ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳು ಖಾಲಿ: ಎಲ್ಲೆಡೆ ಮೌನ

Last Updated 25 ಏಪ್ರಿಲ್ 2021, 5:00 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ನಿಯಂತ್ರಣ ಮಾರ್ಗಸೂಚಿ ನಿಯಮಗಳನ್ನು ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ಶನಿವಾರ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಹಾಲು, ತರಕಾರಿ, ದಿನಸಿ ಪದಾರ್ಥಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. 10 ಗಂಟೆ ನಂತರ ಲಾಕ್‌ಡೌನ್ ವಾತಾವರಣ ಕಂಡುಬಂತು. ಖಾಸಗಿ ಬಸ್‌ಗಳ ಮಾಲೀಕರು ಸ್ವಯಂಪ್ರೇರಿತವಾಗಿ ಬಸ್ ಸಂಚಾರ ನಿಲ್ಲಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇದ್ದರೂ, ಪ್ರಯಾಣಿಕರು ಅತ್ತ ಸುಳಿಯಲಿಲ್ಲ.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಸಂಚಾರ ಇರಲಿಲ್ಲ. ಜಿಲ್ಲೆಯ ಇತರ ನಗರ, ಪಟ್ಟಣ ಪ್ರದೇಶಗಳಲ್ಲೂ ಲಾಕ್‌ಡೌನ್ ವಾತಾವರಣ ಕಂಡು ಬಂತು. ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ವಾರಾಂತ್ಯದ ಕರ್ಫ್ಯೂ ಜಾರಿಮಾಡಿದ್ದು, ಜನರ ಓಡಾಟ ನಿರ್ಬಂ
ಧಿಸಲಾಗಿತ್ತು. ಬೆಳಿಗ್ಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡ ಜನರು ಮತ್ತೆ ಮನೆ ಸೇರಿಕೊಂಡರು. ದೊಡ್ಡದೊಡ್ಡ ಹೋಟೆಲ್‌ಗಳು ಬಂದ್ ಮಾಡಿದ್ದರೆ, ಸಣ್ಣಪುಟ್ಟ ಹೋಟೆಲ್‌ಗಳು ಜನರಿಗೆ ಆಹಾರ ಪೂರೈಸಿದವು. ಅಲ್ಲಲ್ಲಿ ಬೇಕರಿಗಳು ತೆರೆದಿದ್ದವು. ಜನರು ಪಾರ್ಸೆಲ್ ತೆಗೆ
ದುಕೊಂಡು ಮನೆಗಳತ್ತ ಹೆಜ್ಜೆ ಹಾಕಿದರು.

ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೆ, ಔಷಧಿ ಅಂಗಡಿಗಳು, ಪ್ರಯೋಗಾಲಯಗಳು, ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಕೊರೊನಾ ಸೋಂಕಿತರನ್ನು ಹೊರತುಪಡಿಸಿದರೆ ಇತರ ರೋಗಿಗಳು ಆಸ್ಪತ್ರೆಗಳತ್ತ ಸುಳಿಯಲಿಲ್ಲ. ಕ್ಲಿನಿಕ್‌ಗಳು, ಸಣ್ಣಪುಟ್ಟ ಆಸ್ಪತ್ರೆಗಳು ಸಹ ಕಾರ್ಯ ನಿರ್ವಹಿಸಲಿಲ್ಲ. ಸೋಂಕಿನ ಭಯದಿಂದ ಹಲವು ವೈದ್ಯರು ಈಗಾಗಲೇ ತಮ್ಮ ಕ್ಲಿನಿಕ್‌ಗಳನ್ನು ಮುಚ್ಚಿದ್ದಾರೆ. ಬೇರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ವೈದ್ಯರು ಹೇಳುತ್ತಾರೆ. ಇದರಿಂದಾಗಿ ರೋಗಿಗಳೂ ಆಸ್ಪತ್ರೆಗಳತ್ತ ಹೋಗುತ್ತಿಲ್ಲ.

ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಜನರೂ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದರು. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು, ಪ್ರತಿ ದಿನವೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಜನರೇ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಜೀವ ಉಳಿದರೆ ಸಾಕು. ಮುಂದಿನದನ್ನು ನೋಡಿಕೊಳ್ಳೊಣ ಎಂಬ ಎಚ್ಚರಿಕೆಯ ಭಾವನೆ ಮೂಡಿದೆ. ಹಾಗಾಗಿ ಲಾಕ್‌ಡೌನ್‌ಗೆ ಸ್ವಯಂ ಪ್ರೇರಿತರಾಗಿ ಸ್ಪಂದಿಸುತ್ತಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳದಲ್ಲಿ ಬೆಂಗಳೂರು ನಗರದ ನಂತರ ತುಮಕೂರು ಪ್ರಮುಖ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ಒಂದೆರಡು ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸಾವಿನ ಪ್ರಮಾಣವೂ ಅಷ್ಟೇ ವೇಗವಾಗಿ ಏರಿಕೆಯಾಗತೊಡಗಿದೆ. ಮೊದಲ ಅಲೆಯಲ್ಲಿ ವಯಸ್ಸಾದವರು, ಏನಾದರೂ ಆರೋಗ್ಯ ಸಮಸ್ಯೆ ಇದ್ದವರು ಸಾವನ್ನಪ್ಪುತ್ತಿದ್ದರು. ಆದರೆ ಈಗ ಮಧ್ಯ ವಯಸ್ಕರು, ಯುವ ಸಮೂಹವೂ ಮೃತಪಡುತ್ತಿರುವುದು ಜನರ ಭಯವನ್ನು ಹೆಚ್ಚಿಸಿದೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನವೊಂದಕ್ಕೆ 2 ಸಾವಿರದ ವರೆಗೂ ಏರಿಕೆಯಾಗುತ್ತಿದೆ. ಶುಕ್ರವಾರ ಒಂದೇ ದಿನ ನಾಲ್ವರು ಮಹಿಳೆಯರು ಮೃತಪಟ್ಟಿದ್ದರು. ಇದನ್ನು ಗಮನಿಸಿದ ಜನರು ಪ್ರಾಣ ರಕ್ಷಿಸಿಕೊಳ್ಳಲು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT