ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಬೆವರು ಅತ್ಯಂತ ಶ್ರೇಷ್ಠ: ಸಿದ್ಧಲಿಂಗ ಸ್ವಾಮೀಜಿ

Published 3 ಅಕ್ಟೋಬರ್ 2023, 13:28 IST
Last Updated 3 ಅಕ್ಟೋಬರ್ 2023, 13:28 IST
ಅಕ್ಷರ ಗಾತ್ರ

ತುಮಕೂರು: ಅನ್ನ ನೀಡುವ ರೈತರ ಬದುಕು ತುಂಬಾ ಪವಿತ್ರ. ರೈತರ ಬೆವರಿನ ನೀರು ಯಾವುದೇ ನೀರಿಗಿಂತ ಶ್ರೇಷ್ಠವಾದದ್ದು. ಅಂತಹ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ, ಸುಭಾಷ್ ಪಾಳೆಕರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ’ ಹಾಗೂ ರೈತರಿಗೆ ನಾಟಿ ಗೋವುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾಗುತ್ತಿದೆ. ಗೋವಿನ ಸಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸುವುದು ಕಡಿಮೆಯಾಗಿದೆ. ರಾಸಾಯನಿಕ ಗೊಬ್ಬರವನ್ನು ಭೂಮಿಗೆ ಹಾಕಿ ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದ್ದಾರೆ. ಇದರಿಂದ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಅಹಾರ ಸೇವನೆಯಿಂದ ಕಾಯಿಲೆಗಳನ್ನು ತಂದುಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದರು.

ರೈತರು ನಾಟಿ ಹಸು ಸಾಕಾಣಿಕೆ ಮಾಡಿ, ಅವುಗಳ ಗೊಬ್ಬರ ಬಳಸಿ ವ್ಯವಸಾಯ ಮಾಡುವ ಪದ್ಧತಿ ಮತ್ತೆ ಆರಂಭವಾಗಬೇಕು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರು.

ಸಂಸದ ಜಿ.ಎಸ್.ಬಸವರಾಜು, ‘ಲಾಭದಾಯಕ ಅಲ್ಲವೆಂದು ಕೃಷಿಯನ್ನು ನಿರ್ಲಕ್ಷ್ಯಿಸುವ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ರೈತರಲ್ಲಿ ಆತ್ಮವಿಶ್ವಾಸ ತುಂಬಿ, ಕೃಷಿ ಲಾಭದಾಯಕವಾಗುವಂತೆ ಮಾಡುವ ವ್ಯವಸ್ಥೆ ರೂಪಿಸಬೇಕಿದೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ, ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಬೇಕು’ ಎಂದು ಸಲಹೆ ಮಾಡಿದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ‘ದೇಶೀಯ ಗೋವು ರಕ್ಷಿಸಲು, ಸಾವಯವ ಕೃಷಿ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ‘ನಾಟಿ ಗೋವುಗಳ ಸಂತತಿ ಕಡಿಮೆಯಗುತ್ತಿದೆ. ಅಂತಹ ಸಂತತಿ ಉಳಿಸಿ ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ವಿದ್ಯಾ, ಸತ್ಯಮಂಗಲ ಜಗದೀಶ್, ವಿಜಯಕುಮಾರ್, ಸಿದ್ಧರಾಮಣ್ಣ ಮೊದಲಾದವರು ಪಾಲ್ಗೊಂಡಿದ್ದರು. ಸಂಪನ್ಮೂಲ ವ್ಯಕ್ತಿ ಪ್ರಸನ್ನಮೂರ್ತಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈತರಿಗೆ 101 ನಾಟಿ ಗೋವುಗಳನ್ನು ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT