ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: ಕಡತಗಳಲ್ಲಷ್ಟೇ ಸಮಸ್ಯೆಗೆ ಪರಿಹಾರ!

ತುರುವೇಕೆರೆ: 17 ಗ್ರಾಮಗಳಲ್ಲಿ ಅಧಿಕಾರಿಗಳ ವಾಸ್ತವ್ಯ: ಜನರಿಗೆ ತಪ್ಟದ ಕಚೇರಿ ಅಲೆದಾಟ
Published 5 ನವೆಂಬರ್ 2023, 6:43 IST
Last Updated 5 ನವೆಂಬರ್ 2023, 6:43 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ 17 ಗ್ರಾಮಗಳಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಮುಕ್ತಿ ದೊರೆತಿಲ್ಲ.

ತಾಲ್ಲೂಕಿನ ಮಾಯಸಂದ್ರದಲ್ಲಿ ಅಂದಿನ ಕಂದಾಯ ಸಚಿವರು, ಸಂಪಿಗೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತ್ತು ತೊರೆಮಾವಿನಹಳ್ಳಿ ಮತ್ತು ಅಜ್ಜನಹಳ್ಳಿಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹಾಗೂ ಇನ್ನುಳಿದ 13 ಗ್ರಾಮಗಳಲ್ಲಿ ಶಾಸಕರು ಮತ್ತು ತಹಶೀಲ್ದಾರ್ ಜಂಟಿಯಾಗಿ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳ ಪೈಕಿ ಶೇ 15ರಷ್ಟು ಮಾತ್ರ ಬಾಕಿ ಉಳಿದಿವೆ. 6,002 ಫಲಾನುಭವಿಗಳು ಸರ್ಕಾರಿ ಸೌಲಭ್ಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ 2022ರಲ್ಲಿ ಅಂದಿನ ಕಂದಾಯ ಸಚಿವ ಆರ್.ಅಶೋಕ್, ಮಾಜಿ ಶಾಸಕ ಜಯರಾಮ್ ಎ.ಎಸ್. ಹಾಗೂ ಅಂದಿನ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವಾಸ್ತವ್ಯ ಹೂಡಿದ್ದರು.

ಆಗ ಸಚಿವರು ಮಾಯಸಂದ್ರ ಗ್ರಾಮದ ಅಭಿವೃದ್ಧಿಗಾಗಿ ₹1 ಕೋಟಿ ಅನುದಾಯ ಘೋಷಿಸಿ ಇಲ್ಲಿಗೆ 17 ತಿಂಗಳು ಕಳೆದಿದೆ. ಪರಿಶಿಷ್ಟ ಜಾತಿ ಕಾಲೊನಿಗೆ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ₹25 ಲಕ್ಷ ಬಿಡುಗಡೆ ಮಾಡಿದ್ದರು. ಗ್ರಾಮದ ದೇವಸ್ಥಾನದ ಸುತ್ತ ಹಾಗೂ ಆಯ್ದ ಭಾಗಗಳಲ್ಲಿ ಕೇವಲ 100 ಮೀಟರ್ ಸಿ.ಸಿ. ರಸ್ತೆ ಮಾಡಲಾಗಿದೆ. ಆದರೆ ₹25 ಲಕ್ಷದ ಕಾಮಗಾರಿ ನಡದೇ ಇಲ್ಲ. ಪರಿಶಿಷ್ಟರ ಕಾಲೊನಿಯಲ್ಲಿ ಕೆಲವರಿಗೆ ವಸತಿ ಇಲ್ಲ, ನಿವೇಶನ ಇಲ್ಲ, ಜಲಜೀವನ್‌ ಮಿಷನ್‌ ಅಡಿ ಮನೆ ಮನೆಗೆ ನಲ್ಲಿ ನೀರು ಬಂದಿಲ್ಲ. ಸ್ವಚ್ಛತೆ, ಚರಂಡಿ ಹೀಗೆ ಮೂಲ ಸೌಕರ್ಯಗಳ ಕೊರತೆಯನ್ನು ಜನರು ತೆರೆದಿಡುತ್ತಾರೆ.

ತುರುವೇಕೆರೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ₹10 ಕೋಟಿಯನ್ನು ಸ್ಥಳದಲ್ಲೇ ಸಚಿವರು ಮಂಜೂರು ಮಾಡಿಸಿದರೂ, ಈವರೆಗೂ ಯಾವುದೇ ಕಾಮಗಾರಿ ಆರಂಭವಾಗಲ್ಲ. ಮಿನಿ ವಿಧಾನಸೌದ ಅಲ್ಲಲ್ಲಿ ಶಿಥಿಲವಾಗಿ ಬಿರುಕು ಬಿಟ್ಟು ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಜೊತೆಗೆ ಶೌಚಾಲಯದ ಸರಿಯಾದ ನಿರ್ವಹಣೆ ಕೊರತೆ ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯಗಳ ನಿರೀಕ್ಷೆಯಲ್ಲಿದೆ.

ಮಾಯಸಂದ್ರ ನಾಡಕಚೇರಿ ಸಂಪೂರ್ಣ ಶಿಥಿಲವಾಗಿದೆ. ಸಾರ್ವಜನಿಕರ ಕಡತ ಮಳೆಗಾಲದಲ್ಲಿ ತೇವದಿಂದ ಹಾಳಾಗುತ್ತವೆ. ನಾಡಕಚೇರಿ ಕಾಮಗಾರಿಗೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಂಪಯ್ಯ ಬಯಲು ರಂಗಮಂದಿರ ಅಭಿವೃದ್ಧಿಗಾಗಿ ಸಚಿವರು ಭರವಸೆ ನೀಡಿದ್ದರು. ಆದರೆ ಅದು ಇಂದಿಗೂ ಪಾಳು ಬಿದ್ದಿದೆ.

ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಯಸಂದ್ರದ ಮೂಲಕ ಹಾದು ಹೋಗಿದ್ದು, ಸುಸಜ್ಜಿತ ಬಸ್ ನಿಲ್ಲಾಣವಿಲ್ಲದೆ ಪ್ರಯಾಣಿಕರು ರಸ್ತೆಯಲ್ಲೇ ಕಾಯಬೇಕಿದೆ. ಹೆದ್ದಾರಿ ಇಕ್ಕೆಲಗಳಲ್ಲಿಯೇ ಬುಧವಾರದ ಸಂತೆ ನಡೆಯುತ್ತಿದೆ.

ಹಲವೆಡೆ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅರ್ಜಿಗಳಲ್ಲಿ ಜನರಿಗೆ ವೃದ್ಧಾಪ್ಯವೇತನ, ಪಿಂಚಣಿ, ಆಧಾರ್ ತಿದ್ದುಪಡಿ, ಪಡಿತರ ಚೀಟಿಗಳು ದೊರೆತಿವೆ. ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿದಿದೆ. ಸಾಕಷ್ಟು ಗ್ರಾಮಗಳಿಗೆ ಇಂದಿಗೂ ಬಸ್ ಸಮಸ್ಯೆಗೆ ಪರಿಹಾರ ದೊರೆತಿದೆ.

ಪೌತಿ ಖಾತೆ, ಪಹಣಿ ತಿದ್ದುಪಡಿ, ಪೋಡಿ, ಖಾತೆ ಬದಲಾವಣೆ, ಸಾಗುವಳಿ ಚೀಟಿ ಸೇರಿದಂತೆ ಹತ್ತಾರು ಭೂ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪಡೆಯಲು ನಿತ್ಯ ಕಚೇರಿಗೆ ಎಡತಾಕುವುದು ಜನರಿಗೆ ತಪ್ಪಿಲ್ಲ.

ಸರ್ಕಾರದ ಇಂತಹ ಕಾರ್ಯಕ್ರಮಗಳು ಮಹತ್ವಪೂರ್ಣವಾದರೂ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕೇವಲ ಕಡತಗಳಲ್ಲಿ ಜನರ ಸಮಸ್ಯೆ ಬಗೆಹರಿದಿದೆಯಷ್ಟೆ.

ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಒಳಚರಂಡಿಗಳೇ ಇಲ್ಲ.
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ಒಳಚರಂಡಿಗಳೇ ಇಲ್ಲ.

ಶವ ಹೂಳಲು ಮಸಣವಿಲ್ಲ

ಪರಿಶಿಷ್ಟ ಜಾತಿಯವರಿಗೆ ಶವಸಂಸ್ಕಾರಕ್ಕೆ ಜಾಗವಿಲ್ಲ. ಸ್ಮಶಾನ ಭೂಮಿ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಲ್ಲಬೋರನಹಳ್ಳಿಯಲ್ಲಿ ಎರಡು ಎಕರೆ ಭೂಮಿಯನ್ನು ಮೀಸಲಿಟ್ಟಿರುವುದಾಗಿ ತಹಶೀಲ್ದಾರ್ ಕಚೇರಿಯಿಂದ ನನಗೆ ಒಂದು ಅನುಮೋದನೆ ಪತ್ರ (ಎಂಡಾಸ್‌ಮೆಂಟ್‌) ಬಂದಿದೆ. ಆದರೆ ಕೊಂಡಜ್ಜಿಯಿಂದ ಕಲ್ಲಬೋರನಹಳ್ಳಿಗೆ ಮೂರು ಕಿ.ಮೀ ಆಗುತ್ತದೆ. ಅಲ್ಲಿಗೆ ಶವ ಹೊತ್ತೊಯ್ದು ಹೂಳಲು ಸಾಧ್ಯವೇ? ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು. ಪುಟ್ಟರಾಜು ಕೊಂಡಜ್ಜಿ ₹1 ಕೋಟಿ ಏನಾಯಿತು? ಮಾಯಸಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಲು ₹1 ಕೋಟಿ ಅನುದಾನ ಘೋಷಿಸಿದ್ದರು. ಆದರೆ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಪರಿಶಿಷ್ಟ ಜಾತಿ ಕಾಲೊನಿಗೆ ಸಿಸಿ ರಸ್ತೆ ಚರಂಡಿ ಮಾಡಲು ಸರಿಯಾಗಿ ಹಣ ಬಳಕೆಯಾಗಿಲ್ಲ. ಕೆಂಪಯ್ಯ ರಂಗಮಂದಿರ ಅಭಿವೃದ್ಧಿಯಾಗಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆ ದತ್ತು ಹುಸಿಯಾಗಿದೆ. ಆನಡುಗು ಗ್ರಾಮದಲ್ಲಿ ರಸ್ತೆ ಶುದ್ದ ಕುಡಿಯುವ ನೀರಿನ ಘಟಕವಿಲ್ಲ. ನಾಡಕಚೇರಿ ಇನ್ನೂ ಕಾಮಗಾರಿ ಹಂತದಲ್ಲಿದೆ. ಅನುದಾನ ಏನಾಯಿತು ಎಂಬ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸಿದ್ದಲಿಂಗೇಗೌಡ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT