ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಮಹೋತ್ಸವ

Published 23 ಏಪ್ರಿಲ್ 2023, 18:50 IST
Last Updated 23 ಏಪ್ರಿಲ್ 2023, 18:50 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಶಿವಸಿದ್ದೇಶ್ವರ ಸ್ವಾಮೀಜಿ (ಮನೋಜ್‌ ಕುಮಾರ್) ಪಟ್ಟಾಧಿಕಾರ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನೆರವೇರಿತು.

ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖಾ ಮಠಗಳಾದ ಮಾಗಡಿ ತಾಲ್ಲೂಕಿನ ಕಂಚುಗಲ್‌ ಬಂಡೆ ಮಠಕ್ಕೆ ಮಹಾಲಿಂಗ ಸ್ವಾಮೀಜಿ (ಕೆ.ಎಂ.ಹರ್ಷ), ದೇವನಹಳ್ಳಿಯ ಬಸವಕಲ್ಯಾಣ ಮಠದ ಸದಾಶಿವ ಸ್ವಾಮೀಜಿ (ಗೌರೀಶ್ ಕುಮಾರ್‌) ಉತ್ತರಾಧಿಕಾರಿಗಳಾಗಿ ಪಟ್ಟಾಧಿಕಾರ ಮಾಡಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಟ್ಟಾಧಿಕಾರ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸಿದ್ದರು.

ಬೆಳಗಿನ ಜಾವದಲ್ಲಿಯೇ ಮಂಗಳ ಸ್ನಾನ, ಶಿವಪೂಜೆ, ಮಂತ್ರೋಪದೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ತಳಿರು ತೋರಣಗಳಿಂದ ಮಠವನ್ನು ಅಲಂಕರಿಸಲಾಗಿತ್ತು. ಮಠದ ಆವರಣದಲ್ಲಿರುವ ಶಿವಕುಮಾರ ಸ್ವಾಮೀಜಿ ಗದ್ದುಗೆಯನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.

ಸನ್ಯಾಸ ದೀಕ್ಷೆಯ ನಂತರ ಮೂವರೂ ಉತ್ತಾರಾಧಿಕಾರಿಗಳು ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ನೂತನ ಸ್ವಾಮೀಜಿಗಳ ತಂದೆ– ತಾಯಿಯನ್ನು ಮಠದ ವತಿಯಿಂದ ಗೌರವಿಸಲಾಯಿತು.

‘ಶಿವಕುಮಾರ ಸ್ವಾಮೀಜಿ ಆಶಯ, ಆಶೀರ್ವಾದದಿಂದ ಮಠ ನಡೆಯುತ್ತಿದೆ. ನಾನು ಯಾವತ್ತೂ ಅಧಿಕಾರ‌, ಕುರ್ಚಿಗಾಗಿ ಆಸೆ ಪಟ್ಟವನಲ್ಲ. ಪಡುವವನೂ ಅಲ್ಲ. ನೂತನ ಉತ್ತರಾಧಿಕಾರಿ ನೇಮಕದಿಂದ ನನ್ನ ಕೆಲಸ ಕಡಿಮೆ ಆಗಬಹುದು’ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‘ಕಾವಿ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಸ್ವಾಮಿಯಲ್ಲ. ನಾನು ಕೂಡ ಪರಿಪೂರ್ಣನಲ್ಲ. ಕಲಿತುಕೊಳ್ಳುವುದು ತುಂಬಾ ಇದೆ. ಮಠದ ದೊಡ್ಡ ಶಕ್ತಿ ಪೂಜಾ ನಿಷ್ಠೆ. ಏನೇ ಕಷ್ಟ ಬಂದರೂ ಪೂಜೆ ಮಾಡಿದರೆ ಕಳೆದು ಹೋಗುತ್ತದೆ ಎಂದು ಪೂಜ್ಯರು ಹೇಳುತ್ತಿದ್ದರು’ ಎಂದು ನೆನಪಿಸಿಕೊಂಡರು.

‘ಕಾಯಾ, ವಾಚಾ, ಮನಸಾ ಶುದ್ಧ ಜೀವಿಯಾಗಿ ಕೆಲಸ ಮಾಡುತ್ತೇನೆ. ಸಮಾಜ ಸೇವೆಯಲ್ಲಿ ಸಮರ್ಪಿಸಿಕೊಳ್ಳುತ್ತೇನೆ. ಮಠದ ಅಲಿಖಿತ ಸಂವಿಧಾನಕ್ಕೆ ಬದ್ಧನಾಗಿ ಇರುತ್ತೇನೆ. ಅದರಂತೆ ನಡೆದುಕೊಳ್ಳುತ್ತೇನೆ’ ಎಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT