ಮಂಗಳವಾರ, ಅಕ್ಟೋಬರ್ 22, 2019
21 °C
ಅತ್ಯಾಚಾರದ ವಿರುದ್ಧ ಆಕ್ರೋಶ: ಕಠಿಣ ಶಿಕ್ಷೆಗೆ ಜನರ ಒತ್ತಾಯ

ಬಾಲೆಯ ಅವಸ್ಥೆಗೆ ಮರುಗಿದ ನಗರ

Published:
Updated:
Prajavani

ತುಮಕೂರು: ನಗರದಲ್ಲಿ ಬಾಲಕಿ ಮೇಲೆ ಇತ್ತೀಚೆಗೆ ನಡೆದ ಅತ್ಯಾಚಾರ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೂರಾರು ಜನರು ಪುಟ್ಟ ಕಂದಮ್ಮಳಿಗೆ ಬಂದು ಒದಗಿದ ಪರಿಸ್ಥಿತಿಗೆ ಮರುಗಿದರು.

ಯುನೈಟೆಡ್‌ ಮುಸ್ಲಿಂ ಮೈನಾರಿಟಿಸ್‌ ಅಸೋಸಿಯೇಷನ್‌ ಆಫ್‌ ತುಮಕೂರು (ಉಮ್ಮತ್‌) ಕರೆ ನೀಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನಗರದ ಪ್ರತಿ ಮೂಲೆಯಿಂದ ಬಂದಿದ್ದ ನೂರಾರು ಸಮಾನ ಮನಸ್ಕರು ಭಾಗವಹಿಸಿದ್ದರು.

ಲೈಂಗಿಕ ದೌರ್ಜನ್ಯದ ಹೀನ ಕೃತ್ಯ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಲವಾಗಿ ಒತ್ತಾಯಿಸಿದರು.

ಬಾಲಕಿಯ ಪೋಷಕರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಆರೋಪಿಗೆ ಯಾವುದೇ ರೀತಿಯ ಕರುಣೆ, ದಯೆ ತೋರದೆ ಕಾನೂನಿನ ಕಠಿಣ ಕ್ರಮ ಜರುಗಿಸಬೇಕು. ಆ ಶಿಕ್ಷೆಯು ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ಎಸಗದಂತೆ ನೀಚರಲ್ಲಿ ಭೀತಿ ಉಂಟು ಮಾಡುವಂತಿರಬೇಕು, ಎಚ್ಚರಿಕೆ ಸಂದೇಶವಾಗಿರಬೇಕು
ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉಮ್ಮತ್‌ ತುಮಕೂರು ಘಟಕದ ಅಧ್ಯಕ್ಷ ನಿಸಾರ್‌ ಅಹಮದ್‌, ಇಂತಹ ದುರ್ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆಯು ಕ್ರಮ ವಹಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ತಡೆ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಜ್ಯೋತಿಗಣೇಶ್‌, ಕೆಟ್ಟ ಕೆಲಸ ಮಾಡಿದವರು ಶಿಕ್ಷೆಯಿಂದ ತಪ್ಪಿಕೊಳ್ಳಲು ಸಾಧ್ಯವಿಲ್ಲ. ಅತ್ಯಾಚಾರಿಯ ವಿರುದ್ಧ ಕಾನೂನಿನ ಕ್ರಮ ಜರುಗಲಿದೆ ಎಂದು ಭರವಸೆ ನೀಡಿದರು. ಜತೆಗೆ ಸಂತ್ರಸ್ತ ಬಾಲಕಿಯ ಪೋಷಕರಿಗೆ ಸಮಾಧಾನ ಹೇಳಿದರು.

ಪ್ರತಿಭಟನಾಕಾರರಿಂದ ಮನವಿ ಪತ್ರ ಪಡೆದ ಜಿಲ್ಲಾಧಿಕಾರಿ ಕೆ.ರಾಕೇಶ್‌ ಕುಮಾರ್‌, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಿಲ್ಲೆಯಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಇಂತಹ ಪ್ರಕರಣಗಳ ಸಮರ್ಪಕ ವಿಚಾರಣೆಗೆ ಸಹಕರಿಸಿ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ಮಾಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಜಿಯಾ ಉಲ್ಲ, ಸೈಯದ್ ಬಹರುಹಾನುದ್ದೀನ್, ಮೊಹಮ್ಮದ್ ಆಸೀಫ್, ಸಿದ್ದೀಕ್ ಅಹಮದ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಂತ್ರಸ್ತೆಯ ಸಂಬಂಧಿಕರು ಭಾಗವಹಿಸಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)