ರಸ್ತೆ ಬದಿ ಅಂಗಡಿ ತೆರವು

7

ರಸ್ತೆ ಬದಿ ಅಂಗಡಿ ತೆರವು

Published:
Updated:
ಸಂತೆ ಮೈದಾನದ ಬಳಿ ರಸ್ತೆ ಬದಿಯಲ್ಲಿ ಇಡಲಾಗಿದ್ದ ಅಂಗಡಿಗಳನ್ನು ಪಿಎಸ್ಐ ಬಿ.ಸಿ.ಮಂಜುನಾಥ್ ನೇತೃತ್ವದಲ್ಲಿ ಸೋಮವಾರ ತೆರವುಗೊಳಿಸಲಾಯಿತು

ಕೊರಟಗೆರೆ: ಪ್ರತಿ ಸೋಮವಾರ ನಡೆಯುವ ಸಂತೆಯಂದು ರಸ್ತೆ ಬದಿಯಲ್ಲಿ ಇಡಲಾಗುತ್ತಿದ್ದ ಅಂಗಡಿಗಳನ್ನು ಸಂತೆ ಮೈದಾನದಲ್ಲೆ ಕಡ್ಡಾಯವಾಗಿ ಇಡುವಂತೆ ಪಿಎಸ್ಐ ಬಿ.ಸಿ.ಮಂಜುನಾಥ್ ವರ್ತಕರಿಗೆ ತಿಳಿಸಿದರು.

ಸಂತೆ ಮೈದಾನದಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರೂ ಪ್ರತಿ ಸೋಮವಾರ ಮುಖ್ಯರಸ್ತೆಯಲ್ಲೆ ವರ್ತಕರು ತಮ್ಮ ಅಂಗಡಿಗಳನ್ನು ಇಡುತ್ತಿದ್ದರು. ಇದರಿಂದಾಗಿ ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು. ಇದರೊಂದಿಗೆ ಪ್ರತಿ ವಾರ ಒಂದಲ್ಲಾ ಒಂದು ಕಳವು ಪ್ರಕರಣಗಳು ಸಂತೆಯಲ್ಲಿ ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿ ರಸ್ತೆ ಬದಿಯಲ್ಲಿದ್ದ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆಯೇ ತೆರವುಗೊಳಿಸಿದರು.

ಸಂತೆಯಲ್ಲಿ ಎಲ್ಲ ತರದ ಅಂಗಡಿಗಳಿಗೆ ಸ್ಥಳಾವಕಾಶ ಇದ್ದರೂ ಕೆಲವು ವರ್ತಕರು ತಮ್ಮ ಅಂಗಡಿಗಳನ್ನು ರಸ್ತೆ ಬದಿಯಲ್ಲೆ ಇಡುತ್ತಿದ್ದಾರೆ. ಅಲ್ಲದೆ ಸಂತೆಗೆ ಬರುವ ಗ್ರಾಹಕರು ತಮ್ಮ ದ್ವಿಚಕ್ರವಾಹನಗಳನ್ನು ರಸ್ತೆ ಬದಿ ಎಲ್ಲೆಂದರಲ್ಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರು. ಇದರಿಂದಾಗಿ ಓಡಾಟಕ್ಕೆ ಬಹಳಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

‘ಸಂತೆಯಲ್ಲೆ ಎಲ್ಲ ಅಂಗಡಿಗಳನ್ನು ವ್ಯವಸ್ಥಿತವಾಗಿ ಇಡುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ಕಡೆ ಸಂತೆ ಒಳಗೆ ಪ್ರವೇಶ ಹಾಗೂ ಮತ್ತೊಂದು ಕಡೆ ಸಂತೆಯಿಂದ ಹೊರ ಬರುವ ದಾರಿ ಸೂಚಿಸಿರುವ ಕಾರಣ ಕಳವು ಪ್ರಕರಗಳು ನಡೆಯುವುದೂ ಕಡಿಮೆಯಾಗುತ್ತದೆ. ಜತೆಗೆ ದ್ವಿಚಕ್ರವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗ ಸೂಚಿಸಲಾಗಿದೆ. ಗ್ರಾಹಕರು ಹಾಗೂ ವರ್ತಕರು ಪ್ರತಿ ವಾರ ನಡೆಯುವ ಸಂತೆಯಲ್ಲಿ ಇದನ್ನು ಪಾಲಿಸುವ ಮೂಲಕ ಸಹಕರಿಸಬೇಕು’ ಎಂದು ಪಿಎಸ್ಐ ಬಿ.ಸಿ.ಮಂಜುನಾಥ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !