ಸೋಮವಾರ, ಸೆಪ್ಟೆಂಬರ್ 27, 2021
28 °C
ತೆರಿಗೆ ಸಂಗ್ರಹಕ್ಕೆ ತುಮಕೂರು ಮಹಾನಗರ ಪಾಲಿಕೆಯ ಕಂಡುಕೊಂಡು ನೂತನ ಮಾರ್ಗ

ಮನೆ ಬಾಗಿಲಲ್ಲೇ ತೆರಿಗೆ ಪಾವತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತುಮಕೂರು ಮಹಾನಗರ ಪಾಲಿಕೆಯು ನಗರದ ನಿವಾಸಿಗಳು ಮನೆ ಬಾಗಿಲಲ್ಲಿಯೇ ತೆರಿಗೆ ಪಾವತಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ತೆರಿಗೆ ಪಾವತಿದಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಾನಗರ ಪಾಲಿಕೆಯ ಬಿಲ್‌ ಕಲೆಕ್ಟರ್‌ಗಳು ಮನೆ ಬಾಗಿಲಿಗೆ ಬರಲಿದ್ದು, ನಗದು, ಕಾರ್ಡ್, ಚೆಕ್‌, ಡಿಡಿ ಮೂಲಕ ಪಾವತಿಸಲು ನಾಗರಿಕರಿಗೆ ನೂತನ ವ್ಯವಸ್ಥೆ ಒಳಗೊಂಡಿದೆ.

ಅದೇ ರೀತಿ ವ್ಯಾಪಾರ ಪರವಾನಗಿ ಶುಲ್ಕವನ್ನು ಆರೋಗ್ಯ ನಿರೀಕ್ಷಕರು ಇದೇ ರೀತಿಯ ವ್ಯವಸ್ಥೆಯಡಿ ಸಂಗ್ರಹ ಮಾಡಲಿದ್ದಾರೆ.
ತೆರಿಗೆ ಪಾವತಿ ಸಾಫ್ಟವೇರ್ ಒಳಗೊಂಡ ಒಟ್ಟು 40 ಉಪಕರಣಗಳನ್ನು ಪಾಲಿಕೆಯು ಬಿಲ್ ಕಲೆಕ್ಟರ್‌ಗಳಿಗೆ ಮತ್ತು ಆರೋಗ್ಯ ನಿರೀಕ್ಷಕರಿಗೆ ಒದಗಿಸಿದೆ. ಪ್ರಿಂಟರ್ ಮತ್ತು ಸ್ವೈಪಿಂಗ್‌ ವ್ಯವಸ್ಥೆ ಒಳಗೊಂಡಿದೆ.

ತೆರಿಗೆ ಸಂಗ್ರಹಗಾರರು ಪ್ರತಿಯೊಬ್ಬರೂ ಪ್ರತಿ ಮನೆಗೆ ತೆರಳುವರು. ತೆರಿಗೆ, ಬಾಕಿ ಮೊತ್ತ, ಅನಧಿಕೃತ ನೀರಿನ ಸಂಪರ್ಕಕ್ಕೆ ಶುಲ್ಕ ನಿಗದಿಪಡಿಸಿ ಅಧಿಕೃತಗೊಳಿಸಿ ಶುಲ್ಕ ಆಕರಿಸುವುದು, ವ್ಯಾಪಾರ ಪರವಾನಗಿ ಶುಲ್ಕ ಆಕರಿಸಿಕೊಳ್ಳಲಾಗುತ್ತಿದೆ. ತೆರಿಗೆ ವಂಚನೆಯಾಗಿದ್ದರೆ ಸ್ಥಳದಲ್ಲಿಯೇ ದಂಡ ಹಾಕಲಾಗುತ್ತದೆ. ಜಿಪಿಎಸ್ ವ್ಯವಸ್ಥೆ ಮೂಲಕ ದಾಖಲೀಕರಣವಾಗಲಿದೆ.

‘ಈ ನೂತನ ವ್ಯವಸ್ಥೆಯಿಂದ ನೀರಿನ ತೆರಿಗೆ ಪಾವತಿ ವಿಳಂಬ ಹೋಗಲಾಡಿಸಲು, ಬಾಕಿ ಮೊತ್ತ ಪಾವತಿಸಲು, ಅನಧಿಕೃತ ಸಂಪರ್ಕಗಳನ್ನು ದಂಡ ಹಾಕಿ ಅಧಿಕೃತಗೊಳಿಸಿಕೊಳ್ಳಲು ಉಪಯುಕ್ತವಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಹೇಳಿದರು.

‘ಈ ನೂತನ ವ್ಯವಸ್ಥೆಯಿಂದ ತೆರಿಗೆ ಪಾವತಿದಾರರಿಗೂ ಅನುಕೂಲ. ಪಾಲಿಕೆಗೆ ಬಂದು, ಬ್ಯಾಂಕುಗಳಿಗೆ ಹೋಗಿ ಪಾವತಿ ಮಾಡುವ ಅಲೆದಾಟ ತಪ್ಪುತ್ತದೆ. ಮಹಾನಗರ ಪಾಲಿಕೆಗೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

‘2018–19ರಲ್ಲಿ ನೀರಿನ ತೆರಿಗೆ ಸಂಗ್ರಹ ಶೇ 25ರಷ್ಟು ಮಾತ್ರ ಆಗಿದೆ. ಇದರಿಂದ ಪಾಲಿಕೆಗೆ ಆರ್ಥಿಕ ಸಮಸ್ಯೆ ಆಯಿತು. ಹೀಗಾಗಿ ಈ ಬಾರಿ ಇಂಥದ್ದಕ್ಕೆ ಅವಕಾಶವಿಲ್ಲ. ನೀರಿನ ತೆರಿಗೆ ಪಾವತಿ ಮಾಡದೇ ಇದ್ದರೆ ಈಗಿನ ನೀರಿನ ಸಮಸ್ಯೆ ದಿನಗಳಲ್ಲೂ ನೀರಿನ ಸಂಪರ್ಕ ಕಡಿತಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಆಯುಕ್ತರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು