ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು

7

ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು

Published:
Updated:
Deccan Herald

ಪಾವಗಡ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ.

ಸರ್ಕಾರಿ ಆಸ್ಪತ್ರೆಯ ಮುಂಭಾಗ ರಸ್ತೆ ಕಾಮಗಾರಿ ನಡೆಸುವಾಗ ಚರಂಡಿ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಗುಟ್ಟಹಳ್ಳಿ ಸೇರಿದಂತೆ ನ್ಯಾಯಾಲಯದ ಹಿಂಬದಿಯ ಹಲ ಬಡಾವಣೆಗಳ ಕೊಳಚೆ ನೀರು ಅಂಬೇಡ್ಕರ್ ವೃತ್ತದ ಬಳಿ ರಸ್ತೆಗೆ ಹರಿಯುತ್ತಿದೆ. ಇದೇ ಸ್ಥಳದಲ್ಲಿ ಕೊಡಮಡುಗು, ಪೆನುಗೊಂಡ, ಕಡಮಲಕುಂಟೆಗೆ ಹೋಗುವವರು ಬಸ್ ಗಳಿಗಾಗಿ ಕಾಯುತ್ತಾರೆ. ಕೊಳಚೆ ನೀರು ನಿಲ್ಲುವುದರಿಂದ ಹಂದಿಗಳು, ಸೊಳ್ಳಗಳ ಕಾಟ ಹೆಚ್ಚಿದೆ ಎಂಬುದು ಸಾರ್ವಜನಿಕರ ಆರೋಪ.

ಸುಮಾರು ಅರ್ಧ ಕಿ.ಮೀ ದೂರದವರೆಗೆ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ವಾಹನ ಸವಾರರು ಕೊಳಚೆ ನೀರಿನಲ್ಲಿ ಸಂಚರಿಸುವಾಗ ಕೊಳಚೆ ನೀರು ಪಾದಾಚಾರಿಗಳಿಗೆ ಸಿಡಿಯುತ್ತದೆ. ರಸ್ತೆ ಬದಿಯ ಅಂಗಡಿಯವರ ಸ್ಥಿತಿ ಹೇಳ ತೀರದು.

ಕೊಳಚೆ ನೀರಿನಿಂದ ಉತ್ಪತ್ತಿಯಾಗುವ ದುರ್ವಾಸನೆಯಿಂದ ಈ ಪ್ರದೇಶದಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗ್ಗೆ ಪುರಸಭೆ ಅಧಿಕಾರಿಗಳು, ಪಿ.ಡಬ್ಲ್ಯೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪಿ.ಡಬ್ಲ್ಯೂ ಕಚೇರಿ ಮುಂದೆ ಹಲ ತಿಂಗಳಿನಿಂದ ಚರಂಡಿ ನೀರು ಹರಿಯುತ್ತಿದ್ದರೂ ಅವರೂ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸದಿರುವುದು ವಿಪರ್ಯಾಸ ಎಂದು ಕಡಮಲಕುಂಟೆ ರಾಮಾಂಜಿನಪ್ಪ ಬೇಸರ ವ್ಯಕ್ತಪಡಿಸಿದರು.

ಆದರ್ಶ ವಿದ್ಯಾಲಯ, ಗುರುಭವನ, ತಾಲ್ಲೂಕು ಪಂಚಾಯಿತಿ ಕಚೇರಿಗೆ ಇದೇ ರಸ್ತೆಯ ಮೂಲಕ ಹೋಗಬೇಕು. ನಿತ್ಯ ಮೂಗು ಮುಚ್ಚಿಕೊಂಡು ರಸ್ತೆ ದಾಟಬೇಕಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಚರಂಡಿ ನೀರನ್ನು ತುಳಿದುಕೊಂಡೇ ಶಾಲೆಗೆ ಹೋಗಬೇಕು. ನಿದ್ರಾವಸ್ಥೆಯಲ್ಲಿರುವ ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಎಂದು ದಿನೇಶ್ ಕುಮಾರ್ ಒತ್ತಾಯಿಸಿದರು.

ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, ಕೆ ಷಿಪ್ ಅಧಿಕಾರಿಗಳಿಗೆ ಚರಂಡಿ ಕಾಮಗಾರಿ ಪೂರ್ಣಗೊಳಿಸುವತ್ತ ಹಲ ಬಾರಿ ಪತ್ರ ಬರೆಯಲಾಗಿದೆ. ಅವರು ಸ್ಪಂದಿಸಿಲ್ಲ. ಪುರಸಭೆ ಅನುದಾನದಲ್ಲಿಯೇ ವಾರದೊಳಗಾಗಿ ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !