ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಭಸದ ಮಳೆ ಗಾಳಿಗೆ ಕೈಕೊಟ್ಟ ವಿದ್ಯುತ್

ಅಪಾಯದ ಭೀತಿ ಹುಟ್ಟಿಸಿದ ಅಭಿವೃದ್ಧಿ ಕಾಮಗಾರಿಗೆ ತೆರೆದ ಗುಂಡಿಗಳು, ವಿದ್ಯುತ್ ಇಲ್ಲದೇ ಚಡಪಡಿಸಿದ ಜನರು
Last Updated 1 ಜೂನ್ 2019, 15:44 IST
ಅಕ್ಷರ ಗಾತ್ರ

ತುಮಕೂರು: ಎಲ್ಲೆಂದರಲ್ಲಿ ಬಿದ್ದ ಮರಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಮರದ ಕೊಂಬೆಗಳು, ಮುರಿದು ಬಿದ್ದ ವಿದ್ಯುತ್ ಕಂಬಗಳು, ನೇತಾಡುತ್ತಿದ್ದ ವಿದ್ಯುತ್ ತಂತಿಗಳು.

ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆ ಸೃಷ್ಟಿಸಿದ ಅನಾಹುತಗಳಿವು.

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ವಿದ್ಯುತ್ ಸಂಪರ್ಕ ಇರಲೇ ಇಲ್ಲ.ಮಳೆ ಸುರಿದು ನಿಂತ ಬಳಿಕ ಎಲ್ಲೆಂದರಲ್ಲಿ ಗಿಡ, ಮರಗಳು ಬೀಳುತ್ತಲೆ ಇದ್ದವು.

ಶನಿವಾರ ಬೆಳಿಗ್ಗೆ ಸ್ವಲ್ಪ ಹೊತ್ತು, ಮಧ್ಯಾಹ್ನ 1 ಗಂಟೆ ವಿದ್ಯುತ್ ಲಭಿಸಿತ್ತಾದರೂ ಮತ್ತೆ ವಿದ್ಯುತ್ ಕೈಕೊಟ್ಟಿತು.

ಎಸ್‌ಐಟಿ ಹತ್ತಿರ 11 ಕೆವಿ ಕಂಬ ರಾತ್ರಿ 9 ಗಂಟೆಗೆ ಬಿದ್ದಿತು. ಅಶೋಕನಗರ, ಗಂಗೋತ್ರಿನಗರ, ಸಿದ್ಧಗಂಗಾ ಬಡಾವಣೆ, ಕೃಷ್ಣನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗೆ ವಿದ್ಯುತ್ ಕಡಿತವಾಯಿತು. ಈ ಪ್ರದೇಶಗಳಲ್ಲೂ ಗಿಡ,ಮರ ಬಿದ್ದು ಸಮಸ್ಯೆಯಾಯಿತು.

ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಸಾಗುವ ಮಾರ್ಗದ ಪಕ್ಕದಲ್ಲಿನ ಒಂದು ವಿದ್ಯುತ್ ಕಂಬ ಬೆಳಗಿನ ಜಾವ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾವು– ಹಲಸು ಮೇಳಕ್ಕೂ ಮಳೆ ತೊಂದರೆ ಮಾಡಿತು. ಶನಿವಾರದಿಂದ 5 ದಿನ ನಡೆಯುವ ಮೇಳಕ್ಕೆ 20 ಮಳಿಗೆಗಳನ್ನು ಶುಕ್ರವಾರ ಸಂಜೆ ಹಾಕಲಾಗಿತ್ತು. ಆದರೆ, ಸಂಜೆ ಸುರಿದ ಧಾರಾಕಾರ ಮಳೆ, ಗಾಳಿಗೆ ಇವುಗಳು ಮಗುಜಿ ಬಿದ್ದಿದ್ದವು. ಶನಿವಾರ ಬೆಳಿಗ್ಗೆ ಸರಿಪಡಿಸಲಾಯಿತು.

ಕಂಡಲ್ಲೆಲ್ಲ ಗುಂಡಿಗಳು, ತ್ಯಾಜದ ಗುಡ್ಡೆ
ನಗರದಲ್ಲಿ ವಿವಿಧ ಕಡೆ ಅಭಿವೃದ್ಧಿ ಕಾಮಗಾರಿಗೆ ಕಂಡಲ್ಲೆಲ್ಲ ಗುಂಡಿ ತೋಡಿದ್ದು, ಮಳೆ ನೀರು ಇವುಗಳಲ್ಲಿ ಸಂಗ್ರಹವಾಗಿ ಅಪಾಯದ ಭೀತಿ ಹುಟ್ಟಿಸಿದ್ದವು.

ಈ ತರಹ ಗುಂಡಿ ಇರುವುದರ ಸುತ್ತಮುತ್ತಲೂ ಭೂಮಿಯು ಅಭದ್ರವಾಗಿ ಕುಸಿಯುತ್ತಿದ್ದರಿಂದ ಸಾರ್ವಜನಿಕರು ಬಹು ಎಚ್ಚರಿಕೆಯಿಂದ ಸಂಚರಿಸಿದರು.

ಒಂದು ಗಂಟೆಗೂ ಹೆಚ್ಚು ಸುರಿದ ರಭಸದ ಮಳೆಗೆ ನಗರದ ವಿವಿಧ ಬಡಾವಣೆಯ ತ್ಯಾಜ್ಯ ಬಡಾವಣೆಯ ರಸ್ತೆ, ಪ್ರಮುಖ ರಸ್ತೆಗಳಲ್ಲಿ ಗುಡ್ಡೆಯಾಕಾರದಲ್ಲಿ ಬಿದ್ದಿದ್ದು ಕಂಡು ಬಂದಿತು. ಮಹಾನಗರ ಪಾಲಿಕೆ ಕಾರ್ಮಿಕರು ಈ ತ್ಯಾಜ್ಯವನ್ನು ಬೆಳಿಗ್ಗೆ ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT