ಶನಿವಾರ, ಸೆಪ್ಟೆಂಬರ್ 25, 2021
22 °C
ಇಂಗ್ಲಿಷ್‌ ಮಾಧ್ಯಮ ಆರಂಭಿಸಲು ಎಸ್‌ಡಿಎಂಸಿ ಮನವಿ

ಸ್ಮಾರ್ಟ್‌ ತರಗತಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ 7ನೇ ವಾರ್ಡ್‍ನ ಅಗ್ರಹಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸದಾಗಿ ನಿರ್ಮಿಸಲಾಗಿರುವ ಸ್ಮಾರ್ಟ್ ಕ್ಲಾಸ್ ತರಗತಿ ಕೊಠಡಿ ಹಾಗೂ ಎರಡು ಕಟ್ಟಡಗಳನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸಿದರು.

ಸರ್ಕಾರದಿಂದಲೇ ಎಲ್ಲ ಸೌಲಭ್ಯಗಳನ್ನು ಒದಗಿಸಲು ಆಗುವುದಿಲ್ಲ. ಪೋಷಕರು ಹಾಗೂ ಎಸ್‍ಡಿಎಂಸಿ ಸಮಿತಿ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳು ಕೈಜೋಡಿಸಿದರೆ ಶಾಲೆ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.

4ನೇ ವಾರ್ಡ್, 7ನೇ ವಾರ್ಡ್ ಹಾಗೂ ದಿಬ್ಬೂರು ಭಾಗದ ವಿದ್ಯಾರ್ಥಿಗಳಿಗೆ ಈ ಶಾಲೆಯೇ ಕೇಂದ್ರವಾಗಿದೆ. ಎಲ್ಲರೂ ಒಂದಾಗಿ ಈ ವಿದ್ಯಾಕೇಂದ್ರವನ್ನು ಮಾದರಿ ಶಾಲೆಯನ್ನಾಗಿ ಮಾಡಲು ಕಾರ್ಯೋನ್ಮುಖರಾಗಬೇಕು ಸಲಹೆ ನೀಡಿದರು.

ದಾನಿಗಳಿಂದ ಹೆಚ್ಚಿನ ನೆರವು ಪಡೆಯುವುದರ ಜೊತೆ ಸರ್ಕಾರಿ ಅನುದಾನವನ್ನು ಸಹ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದಾಗಿದೆ. ಲೋಕೋಪಯೋಗಿ ಅನುದಾನದಲ್ಲಿ ಬಿಇಒ ಹಾಗೂ ಡಿಡಿಪಿಐ ಅವರ ಮನವಿಯಂತೆ ಈ ಶಾಲೆಯಲ್ಲಿ ಹೊಸದಾಗಿ 2 ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಅಧ್ಯಕ್ಷೆ ನಂಜುಂಡೇಶ್ವರಿ, ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಪರಿಸರವನ್ನು ನಿರ್ಮಿಸಲು ಕ್ರಮ ವಹಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.

ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಎಸ್‍ಡಿಎಂಸಿ ಸಮಿತಿ ಒತ್ತು ನೀಡುತ್ತಿದೆ. ಮಕ್ಕಳಿಂದಲೇ ಶಾಲಾ ಆವರಣದಲ್ಲಿ ಮರಗಳನ್ನು ಬೆಳೆಸುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸುತ್ತಿದೆ. ಈ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.

ಬಿಇಒ ರಂಗಧಾಮಪ್ಪ, ಮುಖ್ಯಶಿಕ್ಷಕ ಎನ್.ಶಿವರಾಜ್, ಪಾಲಿಕೆ ಸದಸ್ಯರಾದ ಕುಮಾರ್, ದೀಪಶ್ರೀ ಮಹೇಶ್, ಸ್ಥಳೀಯರಾದ ಕೆ.ಎಚ್.ರಮೇಶ್, ಕೆ.ಚಂದ್ರಶೇಖರ್, ಬಸವರಾಜು, ನವೀನ್, ವಿನಯ್‍ಕುಮಾರ್, ನಯಾಜ್ ಅಹ್ಮದ್, ಜಗದೀಶ್, ಗೋಪಾಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.