ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳಾದ ತೂಬು; ಕೆರೆಗಳಲ್ಲಿ ನಿಲ್ಲದ ನೀರು

Last Updated 28 ಜೂನ್ 2021, 5:25 IST
ಅಕ್ಷರ ಗಾತ್ರ

ತುಮಕೂರು: ಕೆರೆಗಳ ಒತ್ತುವರಿ ಅವ್ಯಾಹತವಾಗಿ ಮುಂದುವರಿದಿದ್ದರೆ ಮತ್ತೊಂದು ಕಡೆ ಅವುಗಳ ತೂಬು, ಏರಿಯನ್ನು ದುರಸ್ತಿ ಮಾಡದೆ ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳಲ್ಲಿ ನೀರು ನಿಲ್ಲದಾಗಿದೆ.

ಹೇಮಾವತಿ ನೀರಿನಿಂದ ಭರ್ತಿಯಾಗುವ ಕೆರೆಗಳನ್ನು ಹೊರತುಪಡಿಸಿದರೆ ಉಳಿದ ಸಾಕಷ್ಟು ಸಂಖ್ಯೆಯ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದ್ದು, ಈಗಾಗಲೇ ಹಲವು ತಾಲ್ಲೂಕುಗಳು ಹಳದಿ, ಕೆಂಪು ಪಟ್ಟಿಗೆ ಸೇರಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಎಲ್ಲಾ ತಾಲ್ಲೂಕುಗಳು ಕೆಂಪು ಪಟ್ಟಿಗೆಸೇರ್ಪಡೆಯಾಗುವ ಆತಂಕ ಎದುರಾಗಿದೆ.

ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ, ಕುಣಿಗಲ್ ತುರುವೇಕೆರೆ, ತಿಪಟೂರು ತಾಲ್ಲೂಕು ಸೇರಿದಂತೆ ಬಹುತೇಕ ಭಾಗಗಳಲ್ಲಿ ಒಂದು ಸಾವಿರ ಅಡಿಗಳವರೆಗೆ ಕೊಳವೆ ಬಾರಿ ಕೊರೆದರೂ ನೀರು ಸಿಗದಾಗಿದೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿಕೊಳವೆ ಬಾವಿ ಕೊರೆಸಿದರೂ ನೀರು ಸಿಗದೆ ಕೈಸುಟ್ಟುಕೊಳ್ಳುತ್ತಿದ್ದಾರೆ. ಮಾಡಿದ ಸಾಲ ತೀರಿಸಲಾಗದೆ, ಕೃಷಿಯನ್ನೂ ಮುಂದುವರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಅಂತರ್ಜಲದಲ್ಲಿ ಸುಧಾರಣೆ ಕಾಣದಿದ್ದರೆ ಮುಂದಿನ ಬದುಕು ದುರ್ಬರವಾಗಲಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದರೂ ಅದನ್ನು ಯಾರೂ ಆದ್ಯತೆಯಾಗಿ
ಪರಿಗಣಿಸುತ್ತಿಲ್ಲ.

ಅಂತರ್ಜಲ ತೀವ್ರವಾಗಿ ಕುಸಿದಿರುವುದನ್ನೇ ಮಾನದಂಡವಾಗಿ ಇಟ್ಟುಕೊಂಡು ಅಟಲ್ ಭೂ ಜಲ್ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಮಾಡಿದ್ದು, ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇದು ಒಳ್ಳೆಯ ಯೋಜನೆ. ಆದರೆ ಇರುವ ವ್ಯವಸ್ಥೆಯನ್ನು ಬಳಸಿಕೊಂಡು ಅಂತರ್ಜಲದ ಮಟ್ಟ ಹೆಚ್ಚಿಸಲು ಸಾಧ್ಯವಿದ್ದರೂ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ 2,061 ಕೆರೆಗಳಿದ್ದು ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡರೆ ನೀರು ಇಂಗಿಸಲು ಇದಕ್ಕಿಂತ ದೊಡ್ಡ ಯೋಜನೆಗಳು ಬೇಕಾಗಿಲ್ಲ.

ಕಾವೇರಿ ನೀರಾವರಿ ನಿಗಮದಡಿ 151 ಕೆರೆಗಳು ಬರುತ್ತವೆ. ಅವುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಸಂಖ್ಯೆಯ ಕೆರೆಗಳು ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಲ್ಲಿ ಶೇ 90ರಷ್ಟು ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಹಲವು ಕೆರೆಗಳಿಗೆ ನೀರು ಹರಿದುಬಂದು ದಶಕಗಳೇ ಕಳೆದಿವೆ. ನೀರು ಹರಿದು ಬಂದರೂ ತೂಬು ಹಾಳಾಗಿದ್ದು, ಬಂದ ನೀರೆಲ್ಲ ಹೊರಗೆ ಹೋಗುತ್ತದೆ. ಇಲ್ಲವೆ ಏರಿ, ಕೋಡಿ ಭಾಗದಲ್ಲಿ ಆಗಿರುವ ಒಡಕಿನಿಂದ ಸೋರಿಕೆಯಾಗಿ ಕೆರೆ ಖಾಲಿಯಾಗುತ್ತದೆ. ನೀರು ನಿಲ್ಲದೆ ಕೆರೆಯ ಸುತ್ತಲೂ ಒತ್ತುವರಿ ನಡೆಯುತ್ತಲೇ ಇದೆ.ಮತ್ತಷ್ಟು ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಪಾಳು ಬಿದ್ದ ಕೆರೆಗಳಲ್ಲಿ ಸೀಮೆ ಜಾಲಿ, ಪೊದೆ, ಗಣೇಶ ಕಡ್ಡಿ ಬೆಳೆದಿದ್ದು, ಕೆರೆ ಅಂಗಳ ಎಲ್ಲಿದೆ ಎಂದು ಹುಡುಕುವಂತಾಗಿದೆ. ಪೊದೆಗಳಲ್ಲಿ ಕಾಡು ಪ್ರಾಣಿಗಳು ಸೇರಿಕೊಂಡು ಜನ, ಜಾನುವಾರುಗಳ ಮೇಲೆ ದಾಳಿಮಾಡಿ, ಸುತ್ತಮುತ್ತಲಿನ ಬೆಳೆ ಹಾಳುಮಾಡುತ್ತಿವೆ. ಪ್ರಾಣ ಹಾನಿಯೂ ಸಂಭವಿಸುತ್ತಿದೆ.

ಮುಂಗಾರು ಮಳೆ ಆರಂಭಕ್ಕೆ ಮುನ್ನ ಕೆರೆ ತೂಬು ದುರಸ್ತಿಮಾಡಿ ನೀರು ಹೊರಗೆ ಹರಿದು ಹೋಗದಂತೆ ಮಾಡಿದರೆ ಮಳೆ ಬಿದ್ದ ಸಮಯದಲ್ಲಿ ನಿಲ್ಲುತ್ತದೆ. ಆದರೆ ಜಿಲ್ಲೆಯಲ್ಲಿ ಅಂತಹ ಪ್ರಯತ್ನವೇ ನಡೆದಿಲ್ಲ. ಇನ್ನೂ ದುರಸ್ತಿ ಮಾಡುತ್ತಿದ್ದೇವೆ ಎಂದು ಸಣ್ಣ ನೀರಾವರಿ ಇಲಾಖೆ, ಜಿ.ಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಸರಿಯಾಗಿ ನಾಲ್ಕು ಕೆರೆಗಳ ಕೋಡಿಗಳನ್ನೂ ಮುಚ್ಚಿದಂತೆ ಕಾಣುತ್ತಿಲ್ಲ. ಈ ಪ್ರಯತ್ನ ಆರಂಭಿಸಿದರೂ ಮಳೆಗಾಲ ಮುಗಿಯುವ ಹೊತ್ತಿಗೆ ಕೆಲಸ ಮಾಡಲಾಗುತ್ತದೆ. ಆ ವೇಳೆಗೆ ಮಳೆ ಕಡಿಮೆಯಾಗಿ ಕೆರೆಗೆ ನೀರು ಬರುವುದಿಲ್ಲ. ಮುಂದಿನ ವರ್ಷದ ವೇಳೆಗೆ ಮತ್ತೆ ಅದೇ ಕಥೆ!

ಕೆರೆಯಲ್ಲಿ ನೀರು ನಿಂತರೆ ಅಂತರ್ಜಲದ ಮಟ್ಟ ತನ್ನಷ್ಟಕ್ಕೆ ತಾನೇ ಹೆಚ್ಚುತ್ತದೆ. ಸುತ್ತಮುತ್ತಲಿನ ಕೊಳವೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ಜತೆಗೆ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಜನ, ಜಾನುವಾರು, ಪ್ರಾಣಿ, ಪಶು ಪಕ್ಷಿಗಳಿಗೆ ಆಸರೆಯಾಗುತ್ತದೆ. ನೀರು ಇಂಗಿ ಖಾಲಿಯಾದಂತೆ ಬಯಲು ಪ್ರದೇಶದಲ್ಲಿ ಹುಲ್ಲು ಬೆಳೆಯುವುದರಿಂದ ಜಾನುವಾರುಗಳು ಮೇಯಲು ಮೇವು ಸಿಗುತ್ತದೆ. ನಮ್ಮಲ್ಲಿ ಇರುವುದನ್ನು ಬಳಕೆ ಮಾಡಿಕೊಳ್ಳದೆ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ನೂರಾರು ಮೈಲಿ ದೂರದಿಂದ ನದಿ ನೀರು ಹರಿಸಿ ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇರುವ ಕೆರೆಗಳಿಗೆ ಮಳೆ ನೀರು ಹರಿದುಬರುವಂತೆ ಮಾಡಿ, ನಿಲ್ಲಿಸಿದರೆ ಇದಕ್ಕಿಂತ ದೊಡ್ಡ ನೀರಾವರಿ ಯೋಜನೆಗಳು ಬೇಕಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರಿದ ಸಮಯದಲ್ಲಿ ಮತ್ತಷ್ಟು ಕೊಳವೆಬಾರಿ ಕೊರೆಸುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ತಪ್ಪಿಸಬಹುದು. ಅಲ್ಪ ಹಣ ಖರ್ಚು ಮಾಡಿದರೆ ಸಮಸ್ಯೆಗಳಿಂದ ಪಾರಾಗುವ ಅವಕಾಶಗಳಿದ್ದರೂ, ಅದನ್ನು ಮರೆತು ಮತ್ತೆಮತ್ತೆ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗುತ್ತಾರೆ. ಎಷ್ಟೇ ಆದರೂ ಹಣ ಮಾಡುವ ಯೋಜನೆ!

ಒತ್ತುವರಿ ತೆರವುಮಾಡಿ ಕೆರೆಗಳನ್ನು ಸಂರಕ್ಷಿಸುವುದು ಎಷ್ಟು ಮುಖ್ಯವೊ ಅಷ್ಟೇ ವೇಗದಲ್ಲಿ ಕೆರೆ ಅಂಗಳದಲ್ಲಿ ನೀರು ನಿಲ್ಲುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಈಗಲಾದರೂ ಸಮರೋಪಾದಿಯಲ್ಲಿ ನೀರು ನಿಲ್ಲುವಂತೆ ಮಾಡಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೆಕು ಎಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT