ರೈಲ್ವೆ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ

7
ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಆರೋಗ್ಯ ತಪಾಸಣಾ ಶಿಬಿರ

ರೈಲ್ವೆ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ

Published:
Updated:
Deccan Herald

ತುಮಕೂರು: ‘ನಿಮ್ಮ ಓದು, ನಿಮಗೆ ಹಾಗೂ ಸಮಾಜದ ಅಭಿವೃದ್ಧಿಗೆ ಉಪಯೋಗವಾಗಲಿ. ಈ ದಿಸೆಯಲ್ಲಿ ಮುನ್ನಡೆಯಿರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆ ಭಾನುವರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ರೈಲ್ವೆ ಪ್ರಯಾಣಿಕರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ ಎಂದರು.

‘ಯಾವುದೇ ಸಮಸ್ಯೆ ಉಂಟಾದರೆ ಬೇರೆಯವರನ್ನು ದೂರುವ ಮೊದಲು ನಮ್ಮ ಪಾಲು ಅದರಲ್ಲಿ ಇದೆಯೇ ಎಂಬ ಬಗ್ಗೆ ಯೋಚಿಸಬೇಕು. ಸಮಸ್ಯೆ ಪರಿಹಾರಕ್ಕೆ ನಿಮ್ಮಿಂದ ಯಾವ ಕೆಲಸವಾಗುತ್ತದೆಯೋ ಅದನ್ನು ಮಾಡಿ. ನಂತರ ಆ ಸಮಸ್ಯೆ ಅದೇ ರೀತಿಯೇ ಇದ್ದರೆ ಆಗ ದೂಷಣೆ ಮಾಡಬೇಕು’ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ‘ವೇದಿಕೆಯ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಸಂಬಂಧಿಸಿದ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.

‘ಸೌಲಭ್ಯ ಒದಗಿಸುವುದು, ಅಭಿವೃದ್ಧಿ ಕೆಲಸ ಒಬ್ಬರಿಂದ ಆಗುವುದಲ್ಲ. ನಗರದ ಅಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

ತುಮಕೂರು–ರಾಯದುರ್ಗ ರೈಲ್ವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಆಂಧ್ರದಲ್ಲಿ ವೇಗವಾಗಿ ನಡೆಯುತ್ತಿದೆ. ಆದರೆ ಪಾವಗಡ, ಮಧುಗಿರಿ, ಕೊರಟಗೆರೆ ಭಾಗಗಳಲ್ಲಿ ವಿಳಂಬವಾಗುತ್ತಿದೆ ಎಂದು ವಿಷಾದಿಸಿದರು.

ವೇದಿಕೆ ಕಾರ್ಯದರ್ಶಿ ಕರಣಂ ರಮೇಶ್ ಮಾತನಾಡಿ, ‘ಯಾವುದೇ ಸಮಸ್ಯೆ ಆಗಲಿ ಪ್ರಯಾಣಿಕರಿಗೆ ಹಾಗೂ ಅಧಿಕಾರಿಗಳಿಗೆ ಆ ಬಗ್ಗೆ ಮನವರಿಕೆ ಮಾಡಿಕೊಟ್ಟು ಶಾಂತಿಯುತವಾಗಿ ಬಗೆಹರಿಸುವುದಕ್ಕಾಗಿ ವೇದಿಕೆ ಹುಟ್ಟು ಹಾಕಿದ್ದೇವೆ ಎಂದು ತಿಳಿಸಿದರು.

ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಪರಮೇಶ್, ನೇತ್ರ ತಜ್ಞ ಸುರೇಶ್, ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ರಮೇಶ್, ಕುಬೇರಪ್ಪ, ಭಾಗ್ಯಲಕ್ಷ್ಮಿ ನಾಗರಾಜ್, ಹೆಚ್ಚು ರೈಲ್ವೆ ಪ್ರಯಾಣ ಮಾಡಿರುವ ನಗರದ ಜಿ.ಲಕ್ಷ್ಮಿಪಾತಯ್ಯ, ಕೆ.ಜಿ.ನಾಗರಾಜಯ್ಯ ಹಾಗೂ ಪುಟ್ಟತಾಯಮ್ಮ ಮತ್ತು ವಿಶೇಷ ಸಾಧಕರಾದ ಎನ್.ಸಂಜನ್, ಬಿ.ಎಲ್.ಚೇತನಾ ಅವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕೆ.ಎಂ.ಸಿರಿ, ಜಿ.ಡಿ.ಪ್ರಶಾಂತ ಗೌಡ, ಜಯಂತ್ ಆರ್.ಸಂಪಿಗೆ, ಕೆ.ಮಂಜುನಾಥ್, ಹರಿಣಿಗೌಡ, ಜಿ.ಎಂ.ಲೀಶಾ, ಜಿ.ಪಾವನಾ, ಡಿ.ಎಸ್.ಮೌನಿಕಾ, ಭೂಮಿಕಾ, ಲಿಖಿತಾ ಆರ್.ಶೇಖರ್ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹರ್ಷಿತಾ, ಟಿ.ಎನ್.ಕುಸುಮಾ, ಎಂ.ಪವನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಉಚಿತ ತಪಾಸಣಾ ಶಿಬಿರದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಡೆಯಿತು. 150ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು.  15ಕ್ಕೂ ಹೆಚ್ಚು ಮಂದಿ ಸಿದ್ಧಗಂಗಾ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ರಕ್ತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !