ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿಯಾಗಿ ಸಾಗಿದ ಶ್ರೀರಾಮ ಸೇವಾ ಮಂಡಳಿ

ರಾಮನವಮಿ ಅಂಗವಾಗಿ 13ರಿಂದ ಹತ್ತು ದಿನ ವಿವಿಧ ಕಾರ್ಯಕ್ರಮ ಆಯೋಜನೆ
Last Updated 12 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಕುಣಿಗಲ್‌: ತಾಲ್ಲೂಕಿನ ಶ್ರೀರಾಮ ಸೇವಾ ಮಂಡಳಿ ರಾಮನವಮಿಯನ್ನು ಹಲವು ದಶಕಗಳಿಂದ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿಯೂಇದೇ 13ರಿಂದ 23ರವರೆಗೆ ಹತ್ತು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.

1950ರಲ್ಲಿ ಕೇವಲ ಬ್ರಾಹ್ಮಣ ಸಮುದಾಯದವರಿಂದ ಭಜನೆ ಮಾಡಲು ಪ್ರಾರಂಭವಾದ ಸಂಸ್ಥೆ 7 ದಶಕಗಳಲ್ಲಿ ಹೆಮ್ಮರವಾಗಿ ಬೆಳೆದು ಇಂದು ಸಮಾಜಮುಖಿಯಾಗಿ ಸೇವಾಕಾರ್ಯಗಳನ್ನು ವಿಸ್ತರಿಸಿ ತಾಲ್ಲೂಕಿನ ಜನತೆಯನ್ನು ಆಕರ್ಷಿಸಿರುವ ಸಂಸ್ಥೆಯಾಗಿದೆ.

ಪಟ್ಟಣದ ರಮಣಬ್ಲಾಕ್‌ನಲ್ಲಿ ಬ್ರಾಹ್ಮಣರ ಸಂಘ ಕ್ರಯಕ್ಕೆ ಪಡೆದ ಜಾಗದಲ್ಲಿ 1950ರಲ್ಲಿ ಸೊಸೈಟಿ ನಂಜಂಡಯ್ಯನವರು ಸ್ವಂತ ಖರ್ಚಿನಲ್ಲಿ ಭಜನಾ ಮಂದಿರ ನಿರ್ಮಿಸಿ ಕೊಟ್ಟರು. ಮಂದಿರದಲ್ಲಿ ಶ್ರೀರಾಮ ದೇವರ ಪಟಗಳನ್ನಿಟ್ಟು ದಿ.ಶ್ಯಾಮಣ್ಣನವರ ನೇತೃತ್ವದಲ್ಲಿ ಪ್ರತಿ ಶನಿವಾರ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಪಟ ಸಹಿತ ಮೆರವಣಿಗೆಯಲ್ಲಿ ತೆರಳುವುದರ ಮೂಲಕ ಪೂಜೆ ಭಜನೆ ನಡೆಯುತ್ತಿದ್ದವು.

ಶ್ಯಾಮಣ್ಣನವರ ನಂತರ ಕುಂಠಿತವಾಗಿದ್ದ ಸಂಸ್ಥೆಗೆ ಜೀವಕಳೆ ಬಂದಿದ್ದು 1964ರಲ್ಲಿ. ನೂತನವಾಗಿ ಶ್ರೀರಾಮ ಸೇವಾ ಮಂಡಳಿ, ಬ್ರಾಹ್ಮಣ ಸಂಘ ಅಸ್ಥಿತ್ವಕ್ಕೆ ಬಂದು, ಕೆ.ವಿ.ನಾರಾಯಣ ಶಾಸ್ತ್ರಿ ಮತ್ತು ಬಿ.ಎಸ್.ನಾಗೇಶ್ ರಾವ್ ಅಧ್ಯಕ್ಷರಾಗಿ, ಬಿ.ಎಸ್.ದೇವರಯ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಅಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ ನಾಲ್ಕಾಣೆ, ಎಂಟಾಣೆಗಳನ್ನು ಸಂಗ್ರಹಿಸಿ ಪೂಜಾ ಕಾರ್ಯವನ್ನು ನಡೆಸಿದ್ದು ಮರೆಯಲಾಗದ ದಿನಗಳೆಂದು ಬಿ.ಎಸ್.ದೇವರಯ್ಯ ಸ್ಮರಿಸಿದ್ದಾರೆ.

1983ರಲ್ಲಿ ಬಿದ್ದ ಮಳೆಯಿಂದಾಗಿ ಭಜನಾ ಮಂದಿರ ಶಿಥಿಲವಾದ ಕಾರಣ ನೀರು ಸೋರಿ ದೇವರ ಪಟಗಳು ನಾಶವಾಗಿದ್ದು, ಸುಮಾರು 6 ತಿಂಗಳು ಪೂಜಾ ಕಾರ್ಯಗಳು ಸ್ಥಗಿತಗೊಂಡವು. ನಂತರ ಕೆ.ವಿ.ಸೀತರಾಮಯ್ಯ, ಕಸ್ತೂರಿರಂಗಾಚಾರ್, ಹೇರೂರಿನ ಎಸ್.ಆರ್.ರಮೇಶ್, ದೇವರಯ್ಯನವರ ತಂಡ ಸಮಾನ ಮನಸ್ಕರೊಂದಿಗೆ ಸೇರಿ ರಾಮಮಂದಿರ ನಿರ್ಮಿಸಿದಾಗ, ಕಡೂರಿನ ಗುಂಡಪ್ಪನವರ ಪ್ರೇರಣೆಯಿಂದಾಗಿ ಸೀತಾರಾಮರ ವಿಗ್ರಹಗಳು, ರಾಮಬಾಣ ಹಂತದ ಕುಟುಂಬದವರಿಂದ ಪ್ರತಿಷ್ಠಾಪನೆಗೊಂಡು ಪೂಜಾಕಾರ್ಯಗಳು ಪ್ರಾರಂಭವಾದವು.

ಶ್ರೀರಾಮಸೇವಾ ಮಂಡಳಿಯ ಆಶ್ರಯದಲ್ಲಿ ಭಜನಾ ಮಂದಿರ ನಿರ್ಮಾಣವಾದ ನಂತರ ಪ್ರತಿ ತಿಂಗಳು ಸತ್ಯನಾರಾಯಣಪೂಜೆ, ಸಂಕಷ್ಟಹರ ಗಣಪತಿ ಪೂಜೆ, ಶ್ರೀರಾಮನವಮಿ, ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರ ಜಯಂತಿಗಳನ್ನು, ಸ್ವರ್ಣಗೌರಿ ಗಣಪತಿ ಹಬ್ಬ, ಶರನ್ನವರಾತ್ರಿ, ವೈಕುಂಠ ಏಕಾದಶಿ ಮತ್ತು ಪವಮಾನ ಜಯಂತಿಗಳನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ತಾಲ್ಲೂಕಿನಲ್ಲಿಯೇ ವಿಶೇಷವಾಗಿ ಶ್ರೀರಾಮನವಮಿ ಆಚರಿಸಿಕೊಂಡು ಬರುತ್ತಿರುವ ಏಕೈಕ ಮಂಡಳಿ ಹತ್ತು ದಿನಗಳ ಕಾಲ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಜತೆ ಶಾಲಾ ಮಕ್ಕಳ, ಉದಯೋನ್ಮುಖ ಕಲಾವಿದರ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿದೆ.

ಹಿರಿಯರ ಶ್ರಮದ ಫಲವಾಗಿ ಬೆಳೆದು ಬಂದಿರುವ ಶ್ರೀರಾಮ ಸೇವಾ ಮಂಡಳಿಯನ್ನು ಇನ್ನಷ್ಟು ಪ್ರವರ್ಧಮಾನಕ್ಕೆ ತರಲು ಕೆ.ಜನಾರ್ದನ್, ಎಚ್.ಸಿ.ಸುರೇಶ್, ಎಂ.ಎನ್.ವೇಣುಕುಮಾರ್, ಶ್ರೀನಿವಾಸ್, ಕೃಷ್ಣಪ್ರಸಾದ್, ನಾಗೇಶ್ ಶಾಸ್ತ್ರಿ, ನಾರಾಯಣ್ ಪ್ರಸಾದ್‌, ಜಯಂತಿ ಟಿ.ಕೆ, ಶಂಕರ್, ಡಿ.ಸತ್ಯನಾರಾಯಣ ಒಡೆಯರ್, ನಂಜಂಡಸ್ವಾಮಿ ತಂಡ ಶ್ರಮಿಸುತ್ತಿದ್ದು, ಜಾನಕಿ ಮಹಿಳಾ ಸಂಘ ಸಹ ಸಾಥ್ ನೀಡುತ್ತಿದೆ. ಸಾಮೂಹಿಕ ಉಪನಯನ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪ್ರಗತಿಗೆ ಸಹಕರಿಸುವ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಯುವಕರ ತಂಡ ಶವಸಂಸ್ಕಾರದ ಜವಾಬ್ದಾರಿ ಹೊತ್ತಿದ್ದು, ಬ್ರಾಹ್ಮಣರ ಸ್ಮಶಾನ ಅಭಿವೃದ್ಧಿಗೆ ಶ್ರಮಿಸಿದೆ.

ಶ್ರೀರಾಮ ಸೇವಾ ಮಂಡಳಿಯ ಪ್ರಗತಿಗೆ ಸಹಕರಿಸಿದವರಲ್ಲಿ ಕರ್ನೂಲ್ ಬಾಲಮುಕುಂದ ಅಗರ್ವಾಲ್, ಮುನಿನರಸಿಂಹಯ್ಯ, ಜೋಡಿದಾರ್ ಕೆ.ವೆಂಕಟೇಶಯ್ಯ ಮತ್ತು ವೆಂಕಟಲಕ್ಷಮ್ಮ ಮಕ್ಕಳಾದ ಕೆ.ವಿ.ಸುಬ್ಬಣ್ಣ, ಕೆ.ವಿ.ಕೃಷ್ಣಪ್ಪ ಮತ್ತು ಕೆ.ವಿ. ವೆಂಕಟರಾಮು ಪ್ರಮುಖರೆಂದು ದೇವರಯ್ಯ ಸ್ಮರಿಸುತ್ತಾರೆ.

ಮಂಡಳಿಯ ಪ್ರಮುಖರಾದ ವೇಣುಕುಮಾರ್ ಮಾತನಾಡಿ, ಶ್ರೀರಾಮ ಸೇವಾ ಮಂಡಳಿಯ ಕೋದಂಡರಾಮ ಸ್ವಾಮಿ ದೇವಾಲಯ ಬ್ರಾಹ್ಮಣ ಸಮುದಾಯಕ್ಕೆ ಮೀಸಲಾಗಿಲ್ಲ, ಸರ್ವ ಜನಾಂಗದ ಶಾಂತಿಯ ನೆಲೆಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಚಿಂತಿಸಿ ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT