ಗುರುವಾರ , ಮಾರ್ಚ್ 4, 2021
29 °C
ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ 10ನೇ ವರ್ಷದ ಪದವಿ ಪ್ರದಾನ ಸಮಾರಂಭ

ಎಸ್‌ಐಟಿ ಟಾಪರ್‌ಗೆ ಅಮೆರಿಕದಲ್ಲಿ ಓದುವ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಅಲ್ಲಿ ಸೇರಿದ್ದ ವಿದ್ಯಾರ್ಥಿ ಸಮೂಹದಲ್ಲಿ ಹರ್ಷ ಮನೆಮಾಡಿತ್ತು. ಆಪ್ತ ಬಳಗವನ್ನು ಅಗಲುತ್ತಿರುವ ನೋವಿನ ಎಳೆಯು ಕಾಣುತ್ತಿತ್ತು. ತಮ್ಮ ವಿಭಾಗದ ಹೆಸರು ಕೂಗಿದಾಗ, ಗೆಳೆಯ–ಗೆಳತಿಯರು ವೇದಿಕೆ ಮೇಲೆ ಪದಕಗಳನ್ನು ಸ್ವೀಕರಿಸಿದಾಗ ಅವರ ಹರ್ಷೋದ್ಗಾರದ ಕೇಕೆ ಮುಗಿಲು ಮುಟ್ಟುತ್ತಿತ್ತು.

ಈ ಎಲ್ಲ ಸನ್ನಿವೇಶಗಳು ಕಂಡಿದ್ದು ಭಾನುವಾರ ಆಯೋಜಿಸಿದ್ದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ 10ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ.

ವಿವಿಧ ಕೋರ್ಸ್‌ಗಳ ಅಧ್ಯಯನ ಪೂರೈಸಿ ಶೈಕ್ಷಣಿಕ ಸಾಧನೆ ಮಾಡಿದ 34 ವಿದ್ಯಾರ್ಥಿಗಳು ಬಂಗಾರದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಅದರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಎಸ್‌.ವಿಶಾಲ್‌ ಅವರು 7 ಚಿನ್ನದ ಪದಕಗಳೊಂದಿಗೆ ಸಂಸ್ಥೆಯ ಟಾಪರ್‌ ಸ್ಥಾನದ ಸನ್ಮಾನಕ್ಕೆ ಭಾಜನರಾದರು.

ಬಿ.ಇ. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಆರ್‌.ಕನ್ನಿಕಾ ಹಾಗೂ ಕೆಮಿಕಲ್‌ ಎಂಜಿನಿಯರಿಂಗ್‌ನ ಪಿ.ಬಿ.ಸುಶ್ರುತಾ ಅವರು ತಲಾ 6 ಚಿನ್ನದ ಪದಕಗಳನ್ನು ಬಾಚಿಕೊಂಡರು. ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ನ ಯು.ಪವಿತ್ರಾ ಅವರ ಶ್ರಮಕ್ಕೂ 5 ಪದಕಗಳು ದಕ್ಕಿದವು.

ಅಮೆರಿಕದ ಟೆಕ್ಸಾಸ್‌, ಮಿಚಿಗನ್‌ ವಿ.ವಿ.ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಬಯಕೆಯಿದೆ. ಆ ಅವಕಾಶ ಗಿಟ್ಟಿಸಲು ಐಐಎಸ್ಸಿ ಸಂಸ್ಥೆಯ ಸಹಕಾರದೊಂದಿಗೆ ಸಂಶೋಧನಾ ವಿಷಯ ಮಂಡಿಸುತ್ತಿದ್ದೇನೆ ಎಂದು 7 ಚಿನ್ನದ ಗಳಿಸಿದ ಎಸ್‌.ವಿಶಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮೈಕ್ರೊ ಎಲೆಕ್ಟ್ರಾನಿಕ್ಸ್‌ ಡಿವೈಸೆಸ್‌ ಆ್ಯಂಡ್‌ ಕಂಪ್ಯೂಟೆಷನಲ್‌ ಸಿಸ್ಟಮ್ಸ್‌ ವಿಭಾಗದ ಪ್ರಧಾನ ನಿರ್ದೇಶಕ ಸುಧೀರ್‌ ಕಾಮತ್‌, ಪದವಿ ಪಡೆಯುವುದು ವಿದ್ಯಾರ್ಥಿ ಜೀವನದ ಮೈಲಿಗಲ್ಲು. ಮುಂದೆ ಉದ್ಯೋಗಿಗಳಾಗಿ, ಉದ್ಯಮಿಗಳಾಗಿ, ಜಬಾಬ್ದಾರಿಯುತ ನಾಗಕರಿಕರಾಗಿ ಶಕ್ತಿಯುತ ರಾಷ್ಟ್ರ ಕಟ್ಟುವ ಹೊಣೆ ನಿಮ್ಮದು’ ಎಂದು ಹೇಳಿದರು.

ಬಾಹ್ಯಕಾಶ ಕ್ಷೇತ್ರ ಅಥವಾ ರಕ್ಷಣಾ ಇಲಾಖೆಯ ಪ್ರತಿಯೊಂದು ಯೋಜನೆ ಸಫಲವಾಗಲು ಸಿವಿಲ್‌, ಸ್ಟ್ರಕ್ಚರಲ್‌, ಥರ್ಮಲ್‌, ಮೆಕ್ಯಾನಿಕಲ್‌ ಎಂಜಿನಿಯರ್‌ಗಳೆಲ್ಲದರ ಸಹಭಾಗಿತ್ವ ಬೇಕು. ಎಲ್ಲ ಎಂಜಿನಿಯರ್ ಕ್ಷೇತ್ರಗಳಿಗೂ ಆದ್ಯತೆ ಇದೆ. ಅವಕಾಶಗಳು ಇವೆ ಎಂದು ತಿಳಿಸಿದರು.

ಶುರುವಾಗಿದೆ ಅಂತರಿಕ್ಷ ಯುದ್ಧ: 18ನೇ ಶತಮಾನದ ವರೆಗೂ ನೆಲದ ಮೇಲಿನ ಯುದ್ದವೇ ಪ್ರಧಾನವಾಗಿತ್ತು. ತದನಂತರ ನೌಕಾಸೇನೆ, ವಾಯುಸೇನೆಗಳ ಬಲ ಹೆಚ್ಚಿಸಿಕೊಳ್ಳಲು ದೇಶಗಳು ಮುಂದಾದವು. ಮೊದಲ ಮಹಾಯುದ್ಧದಲ್ಲಿ ವಾಯುಸೇನೆಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ರೆಡಾರ್ ತಂತ್ರಜ್ಞಾನ ಶೋಧನೆ ಬಳಿಕ ವಾಯುಸೇನೆ ಮತ್ತಷ್ಟು ಬಲಗೊಳ್ಳತೊಡಗಿತು ಎಂದು ಸುಧೀರ್‌ ಕಾಮತ್‌ ತಿಳಿಸಿದರು.

ಈಗ ನೆಲ, ಜಲ, ಆಗಸದಲ್ಲಿನ ಯುದ್ಧದೊಂದಿಗೆ ಆಂತರಿಕ ಸಂಘರ್ಷಗಳು ಹೆಚ್ಚುತ್ತಿವೆ. ಅದರಲ್ಲಿ ಭಯೋತ್ಪಾದನೆ, ಅಕ್ರಮ ನುಸುಳುಕೋರರ ಸಮಸ್ಯೆಗಳು ಸೇರಿವೆ. ಅದನ್ನು ಸದೆ ಬಡಿಯಲು ಸೇನೆಯೊಂದಿಗೆ ಅರೆಸೇನಾ ಪಡೆಗಳು ಸಹ ಕೈ ಜೋಡಿಸುತ್ತಿವೆ ಎಂದರು ಹೇಳಿದರು.

ಇತ್ತೀಚೆಗೆ ಅಂತರಿಕ್ಷ ಯುದ್ಧವೂ ಶುರುವಾಗಿದೆ. ಮಾಹಿತಿ ತಂತ್ರಜ್ಞಾನದಿಂದ ‘ಸೈಬರ್‌ ವಾರ್‌’ ಸಾರಲಾಗುತ್ತಿದೆ. ಇದು ರಾಷ್ಟ್ರವನ್ನು ಗುಪ್ತವಾಗಿಯೇ ಮುಗಿಸಿ, ದೊಡ್ಡ ನಷ್ಟ ಉಂಟು ಮಾಡುತ್ತದೆ. ಅದನ್ನು ಎದುರಿಸಲು ನಮ್ಮ ದೇಶದ ಇಸ್ರೊ, ಡಿಆರ್‌ಡಿಒ ಶ್ರಮಿಸುತ್ತಿವೆ ಎಂದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ವೃತ್ತಿ ಬದುಕಿನ ದೊಡ್ಡ ಪ್ರಯಾಣ ನಿಮ್ಮ ಮುಂದಿದೆ. ಹಣ ಗಳಿಕೆಯೇ ಸಾಧನೆಯಲ್ಲ. ನೈತಿಕ ಜೀವನ ನಡೆಸುತ್ತ ಉತ್ತಮ ಪ್ರಜೆಗಳಾಗಿ ಬಾಳಿ. ಕೊನೆಯವರೆಗೂ ಕಲಿಯುತ್ತಲೇ ಇರಿ. ಮೂಢನಂಬಿಕೆಗಳನ್ನು ತಿರಸ್ಕರಿಸಿ, ನಮ್ಮ ಸಂಸ್ಥೆಯ ರಾಯಭಾರಿಗಳಾಗಿ ವೈಜ್ಞಾನಿಕ ಮನೋಭಾವವನ್ನು ಎಲ್ಲಡೆಯೂ ಹರಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಎಸ್‌ಐಟಿ ಸಿಇಒ ಶಿವಕುಮಾರಯ್ಯ, ನಿರ್ದೇಶಕ ಎಂ.ಎನ್‌.ಚನ್ನಬಸಪ್ಪ, ಕಾರ್ಯದರ್ಶಿ ಟಿ.ಕೆ.ನಂಜುಡಪ್ಪ ಇದ್ದರು.

*

ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್‌ ಅಧಿಕಾರಿಯಾಗುವ ಗುರಿಯಿದೆ. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಹೋಗಲು ತಯಾರಿ ನಡೆಸಿದ್ದೇನೆ.

ಆರ್‌.ಕನ್ನಿಕಾ, ಬಿ.ಇ., 6 ಚಿನ್ನದ ಪದಕ

*

ಸಿಮನ್ಸ್‌ ಸಾಫ್ಟವೇರ್‌ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಜಿಎಟಿಇ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ. ಸಂಶೋಧನಾ ರಂಗದಲ್ಲಿ ಬೆಳೆಯಬೇಕೆಂಬ ಗುರಿಯಿದೆ.

ಯು.ಪವಿತ್ರಾ, ಬಿ.ಇ., 6 ಚಿನ್ನದ ಪದಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.