ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ | ಸಂಪರ್ಕ ಕಾಲುವೆಗೆ ವಿರೋಧ: ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ

ರಸ್ತೆಗೆ ಅಡ್ಡಲಾಗಿ ಮಲಗಿದ ಪ್ರತಿಭಟನಕಾರರು
Published 19 ಮೇ 2024, 14:22 IST
Last Updated 19 ಮೇ 2024, 14:22 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಸುಂಕಾಪುರದ ಬಳಿಯಿಂದ ಸಂಪರ್ಕ ಕಾಲುವೆ ಮೂಲಕ ಹೇಮಾವತಿ ನೀರು ಹರಿಸಲು ಸಿಎಸ್‌ಪುರ ಹೋಬಳಿ ಹೊಸಹಳ್ಳಿ ಸಮೀಪ ಆನೇಕ ಲಾರಿಗಳಲ್ಲಿ ಬೃಹತ್ ಗಾತ್ರದ ಕೊಳಾಯಿಗಳನ್ನು ತಂದಿದ್ದು, ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.

ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಶಾಸಕ ಎಂ.ಟಿ. ಕೃಷ್ಣಪ್ಪ ಸ್ಥಳಕ್ಕೆ ಬಂದು ಪ್ರತಿಭಟನೆಯ ನೇತೃತ್ವವಹಿಸಿದರು. ಲಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.

ಸೊಗಡು ಶಿವಣ್ಣ ಮಾತನಾಡಿ, ಸಂಪರ್ಕ ಕಾಲುವೆ ಅವೈಜ್ಞಾನಿಕವಾಗಿದೆ ಎಂದು ಜಿಲ್ಲೆಯ ಸಚಿವರೇ ಒಪ್ಪಿಕೊಳ್ಳುತ್ತಾರೆ. ಸರ್ಕಾರ ಅವರ ಮಾತಿಗೂ ಮನ್ನಣೆ ನೀಡುತ್ತಿಲ್ಲ. ಕಾಮಗಾರಿ ನಿಲ್ಲಿಸುವಲ್ಲಿ ವಿಫಲವಾದರೆ ಸಚಿವರು ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ಬಾಹಿರವಾಗಿ ಕಾಮಗಾರಿ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆದಗ್ಯೂ ಕಾಮಗಾರಿ ಮುಂದುವರೆಸಿದಲ್ಲಿ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, 12 ಅಡಿಗಳಷ್ಟು ಎತ್ತರದ ಬೃಹತ್ ಕೊಳಾಯಿಗಳ ಮೂಲಕ ನೀರು ತೆಗೆದುಕೊಂಡು ಹೋದಲ್ಲಿ ಹೇಮಾವತಿ ನಾಲೆಯ 70ನೇ ಕಿ.ಮೀ. ನಿಂದ ಮುಂದಕ್ಕೆ ನೀರು ಹರಿಯಲು ಸಾಧ್ಯವಿಲ್ಲ. ಆದ್ದರಿಂದ ಜಿಲ್ಲೆಯ ಜನರ ಹಿತದೃಷ್ಟಿಯಿಂದ ರಾಜಕೀಯವನ್ನು ಬದಿಗೊತ್ತಿ ಎಲ್ಲ ಪಕ್ಷಗಳ ಶಾಸಕರು, ಮುಖಂಡರು ಕಾಮಗಾರಿ ತಡೆಯಲು ಮುಂದಾಗಬೇಕು ಎಂದರು.

ಈ ಕಾಮಗಾರಿಯಿಂದ ಗುಬ್ಬಿ ತಾಲ್ಲೂಕಿಗೆ ಹೆಚ್ಚಿನ ಅನ್ಯಾಯವಾಗುತ್ತಿರುವುದರಿಂದ ಶಾಸಕ ಎಸ್.ಆರ್. ಶ್ರೀನಿವಾಸ್ ಹೋರಾಟಕ್ಕೆ ಮುಂದಾಗಬೇಕು.
ಮಾತು ಕಡಿಮೆ ಮಾಡಿ ಕ್ಷೇತ್ರದ ಜನರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಮುಂದಾಗಲಿ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಧನ್ಯಕುಮಾರ್, ಮುಖಂಡರು ಪಾಲ್ಗೊಂಡಿದ್ದರು.

ಗುಬ್ಬಿ ತಾಲ್ಲೂಕಿನ ಹೊಸಹಳ್ಳಿ ಸಮೀಪ ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ ನಡೆಸಿದ ಸ್ಥಳೀಯರು
ಗುಬ್ಬಿ ತಾಲ್ಲೂಕಿನ ಹೊಸಹಳ್ಳಿ ಸಮೀಪ ಕೊಳಾಯಿ ತುಂಬಿದ್ದ ಲಾರಿ ತಡೆದು ಪ್ರತಿಭಟನೆ ನಡೆಸಿದ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT