂಕಿನಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಯುವ ಜನತೆ ನಡೆಸುತ್ತಿರುವ ನೋಟಾ ಅಭಿಯಾನ ಅಭ್ಯರ್ಥಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮತಗಳು ಹೆಚ್ಚಿವೆ. ಹೀಗಾಗಿ ದಲಿತ ಸಮುದಾಯದ ಮತಗಳನ್ನು ಸೆಳೆಯಲು ಮೈತ್ರಿ ಮತ್ತು  ಬಿಜೆಪಿ ಪಕ್ಷದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಅವರು ನಿಡಗಲ್ ದುರ್ಗದಲ್ಲಿ ದಲಿತ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಈ ಹಿಂದೆ ವಿವಿಧ ಪಕ್ಷಗಳಲ್ಲಿದ್ದ ಪರಿಶಿಷ್ಟ ಜಾತಿಯ 300ಕ್ಕೂ ಹೆಚ್ಚಿನ ಮುಖಂಡರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೆ ಬಿಜೆಪಿಯೇತರ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಸೂಚಿಸುವಂತೆ ಕೋರಿರುವುದಾಗಿ ಬಿಜೆಪಿಯ ಹೆಸರು ಹೇಳಬಯಸದ ಮುಖಂಡರು ತಿಳಿಸಿದ್ದಾರೆ.

ಮೈತ್ರಿ ಪಕ್ಷಗಳ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ತಾಲ್ಲೂಕಿನಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಮ್ಮ ತಮ್ಮ ಪಕ್ಷಗಳ ಮುಖಂಡರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಪ್ರತಿ ಚುನಾವಣೆಯಲ್ಲಿಯೂ ತಾಲ್ಲೂಕಿನಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ಇರುತ್ತಿತ್ತು. ಮೈತ್ರಿ ಧರ್ಮ ಪಾಲಿಸುವ ಸಲುವಾಗಿ ಈ ಬಾರಿ ಮೈತ್ರಿ ಅಭ್ಯರ್ಥಿಗೆ ಜೆಡಿಎಸ್ ಮುಖಂಡರು ಬೆಂಬಲಿಸುತ್ತಿದ್ದಾರೆ. ಆದರೆ, ಈವರೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದ ಕಾರ್ಯಕರ್ತರು, ಮುಖಂಡರಲ್ಲಿ ಅಸಮಾಧಾನ ಇದ್ದೇ ಇದೆ. ಇದು ಈಚೆಗೆ ನಡೆದ ಸಭೆಯಲ್ಲಿ ಬಹಿರಂಗವಾಗಿತ್ತು. ಅಸಮಾಧಾನಗೊಂಡ ಮುಖಂಡರು, ಕಾರ್ಯಕರ್ತರನ್ನು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಹಿರಿಯ ಮುಖಂಡರು ಸಮಾಧಾನಪಡಿಸಲು ಯತ್ನಿಸಿದ್ದರು.

ವಿವಿಧ ಜಾತಿಗಳ ಮತ ಸೆಳೆಯಲು ಮೈತ್ರಿ, ಬಿಜೆಪಿ ಪಕ್ಷದ ಅಭ್ಯರ್ಥಿಗಳು ತಂತ್ರ ರೂಪಿಸುತ್ತಿದ್ದಾರೆ. ಆಯಾ ಸಮುದಾಯದ ಮುಖಂಡರನ್ನು ಕರೆಸಿ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ನೋಟಾ ಅಭಿಯಾನ
ರಾಜಕಾರಣಿಗಳು ಪ್ರಚಾರ, ಜಾತಿ ಲೆಕ್ಕಾಚಾರ, ತಂತ್ರಗಾರಿಕೆ ನಡೆಸುತ್ತಿದ್ದರೆ, ತಾಲ್ಲೂಕಿನ ಯುವ ಜನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸದೆ ಮತ ಕೇಳಲು ಬರುವವರನ್ನು ಮನೆ ಬಳಿ ಬಿಟ್ಟುಕೊಳ್ಳಬೇಡಿ, ನೊಟಾಗೆ ಮತ ನೀಡಿ ಎಂದು ಜಾಲತಾಣಗಳಲ್ಲಿ ಟ್ರೋಲ್ ಮುಂದುವರಿಸಿದ್ದಾರೆ.

