ತುರುವೇಕೆರೆ: ತಾಲ್ಲೂಕಿನ ದ್ವಾರನಹಳ್ಳಿಯಲ್ಲಿ ತಿಪ್ಪೆಗೆ ಸಗಣಿ ಹಾಕಲು ತೆರಳಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾಗರ್(16) ಶನಿವಾರ ಮೃತಪಟ್ಟಿದ್ದಾರೆ.
ದ್ವಾರನಹಳ್ಳಿಯ ರವಿಕುಮಾರ್ ಮತ್ತು ಮನು ದಂಪತಿಯ ಮಗ ಸಾಗರ್ ಪಟ್ಟಣದ ಜೆಪಿ ಆಂಗ್ಲ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ.
ರವಿಕುಮಾರ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ತೆರಳಿದ್ದರು. ಸಾಗರ್ ತನ್ನ ತಾಯಿಯೊಂದಿಗೆ ಮನೆಯಲ್ಲಿದ್ದ ಸಗಣಿಯನ್ನು ತಿಪ್ಪೆಗೆ ಹಾಕಲು ತೆರಳಿದ್ದರು. ಆಗ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ತುಳಿದಿದ್ದಾನೆ. ತಕ್ಷಣವೇ ಸಾಗರ್ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಅಲ್ಲೇ ಇದ್ದ ತಾಯಿ ಮನು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆಯೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಈ ಕುರಿತು ಬೆಸ್ಕಾಂನ ಲೈನ್‌ಮೆನ್ ಸೇರಿದಂತೆ ಶಾಖಾ ವ್ಯವಸ್ಥಾಪಕರಿಗೂ ತಿಳಿಸಲಾಗಿತ್ತು. ಆದರೂ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಧೋರಣೆ ತಾಳಿದ್ದರು ಎಂದು ದ್ವಾರನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ವಿದ್ಯಾರ್ಥಿ ಸಾಗರ್‌ನ ಶವ ನೋಡಲು ಬಂದ ಶಾಸಕ ಎಂ.ಟಿ.ಕೃಷ್ಣಪ್ಪ, ವಿದ್ಯುತ್ ತಂತಿ ತುಂಡಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಿ ಅವರನ್ನು ಕೂಡಲೇ ಅಮಾನತಿನಲ್ಲಿಡಬೇಕು ಎಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಶೇಖರ್ ಅವರಿಗೆ ಸೂಚಿಸಿದರು.
ವಿದ್ಯಾರ್ಥಿ ಸಾಗರ್ ಬೆಸ್ಕಾಂ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಬೆಸ್ಕಾಂನಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿದರು.