ಯಂತ್ರ ನಾಗರೀಕತೆ ತೊರೆದು ಶ್ರಮ ಸಂಸ್ಕೃತಿಗೆ ಮರಳಿ

7
ತುಮಕೂರು ತಾಲ್ಲೂಕು ದೊಡ್ಡ ಹೊಸೂರು ಗ್ರಾಮದಲ್ಲಿ ನಡೆದ ‘ಬುತ್ತಿಕಟ್ಟು ಸಹಜ ಬೇಸಾಯೋತ್ಸವ’ದಲ್ಲಿ ರೈತರಿಗೆ ರಂಗಕರ್ಮಿ ಪ್ರಸನ್ನ ಸಲಹೆ

ಯಂತ್ರ ನಾಗರೀಕತೆ ತೊರೆದು ಶ್ರಮ ಸಂಸ್ಕೃತಿಗೆ ಮರಳಿ

Published:
Updated:
Deccan Herald

ತುಮಕೂರು: ‘ಕೃಷಿ ಎನ್ನುವುದು ಯಂತ್ರಗಳ ಅಭಿವೃದ್ಧಿಯಲ್ಲ, ಜೀವದ ಅಭಿವೃದ್ಧಿ. ಈ ಸಂಗತಿಯನ್ನು ಸರ್ಕಾರಗಳು, ರೈತರು ಅರ್ಥಮಾಡಿಕೊಳ್ಳಬೇಕಿದೆ.  ಯಂತ್ರ ನಾಗರೀಕತೆಯನ್ನು ತೊರೆದು ಶ್ರಮ ಸಂಸ್ಕೃತಿಯ ಕಡೆ ಮರಳಬೇಕು’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಭೈರವೇಶ್ವರ ಸಹಜ ಬೇಸಾಯ ಶಾಲೆಯಲ್ಲಿ ತುಮಕೂರು ವಿಜ್ಞಾನ ಕೇಂದ್ರ, ಭೂ ಶಕ್ತಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ಧ ‘ಬುತ್ತಿಕಟ್ಟು ಸಹಜ ಬೇಸಾಯೋತ್ಸವ’ ಉದ್ಘಾಟಿಸಿ ಮಾತನಾಡಿದರು.

‘ಇಂದು ಯಂತ್ರಗಳ ಅಭಿವೃದ್ಧಿಯೇ ಮನುಷ್ಯನ ಅಭಿವೃದ್ಧಿ ಎಂದು ನಂಬಿಸಲಾಗುತ್ತಿದೆ. ಮನುಷ್ಯ, ಪ್ರಾಣಿ, ಪಕ್ಷಿಗಳ ಬೆಳವಣಿಗೆಯೇ ಕೃಷಿ ಅಭಿವೃದ್ಧಿ. ಇದನ್ನು ರೈತರೂ ಮತ್ತು ಗ್ರಾಹಕರು ಬಹಳ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ. ಗ್ರಾಹಕರು ಮನುಸ್ಸು ಮಾಡಿದರೆ ವಿಷಮುಕ್ತ ಕೃಷಿ, ಸಹಜ ಬೇಸಾಯವನ್ನು ಪ್ರೋತ್ಸಾಹಿಸಲು ಸಾಧ್ಯವಿದೆ. ಆಗ ಮಾತ್ರ ಸರ್ಕಾರ ತನ್ನ ನಿರ್ಧಾರಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಮನುಷ್ಯ ಮತ್ತು ಇತರ ಜೀವಿಗಳ ನಡುವೆ ಸಣ್ಣ ವ್ಯತ್ಯಾಸಗಳಿವೆ. ಮನುಷ್ಯ ಜೀವಿ ಉತ್ಪಾದನೆ ಮಾಡಿದರೆ, ಬೇರೆ ಜೀವಿಗಳು ಬೆಳೆದದ್ದನ್ನು ತಿಂದು ಬದುಕಿ ತಾವು ಆಹಾರವಾಗುತ್ತವೆ. ಆದರೆ, ಇಲ್ಲಿ ಉತ್ಪಾದನೆ ಮಾಡುತ್ತಿರುವ ರೀತಿಗಳೇ ಅನೇಕ ಅವಾಂತರಗಳಿಗೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೈ ಕಸುಬು ಉತ್ಪನ್ನಗಳ ಒಕ್ಕೂಟವನ್ನು ನಂಬಬೇಕು. ಉತ್ಪಾದಿಸುವ, ಗ್ರಾಹಕರಾಗುವ ಕೆಲಸ ಮಾಡಿದರೆ ಮಾತ್ರ ಸಮಸ್ಯೆಗಳು ಬದಲಾಗುತ್ತವೆ. ರೈತರು ವೈಚಾರಿಕತೆಯನ್ನು ಸ್ವೀಕರಿಸಿ, ಯಾಂತ್ರಿಕತೆಯನ್ನು ತಿರಸ್ಕರಿಸಿ, ವಿಚಾರವನ್ನು ಸ್ವೀಕರಿಸಬೇಕು. ರೈತರು ಹೊಸ ಬದುಕನ್ನು ಕಟ್ಟುವ ಕಾಲ ಹತ್ತಿರವಿದೆ ಎಂದು ಆಶಯ ವ್ಯಕ್ತಪಡಿಸಿದರು.

ಆಹಾರ ತಜ್ಞ ಕೆ.ಸಿ. ರಘು ಮಾತನಾಡಿ, ‘ನಾವು ಊಟದ ವಿಷಯದ ಬಗ್ಗೆ ಮಾತನಾಡಿಕೊಳ್ಳಬೇಕಾಗಿದೆ. ಉತ್ತಮ ಆಹಾರ ಸೇವಿಸುವುದರಲ್ಲಿ ನಾವು ಬಡವರಾಗುತ್ತಿದ್ದೇವೆ. ಅಜ್ಞಾನಿಗಳಾಗುತ್ತಿದ್ದೇವೆ. ಜನಸಂಖ್ಯೆ ಹೆಚ್ಚಿದಂತೆ ಆಹಾರದ ಪ್ರಮಾಣ ಹೆಚ್ಚುತ್ತಿದೆಯೇ ಹೊರತು ಗುಣಮಟ್ಟ ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

‘ಮನುಷ್ಯನ ವಯಸ್ಸು ಹಾಗೂ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವುದಕ್ಕೆ ನಮ್ಮ ಆಹಾರ ವ್ಯತ್ಯಯಗಳೇ ಕಾರಣ. ಆಹಾರ ಕ್ರಮದಲ್ಲಿ ವೈವಿಧ್ಯತೆ ಇರಬೇಕಿದೆ. ಬರೀ ವಿಟಮಿನ್‌ಗಳನ್ನೇ ಹುಡುಕುತ್ತಾ ಕೆಲವೇ ಪದಾರ್ಥಗಳಿಗಷ್ಟೇ ಮಹತ್ವ ಕೊಡದೇ ಏಕದಳ ಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು, ನಾರಿನಂಶ ಇರುವ ಎಲ್ಲ ಪದಾರ್ಥಗಳನ್ನು ಹೆಚ್ಚು ಬಳಸಬೇಕು’ ಎಂದರು.

ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್ ಮಾತನಾಡಿ, ‘ರಾಸಾಯನಿಕ ಕೃಷಿ ಪದ್ಧತಿಗೆ ಸರ್ಕಾರಗಳು, ಕೃಷಿ ಪದವೀಧರರು ಪ್ರೇರಣೆ ನೀಡುತ್ತಿದ್ದಾರೆ. ಇದರಲ್ಲಿ ರೈತರು ಅಸಹಾಯಕರಾಗಿ ಒಗ್ಗಿಕೊಳ್ಳಬೇಕಾದ ಸ್ಥಿತಿ ಇದೆ. ಕೃಷಿ ಸಂಪ್ರದಾಯವಾಗಿತ್ತು(ಅಗ್ರಿಕಲ್ಚರ್) ಈಗ ಅಗ್ರಿ ಬ್ಯುಸಿನೆಸ್ ಆಗಿ ಬದಲಾಗಿದೆ’ ಎಂದು ವಿಶ್ಲೇಷಿಸಿದರು.

‘ಗ್ರಾಹಕರು ವಿಷಮುಕ್ತ ಆಹಾರದ ಬಗ್ಗೆ ಬೇಡಿಕೆಯಿಡಬೇಕು. ದೇಶ, ವಿದೇಶಗಳು ಗುಣಮಟ್ಟದ ಆಹಾರಕ್ಕಾಗಿ ಎದುರು ನೋಡುತ್ತಿವೆ.  ನಮ್ಮ ರೈತರು ಮತ್ತು ಗ್ರಾಹಕರು ಇವುಗಳಲ್ಲಿ ಹಿಂದಿದ್ದಾರೆ. ಮಣ್ಣಿನ ಆರೋಗ್ಯವನ್ನು ಕಾಪಾಡಿದರೆ ಮಾತ್ರ ದೇಶದ ಆರೋಗ್ಯ ಹೆಚ್ಚುತ್ತದೆ’ ಎಂದರು.

ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ಮಾತನಾಡಿ, ‘ಬೇಸಾಯ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಬುತ್ತಿಕಟ್ಟು ಸಹಜ ಬೇಸಾಯೋತ್ಸವವನ್ನು ರೂಪಿಸಲಾಗಿದೆ. ಸಹಜ ಬೇಸಾಯ ಶಾಲೆಯ ಮೂಲಕ ಸಾಂಸ್ಕೃತಿಕ ಚಳವಳಿ ಮಾಡಲಾಗುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !