ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಜಿಲ್ಲೆಯಲ್ಲಿ ಪಶು ವೈದ್ಯರ ತೀವ್ರ ಕೊರತೆ

Last Updated 26 ಆಗಸ್ಟ್ 2021, 9:32 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ 250 ಪಶು ವೈದ್ಯಕೀಯ ಆಸ್ಪತ್ರೆ, ಸೇವಾ ಕೇಂದ್ರಗಳಿದ್ದು, 994 ಪಶು ವೈದ್ಯರ ಹುದ್ದೆಗಳಿವೆ. ಆದರೆ 540 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಅರ್ಧದಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಜಿ.ವಿ.ಜಯಣ್ಣ ಹೇಳಿದರು.

ಪಶುವೈದ್ಯಕೀಯ ಸಂಘ, ಪಶುಪಾಲನೆ ಇಲಾಖೆಯಿಂದ ಬುಧವಾರ ಏರ್ಪಡಿಸಿದ್ದ ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ’ ಹಾಗೂ ‘ಜಾನುವಾರುಗಳಲ್ಲಿ ಪೋಷಕಾಂಶ ಕೊರತೆ– ನಿರ್ವಹಣೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವೈದ್ಯರ ಕೊರತೆಯ ನಡುವೆಯೂ ಕೋವಿಡ್ ಸಮಯದಲ್ಲಿ ಪಶುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ’ದ ಅನ್ವಯ ಜಿಲ್ಲೆಗೊಂದು ಗೋಶಾಲೆ ತೆರೆಯಬೇಕಿದೆ. ಶಿರಾ ತಾಲ್ಲೂಕು ಚಿಕ್ಕಬಾಣಗೆರೆ ಬಳಿ 19 ಎಕರೆ ಜಮೀನು ಗುರುತಿಸಿದ್ದು, ಗೋ ಶಾಲೆ ತೆರೆಯಲು ಸೂಕ್ತವಾಗಿದೆ. ಶೀಘ್ರವಾಗಿ ಮಂಜೂರು ಮಾಡಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಶಿರಾ ತಾಲ್ಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕೆ ಅಗತ್ಯ ಸ್ಥಳಾವಕಾಶ ನೀಡುವುದು ಸೇರಿದಂತೆ ಇತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಶುವೈದ್ಯರು ಕಾಲಕಾಲಕ್ಕೆ ಹೊಸ ವಿಚಾರ, ವಿಧಾನಗಳನ್ನು ತಿಳಿಸಿಕೊಂಡು ಚಿಕಿತ್ಸೆ ನೀಡಬೇಕು. ಯಾವುದೇ ಕ್ಷೇತ್ರದಲ್ಲಿ ಇರಲಿ, ಪೂರಕ ಜ್ಞಾನ ಪಡೆದುಕೊಂಡು, ತಾಂತ್ರಿಕ ನೈಪುಣ್ಯತೆ ಸಾಧಿಸದಿದ್ದರೆ ಜನಮನ್ನಣೆ ಸಿಗುವುದಿಲ್ಲ’ ಎಂದು ಹೇಳಿದರು.

ಎಮ್ಮೆ ಸಾಕಿದ ಅನುಭವ: ‘ನಾನು ದ್ವಿತೀಯ ಪಿಯುಸಿವರೆಗೆ ಎಮ್ಮೆಗಳನ್ನು ಸಾಕಿದ್ದೇನೆ. ನಮ್ಮ ಅಜ್ಜಿ ಎಮ್ಮೆ, ದನ, ಕರು ಸಾಕಿದವರು ಎಂದಿಗೂ ಹಾಳಾಗುವುದಿಲ್ಲ ಎಂದು ಹೇಳುತ್ತಿದ್ದರು. ನನ್ನ ಪಾಲಿಗೆ ಅದು ನಿಜವಾಗಿದೆ. ಮನುಷ್ಯರ ವೈದ್ಯರು, ಪ್ರಾಣಿಗಳ ವೈದ್ಯರು ಎಂಬ ಕೀಳರಿಮೆ ಬೇಡ. ಪ್ರಾಣಿಗಳ ಸೇವೆ ಮಾಡುವುದು ಎಲ್ಲಕ್ಕಿಂತಲೂ ಶ್ರೇಷ್ಠ’ ಎಂದರು.

ಪಶುವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿ.ಸಿ.ರುದ್ರಪ್ರಸಾದ್, ‘ಜಿಲ್ಲೆಯಲ್ಲಿ 65 ಮಂದಿ ಪಶು ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದವರಿದ್ದಾರೆ. 6 ಜನ ಶಸ್ತ್ರ ಚಿಕಿತ್ಸಾ ನಿಪುಣರಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ತಾಂತ್ರಿಕ ವಿಚಾರ ಸಂಕಿರಣದ ಮೂಲಕ ಹೊಸ ಜ್ಞಾನವನ್ನು ಪಶು ವೈದ್ಯರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಜ್ಞಾನ ಹೆಚ್ಚಿಸಿಕೊಂಡ ಫಲವಾಗಿ ಅಸಾಧ್ಯವೆನಿಸುವ ಪ್ರಕರಣಗಳಲ್ಲಿ ತಮ್ಮ ಅನುಭವವನ್ನು ಬಳಸಿಕೊಂಡು ಶಸ್ತ್ರ ಚಿಕಿತ್ಸೆ ನಡೆಸಿ ಪಶುಗಳ ಜೀವ ರಕ್ಷಿಸಿದ್ದಾರೆ. ನಗರದ ಶಿರಾಗೇಟ್‍ನಲ್ಲಿ ಮೆಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ಸಿದ್ಧಗೊಂಡಿದ್ದು, ಉದ್ಘಾಟನೆಯಾದರೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಜೆ.ಪಂಪಾಪತಿ, ಹಿರಿಯ ಪಶುವೈದ್ಯಾಧಿಕಾರಿ ಡಾ.ಎಸ್.ಪಿ.ಮಂಜುನಾಥ್ ಉಪನ್ಯಾಸ ನೀಡಿದರು. ಪಶುವೈದ್ಯಕೀಯ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ್, ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್, ಜಂಟಿ ಕಾರ್ಯದರ್ಶಿ ಡಾ.ಮಹದೇವಯ್ಯ, ಖಜಾಂಚಿ ಡಾ.ಬಿ.ಆರ್.ನಂಜೇಗೌಡ, ಮಹಿಳಾ ಪ್ರತಿನಿಧಿ ಡಾ.ಎಚ್‌.ಶಶಿಕಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT