ಬುಧವಾರ, ಫೆಬ್ರವರಿ 19, 2020
23 °C
ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

ನಮ್ಮೂರಿಗೆ ಕ್ರಷರ್‌ ಬೇಡ ಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೊರಟಗೆರೆ ತಾಲ್ಲೂಕಿನ ಕೊಳಾಲ ಹೋಬಳಿಯ ತಂಗನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಎಂ–ಸ್ಯಾಂಡ್‌(ಕಲ್ಲಿನ ಪುಡಿ) ತಯಾರಿಸುವ ಜಲ್ಲಿ–ಕ್ರಷರ್‌ ಘಟಕ ತೆರೆಯಲು ಅನುಮತಿ ನೀಡಬಾರದು ಎಂದು ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್‌ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಂಡು ಎಂ–ಸ್ಯಾಂಡ್‌ ತಯಾರಿಸುವ ಕಂಪನಿಗೆ ನೀಡಲು ಮುಂದಾಗಿದೆ. ಇದರಿಂದ ನಮ್ಮ ವ್ಯವಸಾಯದ ಜೀವನಕ್ಕೆ ಕುತ್ತು ಬರುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಸ್ವಾಧೀನಕ್ಕೆ ಪಡೆಯುತ್ತಿರುವ ಬೆಟ್ಟದ ತಪ್ಪಲು ಪ್ರದೇಶ ಹಾಗೂ ಜಮೀನುಗಳಲ್ಲಿ ಕದರಿ ನರಸಿಂಹಸ್ವಾಮಿ ಮತ್ತು ಮುತ್ತುರಾಯಸ್ವಾಮಿ ದೇವಸ್ಥಾನಗಳಿವೆ. ಈ ದೈವಗಳನ್ನು ಬಹಳಷ್ಟು ಸ್ಥಳೀಯರು ಆರಾಧಿಸುತ್ತಾರೆ. ಅಲ್ಲದೆ, ಇಲ್ಲಿನ ಕಲ್ಲುಬಾವಿಗಳು ಮತ್ತು ಕೊಳವೆಬಾವಿಗಳು ಜನರ ನೀರಿನ ಮೂಲಗಳಾಗಿವೆ ಎಂದು ವಿವರಿಸಿದರು.

ಊರಿನಲ್ಲಿ ಒಂದು ಸಾವಿರ ಜನರಿದ್ದಾರೆ. ಸರ್ಕಾರಿ ಶಾಲೆಯೂ ಇದೆ. ಇಲ್ಲಿ ಗಣಿಗಾರಿಕೆ ಶುರುವಾದರೆ ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ ಹಾಳಾಗುತ್ತದೆ. ಬೆಟ್ಟದಲ್ಲಿನ ವನ್ಯಜೀವಿಗಳ ಜೀವಕ್ಕೂ ಕುತ್ತು ಬರುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

ನಮ್ಮ ಜಮೀನು ಹೋದರೆ, ನಾವು ಬೀದಿಗೆ ಬೀಳುತ್ತೇವೆ. ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು ಎಂದು ದುಃಖಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಪರಿಶೀಲಿಸಿ ಕ್ರಮ ವಹಿಸುವುದುದಾಗಿ ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)