ತಾಲ್ಲೂಕಿಗೆ ನದಿ ಮೂಲಕ ನೀರು ಕೊಡುವುದಾಗಿ ಹಲ ವರ್ಷಗಳಿಂದ ವಿವಿಧ ಪಕ್ಷಗಳ ಶಾಸಕರು ಆಶ್ವಾಸನೆ ನೀಡುತ್ತಾ ಬರುತ್ತಿದ್ದಾರೆ. ಈವರೆಗೆ ತಾಲ್ಲೂಕಿಗೆ ನೀರು ಹರಿಸಿಲ್ಲ. ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಕುಡಿಯಲು, ಬಳಸಲೂ ನೀರಿಲ್ಲ. ಆದರೂ ಹೇಗೆ ರಾಜಕಾರಣಿಗಳು ಮತ ಕೇಳಲು ಬುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಯುವ ಜನರು.

ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸದೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ ಕಾರಣಕ್ಕೆ ತಾಲ್ಲೂಕಿನ ಜೋಡಿ ಅಚ್ಚಮ್ಮನಹಳ್ಳಿಯಲ್ಲಿ ಗ್ರಾಮಸ್ಥರು ಈಚೆಗೆ ನೋಟ ಅಭಿಯಾನ ಆರಂಭಿಸಿದ್ದರು. ತಾಲ್ಲೂಕಿನಲ್ಲಿ ನಡೆಯುತ್ತಿರುವ ನೋಟಾ ಅಭಿಯಾನ ವಿವಿಧ ಪಕ್ಷಗಳ ಮುಖಂಡರು, ಅಭ್ಯರ್ಥಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ನೋಟಾ ಚಲಾಯಿಸಿ ಬುದ್ಧಿ ಕಲಿಸಿ
ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು, ಜನಪ್ರತಿನಿಧಿಗಳು ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಹೋರಾಟ ನಡೆಸಿದರೂ ಕೇವಲ ಆಶ್ವಾಸನೆಗಳ ಹೊಳೆ ಹರಿಸಲಾಗುತ್ತಿದೆ. ಹೀಗಾಗಿ ನೋಟಾಗೆ ಮತ ಚಲಾಯಿಸಿ ಬುದ್ಧಿ ಕಲಿಸಲು ತೀರ್ಮಾನಿಸಲಾಗಿದೆ.
– ಧನು ಸಿಂಹಾದ್ರಿ, ಕದಿರೇಹಳ್ಳಿ, ಪಾವಗಡ ತಾಲ್ಲೂಕು

**

ಜನಪ್ರತಿನಿಧಿಗಳು ತಾಲ್ಲೂಕಿಗೆ ನದಿ ಮೂಲದಿಂದ ನೀರು ಹರಿಸುತ್ತಾರೆ ಎಂಬ ನಂಬಿಕೆ ಇರಿಸಿಕೊಂಡು ತಾಳ್ಮೆಯಿಂದ ಇದ್ದೆವು. ಆದರೆ, ದಶಕಗಳು ಕಳೆದರೂ ನೀರು ಹರಿಸಿಲ್ಲ. ಜನ, ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿವೆ. ಹೀಗಾಗಿ ನೋಟಾ ಅಭಿಯಾನ ಆರಂಭಿಸಲಾಗಿದೆ.
– ನಾಗಣ್ಣ, ಜೋಡಿ ಅಚ್ಚಮ್ಮನಹಳ್ಳಿ, ಪಾವಗಡ ತಾಲ್ಲೂಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !