ಸಮಸ್ಯೆಗಳಿಗೆ ಸ್ಪಂದಿಸಿ; ಅಧಿಕಾರಿಗಳಿಗೆ ಸೂಚನೆ

7
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಡಾ.ಆರ್.ವಿಶಾಲ್ ಹೇಳಿಕೆ

ಸಮಸ್ಯೆಗಳಿಗೆ ಸ್ಪಂದಿಸಿ; ಅಧಿಕಾರಿಗಳಿಗೆ ಸೂಚನೆ

Published:
Updated:

ತುಮಕೂರು: ದಲಿತ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳ ಸ್ಮಶಾನಕ್ಕೆ ಜಿಲ್ಲೆಯಲ್ಲಿ ಸ್ಥಳ ಇರುವ ಕಡೆ ಜಮೀನು ಮೀಸಲಿಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ತಿಳಿಸಿದರು.

ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಜಮೀನು ಮಂಜೂರಾಗಿ ಪಹಣಿಯಲ್ಲಿ ನಮೂದಾಗಿದ್ದರೆ ಅಂತಹ ರುದ್ರಭೂಮಿಗಳನ್ನು ಸರ್ವೆ ಮಾಡಿಸಿ, ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರರು ಅವುಗಳನ್ನು ನಿಗದಿಪಡಿಸಿ ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಜರಾಯಿ ಇಲಾಖೆಗಳ ದೇವಸ್ಥಾನಗಳಲ್ಲಿ ದಲಿತರು ಹಾಗೂ ಎಲ್ಲಾ ವರ್ಗದ ಜನರಿಗೂ ಪ್ರವೇಶವಿದೆ ಎನ್ನುವ ಸೂಚನಾ ಫಲಕವನ್ನು ಕಡ್ಡಾಯಯವಾಗಿ ಪ್ರದರ್ಶಿಸಬೇಕೆಂದು ಈಗಾಗಲೇ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗಿದೆ. ನಾಮಫಲಕ ಇಲ್ಲದ ಕಡೆ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಿದರು.

ದಲಿತ ಸಂಘಟನೆಗಳು ಗ್ರಾಮೀಣ ಪ್ರದೇಶದಲ್ಲಿರುವ ಕ್ಷೌರಿಕರು ಅಂಗಡಿಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶ ನೀಡದೆ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ದಲಿತರಿಗೆ ಅವಕಾಶ ನೀಡುವಂತೆ ಮೊದಲಿಗೆ ಅರಿವು ಮೂಡಿಸಿ, ಆ ನಂತರವೂ ತಪ್ಪೆಸಗಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಕಚೇರಿ ಸೇರಿದಂತೆ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈಗಾಗಲೇ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, 18500 ಅರ್ಜಿಗಳು ಬಂದಿವೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಗೊಳಿಸಿ, ಅಗತ್ಯವಿರುವ ಕಡೆ ನಿಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಿದ ಹಾಗೂ ನೇರ ಪಾವತಿ ಯೋಜನೆಯನ್ನು ತಂದಿರುವ ಜಿಲ್ಲಾಧಿಕಾರಿಗಳನ್ನು ದಲಿತ ಸಂಘಟನೆಗಳ ಮುಖಂಡರು ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, 2018ರ ಮಾರ್ಚ್‌ನಿಂದ  ಗ್ರಾಮ ಪಂಚಾಯತಿಗಳಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರದಿಂದ ನೇರವಾಗಿ ವೇತನ ಪಾವತಿಸಲಾಗುತ್ತಿದೆ. ಉಳಿದಂತೆ ಗ್ರಾಮ ಪಂಚಾಯತಿಯಿಂದ ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಂಡಿರುವ ಸಿಬ್ಬಂದಿಗಳಿಗೆ ಪಂಚಾಯಿತಿಯಿಂದ ವೇತನವನ್ನು ಮಾಡಲಾಗುತ್ತಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜ್, ಡಿವೈಎಸ್‌ಪಿ ನಾಗರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‌ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !