ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗೆ ₹ 50 ಕೋಟಿ

7
ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್ ನ ಪದಾಧಿಕಾರಿಗಳು, ಸಮನ್ವಯಾಧಿಕಾರಿಗಳ ಸಭೆಯಲ್ಲಿ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿಕೆ

ಸ್ಕೌಟ್ಸ್, ಗೈಡ್ಸ್ ಚಟುವಟಿಕೆಗೆ ₹ 50 ಕೋಟಿ

Published:
Updated:
Deccan Herald

ತುಮಕೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳಿಗೆ ಮತ್ತು ಮೂಲಸೌಕರ್ಯಕ್ಕೆ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ₹ 50 ಕೋಟಿ ನಿಗದಿಪಡಿಸಿದ್ದು, ₹ 5 ಕೋಟಿ ಬಿಡುಗಡೆ ಮಾಡಿದೆ ಎಂದು ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತುಮಕೂರು ಜಿಲ್ಲಾ ಘಟಕವು ಬುಧವಾರ ಸಂಸ್ಥೆಯ ಯೋಜನೆಗಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಸ್ಥಳೀಯ ಘಟಕಗಳ ಪದಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಪ್ರತಿ ಜಿಲ್ಲೆಯಲ್ಲಿ ತರಬೇತಿ ನೀಡಲು ತಲಾ ಒಂದು ಹುದ್ದೆ ಸೇರಿದಂತೆ ಎರಡು ಹುದ್ದೆ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಪ್ರತಿ 3 ತಿಂಗಳಿಗೊಮ್ಮೆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಕುರಿತು ಪ್ರಗತಿ ಸಭೆಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಅಳವಡಿಸಲು ಆದೇಶಿಸಿದೆ. ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ 250 ಅಧಿಕಾರಿಗಳನ್ನು ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆ ಪ್ರೇರೇಪಿಸಲು ಸಮನ್ವಯ ಅಧಿಕಾರಿಗಳನ್ನಾಗಿ (ನೋಡಲ್) ನೇಮಿಸಿದೆ. ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಈ ಅಧಿಕಾರಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯು ನೇಮಕಾತಿಯಲ್ಲಿ ಮೀಸಲಾತಿ ನೀಡಿದೆ. ರಾಜ್ಯ ಸರ್ಕಾರವು ಎಂಜಿನಿಯರಿಂಗ್ ಮತ್ತು ವೈದ್ಯಕೀಯ  ಕಾಲೇಜುಗಳಲ್ಲಿ ಅಲ್ಪ ಪ್ರಮಾಣದ ಸೀಟುಗಳನ್ನು ಕೊಡುತ್ತಿದೆ. ಹೆಚ್ಚು ಸೀಟುಗಳನ್ನು ಕೊಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಸಂಸ್ಥೆಯ ಸ್ಥಳೀಯ ಘಟಕಗಳೇ ರಾಜ್ಯ ಮತ್ತು ಕೇಂದ್ರ ಘಟಕದ ಬೆನ್ನು ಮೂಳೆ ಇದ್ದ ಹಾಗೆ. ಸಕ್ರಿಯವಾಗಿ ಕಾರ್ಯಚಟುವಟಿಕೆ ನಡೆಸಬೇಕು. ವಿಕೇಂದ್ರೀಕರಣ, ಪ್ರಜಾಪ್ರಭುತ್ವ ನಿಲುವು, ಪರಿಸರ ಕಾಳಜಿ, ಭಾತೃತ್ವ, ಸ್ವಚ್ಛತೆ, ಧೈರ್ಯ, ಕ್ರೀಡಾ ಮನೋಭಾವ, ಉತ್ಸಾಹಿ ವ್ಯಕ್ತಿತ್ವ, ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅರಿಯುವುದು ಸೇರಿ ಹಲವು ಆಶಯಗಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಹೊಂದಿದೆ. ದೇವರಲ್ಲಿ ನಂಬಿಕೆ ಇಡು ಎಂಬುದನ್ನೂ ಹೇಳುತ್ತದೆ. ಇವುಗಳನ್ನು ಹೆಚ್ಚು ತಿಳಿಸಿಕೊಡಬೇಕು ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳು ಬೇರೆಯವರಿಗಿಂತ ವಿಭಿನ್ನವಾಗಿ ವ್ಯಕ್ತಿತ್ವ ರೂಪಿಸಿಕೊಂಡಿರುತ್ತಾರೆ. ಸಿ.ಎನ್‌.ಆರ್ ರಾವ್, ನಾರಾಯಣಮೂರ್ತಿ, ಕಿರಣ್ ಮಜುಂದಾರ್ ಹೀಗೆ ಅನೇಕರೂ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಕೆಲಸ ಮಾಡಿ ಸ್ಫೂರ್ತಿ ಪಡೆದಿದ್ದಾರೆ ಎಂದು ವಿವರಿಸಿದರು.

ಬೆಂಗಳೂರಿನಲ್ಲಿ ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ಜಂಬೋ ಮೇಳ (ವರ್ಲ್ಡ್ ಜಂಬೋ ರೇಟ್) ಆಯೋಜಿಸುವ ಆಶಯವಿದ್ದು, ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಮನವಿ ಮಾಡಿದರು.

ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಷಾ, ಸ್ಕೌಟ್ಸ್ ಜಿಲ್ಲಾ ಆಯುಕ್ತರಾದ ಗೋಪಾಲಕೃಷ್ಣ, ಗೈಡ್ಸ್ ಜಿಲ್ಲಾ ಆಯುಕ್ತೆ ಸುಭಾಷಿಣಿ ರವೀಶ್, ಸ್ಕೌಟ್ಸ್ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರಭಟ್, ಗೈಡ್ಸ್ ಆಯುಕ್ತೆ ಮಂಜುಳಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಭಿವೃದ್ಧಿ ವಿಭಾಗದ ಡಿಡಿಪಿಐ ಭಾರತಿ, ಸಮನ್ವಯಾಧಿಕಾರಿ ಲೋಕೇಶ್ ವೇದಿಕೆಯಲ್ಲಿದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !