ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವಿಗೆ ಬರ | ಆಹಾರ ಅರಸಿ ಜಮೀನುಗಳಿಗೆ ಲಗ್ಗೆಯಿಡುವ ಕೃಷ್ಣಮೃಗಗಳು: ರೈತರು ಹೈರಾಣು

ಆಹಾರ ಅರಸಿ ಜಮೀನುಗಳಿಗೆ ಲಗ್ಗೆಯಿಡುವ ಕೃಷ್ಣಮೃಗಗಳು: ರೈತರು ಹೈರಾಣು
ಗಂಗಾಧರ್ ವಿ. ರೆಡ್ಡಿಹಳ್ಳಿ
Published 13 ಮೇ 2024, 5:46 IST
Last Updated 13 ಮೇ 2024, 5:46 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಹೋಬಳಿಯ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮದಲ್ಲಿ ಸರಿಯಾದ ಮೇವಿನ ಸೌಕರ್ಯವಿಲ್ಲದಿರುವ ಕಾರಣ ಕೃಷ್ಣಮೃಗಗಳು ಆಹಾರಕ್ಕಾಗಿ ಸುತ್ತಮುತ್ತಲಿನ ಜಮೀನುಗಳಿಗೆ ಲಗ್ಗೆಯಿಡುತ್ತಿವೆ. ಬೆಳೆಯು ಇಲ್ಲದೇ, ಅರಣ್ಯ ಇಲಾಖೆಯಿಂದ ಸರಿಯಾದ ಪರಿಹಾರವು ಇಲ್ಲದೇ ರೈತರು ಹೈರಾಣಾಗುತ್ತಿದ್ದಾರೆ.

ಕೃಷ್ಣಮೃಗ ವನ್ಯಧಾಮ ಸುಮಾರು 900 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿ ಅಪರೂಪದ ಕಷ್ಣಮೃಗಗಳ ಸಂತತಿ ಇರುವುದರಿಂದ ವನ್ಯಜೀವಿಪ್ರಿಯರನ್ನು ಆಕರ್ಷಿಸುತ್ತಿದೆ. ಆದರೆ ಪ್ರವಾಸಿತಾಣದಲ್ಲಿನ ಕೃಷ್ಣಮೃಗಗಳು ಹಾಗೂ ಜಿಂಕೆಗಳು ಆಹಾರ ಅರಸುತ್ತ ದೂರದ ಜಮೀನಗಳ ಕಡೆ ಮುಖಮಾಡಿವೆ.

ಹುಲ್ಲು ಮಳೆಗಾಲದಲ್ಲಿ ಚಿಗುರಿ, ಬೇಸಿಗೆಯಲ್ಲಿ ಒಣಗುವುದರಿಂದ ಮೇವಿಗೆ ತೀವ್ರ ಅಭಾವ ಸೃಷ್ಟಿಯಾಗಿ ಕೃಷ್ಣಮೃಗಗಳು ಆಹಾರ ಅರಸಿ ಇತರೆಡೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ರಸ್ತೆ ದಾಟುವಾಗ ವಾಹನಗಳಿಗೆ ಸಿಲುಕಿ ಅಪಘಾತಗಳಲ್ಲಿ ಸಾಯುತ್ತಿವೆ.

ನಾಲ್ಕೈದು ವರ್ಷಗಳ ಹಿಂದೆ ಜಿಂಕೆಗಳ ಮೇವಿಗೆಂದು ವನ್ಯಧಾಮದಲ್ಲಿ ಮೆಕ್ಕೆಜೋಳ, ತೊಗರಿ, ಹುರಳಿ, ಅಲಸಂದಿ ಗಿಡಗಳನ್ನು ಇಲಾಖೆಯಿಂದ ಬೆಳೆಸಿದ್ದರು. ಆದರೆ ಈಗ ನೀರಿನ ಸೌಕರ್ಯ ಬಿಟ್ಟು ಬೇರೆ ಯಾವುದೇ ರೀತಿಯ ಸೌಕರ್ಯ ಇಲ್ಲದಿರುವ ಕಾರಣ ಪ್ರಾಣಿಗಳ ಚದುರುವಿಕೆಗೆ ಕಾರಣವಾಗಿದೆ.

ವನ್ಯಧಾಮದ ಸುತ್ತಲು ರೈತರದ್ದು ಸಾವಿರಾರು ಎಕರೆಯಷ್ಟು ಜಮೀನಿದೆ. ಅದರಲ್ಲಿ ಬಹುತೇಕ ರೈತರು ಕೃಷ್ಣಮೃಗಗಳ ಹಾವಳಿಗೆ ಹೆದರಿ ಬೇಸಾಯ ಮಾಡದೆ ಖಾಲಿ ಜಾಗ ಬಿಟ್ಟಿದ್ದಾರೆ. ಹಾಗಾಗಿ ಸರ್ಕಾರ ರೈತರಿಂದ ಒಪ್ಪಿಗೆ ಪಡೆಯುವುದರ ಜೊತೆಗೆ ಅವರಿಗೆ ಸೂಕ್ತ ಪರಿಹಾರ ಹಣ ನೀಡಿ ಆ ಜಮೀನನ್ನು ಕೃಷ್ಣಮೃಗಗಳ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುತ್ತಾರ ಪರಿಸರ ಪ್ರಿಯರು.

ನೀಲಗಿರಿ ಗಿಡಗಳ ತೆರವಿಗೆ ಆಗ್ರಹ: ವನ್ಯಧಾಮದ ಬಹುತೇಕ ಕಡೆ ನೀಲಗಿರಿ ಗಿಡಗಳು ಬೆಳೆದಿವೆ. ಇವುಗಳಿಂದ ಪ್ರಾಣಿ-ಪಕ್ಷಿಗಳಿಗೆ ಅನುಕೂಲಕ್ಕಿಂತ ಅನಾನೂಕೂಲವೇ ಜಾಸ್ತಿ. ಇಲಾಖೆಯಿಂದ ನೀಲಗಿರಿ ಗಿಡಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತಹ ಹಣ್ಣಿನ ಹಾಗೂ ಮೇವಿನ ಗಿಡಗಳನ್ನು ಬೆಳೆಸಬೇಕು. ಇಲ್ಲಿ ಸಮಸ್ಯೆ ಎದುರಾದಾಗ ಮಾತ್ರ ಪರದಾಡುವ ಬದಲು ಸರ್ಕಾರಕ್ಕೆ ಮತ್ತು ರೈತರಿಗೆ ಅನುಕೂಲವಾಗುವಂತಹ ಶಾಶ್ವತ ಕಾರ್ಯ ಮಾಡಬೇಕು ಎಂದು ತಾಳಕೆರೆ ಗ್ರಾಮದ ರೈತ ನಾರಾಯಣಗೌಡ ಒತ್ತಾಯಿಸಿದ್ದಾರೆ.

ಕೃಷ್ಣಮೃಗಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿ
ಕೃಷ್ಣಮೃಗಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿ

ನಾಲ್ಕು ಕೆಲ ವರ್ಷಗಳ ಹಿಂದೆ ವನ್ಯಧಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿತ್ತು. ಸದ್ಯಕ್ಕೆ ಇಲಾಖೆಯಲ್ಲಿ ಯಾವುದೇ ಅನುದಾನ ಇಲ್ಲ. ಮೇವು ಅಭಿವೃದ್ಧಿ ಕಾಮಗಾರಿ ಹಾಗೂ ಕೃಷ್ಣಮೃಗಗಳ ರಕ್ಷಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು.

–ಎಚ್.ಎಂ. ಸುರೇಶ್ ವಲಯ ಅರಣ್ಯಾಧಿಕಾರಿ ಮಧುಗಿರಿ

ಅನುದಾನಕ್ಕೆ ಮನವಿ

ಕೃಷ್ಣಮೃಗ ಮತ್ತು ರೈತರನ್ನು ಉಳಿಸುವ ನಿಟ್ಟಿನಲ್ಲಿ ಹಿಂದೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಇಲ್ಲಿ ಮೇವು ಬೆಳೆಸುವ ಯೋಜನೆಗೆ ಅನುದಾನ ಕಲ್ಪಿಸುವ ಬಗ್ಗೆ ಚರ್ಚಿಸಿದ್ದೆವು. ಆದರೆ ಕಾರಣಾಂತರಗಳಿಂದ ಅದು ಜಾರಿಯಾಗಲಿಲ್ಲ. ಈಗ ಮತ್ತೊಮ್ಮೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾಡಿ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು.

–ಎ.ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಮಧುಗಿರಿ

ಮೇವಿನ ಬೀಜದ ಉಳುಮೆ ಅಗತ್ಯ

ಅರಣ್ಯ ಪಶು ಹಾಗೂ ಕೃಷಿ ಇಲಾಖೆಗಳ ಜೊತೆಗೂಡಿ ವನ್ಯಧಾಮದಲ್ಲಿ ಮೇವಿನ ಬೀಜಗಳನ್ನು ಉಳುಮೆ ಮಾಡಿದರೆ ಇದರಿಂದ ರೈತರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕಡಿಮೆ ಮಾಡಬಹುದು. ಬೆಳೆ ಇಡುವ ರೈತರಿಗೆ ಸರ್ಕಾರ ವಿಶೇಷ ಅನುದಾನದಿಂದ ಸೋಲಾರ್ ತಂತಿ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸುವುದರ ಜೊತೆಗೆ ಪರಿಹಾರವನ್ನು ಆಯಾ ವರ್ಷದಲ್ಲೇ ನೀಡಬೇಕು.

–ಇಂದಿರಾದೇನನಾಯ್ಕ್ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ತಿಪ್ಪಾಪುರ

ಬೇಕಿದೆ ಶಾಶ್ವತ ಪರಿಹಾರ

ಈ ಭಾಗದಲ್ಲಿನ ಕೃಷ್ಣಮೃಗಗಳು ಹಾಗೂ ನವಿಲುಗಳ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಒಂದೆಡೆ ರೈತರು ದುಬಾರಿ ಹಣ ನೀಡಿ ಕೊಳವೆಬಾವಿ ಕೊರೆಸುವುದರ ಜೊತೆಗೆ ಹಗಲಿರುಳು ಕಷ್ಟಪಡುತ್ತಾರೆ. ಆದರೂ ಬೆಳೆಗೆ ಬೆಂಬಲ ಬೆಲೆಯಿಲ್ಲ. ಸರ್ಕಾರ ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದರ ಜೊತೆಗೆ ಶಾಶ್ವತ ಪರಿಹಾರ ಹುಡುಕಬೇಕು.

– ಚಿಕ್ಕಣ್ಣ ಮತ್ತರಾಯನಹಳ್ಳಿ ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT