ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ಸಂತೆ ದಿನ ಹೈರಾಣಾಗುವ ಸಾರ್ವಜನಿಕರು

ಎ.ಆರ್. ಚಿದಂಬರ
Published 7 ಮೇ 2024, 6:17 IST
Last Updated 7 ಮೇ 2024, 6:17 IST
ಅಕ್ಷರ ಗಾತ್ರ

ಕೊರಟಗೆರೆ: ಸೋಮವಾರ ಬಂತೆಂದರೆ ಸಾಕು ಇಲ್ಲಿನ ಸಂತೆ ಮೈದಾನದ ಬಳಿ ಮುಖ್ಯರಸ್ತೆಯಲ್ಲಿ ಸಂಚರಿಸಬೇಕೆಂದರೆ ಸಾಹಸ ಮಾಡಿದಂತೆಯೇ ಸರಿ. ಒಂದೆಡೆ ಖಾಸಗಿ ಬಸ್‌ಗಳ ಹಾರನ್, ಮತ್ತೊಂದೆಡೆ ಅಡ್ಡಾದಿಡ್ಡಿ ನಿಲ್ಲುವ ಆಟೊ, ದ್ವಿಚಕ್ರವಾಹ ಕಿರಿಕಿರಿಯಿಂದಾಗಿ ಪ್ರತಿವಾರ ಜನ ಹೈರಾಣಾಗುವಂತಾಗಿದೆ.

ಪಟ್ಟಣದ ಹೃದಯ ಭಾಗದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಸಂತೆ ಮೈದಾನ ಇದೆ. ಇದರ ಮುಂಭಾಗವೇ ಸರ್ಕಾರಿ ಬಸ್ ನಿಲ್ದಾಣ ಕೂಡ ಇದೆ. ಸಂತೆಗೆ ಹೊಂದಿಕೊಂಡಂತೆ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಇದೆ. ಈ ಭಾಗದಿಂದಲೇ ಬಹುತೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚಾರ ಮಾಡಬೇಕಿದೆ. ಯಾವುದೇ ವಾಹನ ಇದೇ ಜಾಗದಿಂದಲೇ ಪಟ್ಟಣಕ್ಕೆ ಪ್ರವೇಶ ಪಡೆಯಬೇಕಿದೆ.

ಆದರೆ ಸೋಮವಾರ ಬಂತೆಂದರೆ ಸಾಕು ಈ ಜಾಗದಲ್ಲಿ ಓಡಾಡಬೇಕೆಂದರೆ ಜನ ಸಾಹಸ ಪಟ್ಟಂತಾಗುತ್ತದೆ. ಸಂತೆಗೆ ಬರುವ ವ್ಯಾಪಾರಿಗಳು, ಗ್ರಾಹಕರಿಗೆ ತಮ್ಮ ವಾಹನಗಳ ನಿಲುಗಡೆಗೆ ಸೂಕ್ತವಾದ ಜಾಗ ಇಲ್ಲದ ಕಾರಣಕ್ಕೆ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಮನಸೋ ಇಚ್ಚೆ ನಿಲ್ಲಿಸಿ ಸಂತೆಗೆ ತೆರಳುತ್ತಾರೆ.

ಇದರ ಜತೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ಆಟೊಗಳು ಸಂತೆಯಿಂದ ಹೊರ ಬರುವ ಪ್ರಯಾಣಿಕರಿಗಾಗಿ ಮುಖ್ಯ ರಸ್ತೆಯ ಸಂತೆ ದ್ವಾರದಲ್ಲೆ ಬೇಕಾಬಿಟ್ಟಿ ನಿಲುಗಡೆ ಮಾಡಿಕೊಂಡು ಕಾಯುತ್ತಿರುತ್ತಾರೆ. ಇದೇ ಸ್ಥಳದಲ್ಲೆ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಇರುವ ಕಾರಣಕ್ಕೆ ಸಂತೆ ದ್ವಾರದ ಮುಂಭಾಗವೇ ಬಸ್ ಕೂಡ ನಿಲುಗಡೆ ಮಾಡಲಾಗುತ್ತದೆ. ಈ ಜಾಗದಲ್ಲಿ ಅಂಗಡಿ ಹಾಗೂ ಶಾಲೆ ಇರುವುದರಿಂದ ಬಹಳಷ್ಟು ತೊಂದರೆ ಉಂಟಾಗುತ್ತದೆ.

ಸಂತೆ ಸೋಮವಾರ ನಡೆಯುವುದರಿಂದ ಸಹಜವಾಗಿ ಸಾರ್ವಜನಿಕ ಓಡಾಟ ಮುಖ್ಯ ರಸ್ತೆಯಲ್ಲಿ ಅತ್ಯಧಿಕವಾಗಿರುತ್ತದೆ. ಹಾಗಾಗಿ ಈ ಜಾಗದಲ್ಲಿ ಇನ್ನಷ್ಟು ವಾಹನದಟ್ಟಣೆ ಹೆಚ್ಚಾಗಲಿದೆ. ಕೆಲವೊಮ್ಮೆ ತುರ್ತು ವಾಹನ (ಆಂಬುಲೆನ್ಸ್) ಬಂದಾಗ ರಸ್ತೆ ಜಾಮ್ ಆಗಿರುವ ನಿದರ್ಶನವಿದೆ. ಸಂಜೆ ವೇಳೆ ಸಂತೆಗೆ ಹೂವು, ಹಣ್ಣು, ತರಕಾರಿ ಕೊಳ್ಳಲು ಬಹಳಷ್ಟು ಸಂಖ್ಯೆಯಲ್ಲಿ ಜನ ಬರುವುದರಿಂದ ಇಲ್ಲಿನ ಸಮಸ್ಯೆ ಇನ್ನಷ್ಟು ಹೇಳ ತೀರದಾಗಿದೆ.

ಪ್ರತಿ ವಾರ ತೊಂದರೆಯಾಗುತ್ತಿದ್ದರೂ ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸದಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ. ವರ್ಷಕ್ಕೋ, ಆರು ತಿಂಗಳಿಗೋ ಒಮ್ಮೆ ಪೊಲೀಸರನ್ನು ಕರೆಸಿ ವಾಹನ ದಟ್ಟಣೆ ಆಗದಂತೆ ಮಾಡುತ್ತಾರೆ. ಆದರೆ ಅದರ ಮುಂದಿನ ವಾರ ಯಾರೊಬ್ಬ ಅಧಿಕಾರಿಯೂ ಇತ್ತ ಸುಳಿಯುವುದಿಲ್ಲ.

ಈ ಮೊದಲು ಸಂತೆ ದಿನ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ಹಾಕಿ ವ್ಯವಸ್ಥಿತ ಪಾರ್ಕಿಂಗ್ ಹಾಗೂ ವಾಹನ ದಟ್ಟಣೆ ಆಗದಂತೆ ನಿಭಾಯಿಸಲಾಗುತ್ತಿತ್ತು. ಜತೆಗೆ ರಸ್ತೆ ಬದಿ ಹಾಗೂ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ನಿಲ್ಲಿಸುವ ದ್ವಿಚಕ್ರ ವಾಹನ ಕಳ್ಳತನ ಕೂಡ ಆಗುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಈಗ ಪೊಲೀಸ್ ಅಧಿಕಾರಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ. ಹಾಗಾಗಿ ಇಲ್ಲಿ ಓಡಾಡುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ವ್ಯವಸ್ಥೆ ವಿರುದ್ಧ ದೂರುತ್ತಾರೆ.

ಸಂತೆಗೆ ಸುಂಕ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪಟ್ಟಣ ಪಂಚಾಯಿತಿ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ. ರೈತರು ತಾವು ಬೆಳೆದು ತರುವ ಆಹಾರ ಪದಾರ್ಥಗಳ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗ ನಿಯೋಜಿಸಿಲ್ಲ ಎಂದು ರೈತ ರೇಣುಕಯ್ಯ ಆರೋಪ ಮಾಡಿದರು.

ರಸ್ತೆ ದಾಟುವುದೇ ಸಾಹಸ
ಸಂತೆ ದಿನ ನಾವು ರಸ್ತೆ ದಾಟೋದೆ ಒಂದು ಸಾಹಸ ಮಾಡಿದಂತೆ. ಯಾವ ಗಾಡಿ ಎತ್ತಿಂದ ಬರುತ್ತದೆ ಎಂದು ಗೊತ್ತೇ ಆಗೋಲ್ಲ. ಒಂದು ಕಡೆ ಬಸ್ ಹಾರನ್ ಇನ್ನೊಂದು ಕಡೆ ಅಡ್ಡಾದಿಡ್ಡಿ ಬರುವ ಆಟೊ. ಇದರ ಮಧ್ಯೆ ನಾವು ಉಸಿರು ಕೈಲಿ ಹಿಡಿದುಕೊಂಡು ರಸ್ತೆ ದಾಟಿ ಸಂತೆಗೆ ಹೋಗಬೇಕು. ಇಷ್ಟು ವರ್ಷ ಕಳೆದರೂ ಸಂಬಂಧ ಪಟ್ಟವರು ಇಷ್ಟು ದೊಡ್ಡ ಸಂತೆಗೆ ಒಂದು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಮಹಿಳೆ ಲಕ್ಷ್ಮಮ್ಮ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT