ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ಈ ಬಾರಿ ಕಾಂಗ್ರೆಸ್ ಸರ್ಕಾರ ಖಚಿತ

ನಾನು ಮಂತ್ರಿಯಾಗುವುದು ನಿಶ್ಚಿತ: ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿಶ್ವಾಸ
Last Updated 4 ಅಕ್ಟೋಬರ್ 2021, 4:32 IST
ಅಕ್ಷರ ಗಾತ್ರ

ಮಧುಗಿರಿ: ‘2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಾನು ಮಂತ್ರಿಯಾಗೋದು ನಿಶ್ಚಿತ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲ್ಲೂಕು ನೇರೇಳೆಕೆರೆ ಗ್ರಾಮದಲ್ಲಿ ತಾಲ್ಲೂಕು ಮಾತಂಗ ಸಮುದಾಯದಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮಾತಂಗ ಸಮುದಾಯ ಸಂಘಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊರೊನೊ ಸಂಕಷ್ಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹10 ಸಾವಿರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಒತ್ತಾಯಿಸಿತ್ತು. ಆದರೆ ಈವರೆಗೂ ಕೂಡ ಸರ್ಕಾರ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದರು.

ವಿದ್ಯಾರ್ಥಿಗಳಿಗೆ ಈವರೆಗೂ ವಿದ್ಯಾರ್ಥಿ ವೇತನ ನೀಡದೇ ಇರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ಕಾರ ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕೆಂದು ತಿಳಿಸಿದರು.

ಅಧಿಕಾರದ ಲಾಭವನ್ನು ಜನರಿಗೆ ತಲುಪಿಸಬೇಕು. ನನಗೆ ಅಧಿಕಾರ ಇದ್ದಿದ್ದರೆ ಎತ್ತಿನಹೊಳೆ ಯೋಜನೆಯ ಮೂಲಕ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುತ್ತಿದ್ದೆ. ಜನರ ಪರವಾಗಿ ಕೆಲಸ ಮಾಡುವವರಿಗೆ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಬೇಕೆಂದು ತಿಳಿಸಿದರು.

ಮಾತಂಗಿ ಸಮುದಾಯದ ಮಠ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಅದರಿಂದ ಸಮುದಾಯದ ಅಭಿವೃದ್ಧಿಯಾಗುತ್ತದೆ ಎಂದರು.

ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಎನ್.ಗೋಪಾಲಯ್ಯ, ಮಾತಂಗ ಸಮುದಾಯದ ಅಭಿವೃದ್ಧಿಯೇ ನನ್ನ ಗುರಿ ಎಂದರು.

ಕೊಂಕಲ್ ಮಠದ ಓಂಕಾರ ಮುನಿ ಸ್ವಾಮೀಜಿ, ದೊಡ್ಡೇರಿ ಕಣಿಮಯ್ಯ, ರಾಜ್ಯ ಸಹಕಾರ ಮಹಾಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಜಿ.ಪಂ ಮಾಜಿ ಸದಸ್ಯ ಜಿ.ಜೆ.ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತಾ.ಪಂ ಮಾಜಿ ಸದಸ್ಯ ರಾಮಣ್ಣ, ನರಸಿಂಹಯ್ಯ, ಹೆಂಜಾರಪ್ಪ, ಜೆ.ಡಿ.ವೆಂಕಟೇಶ್, ವಕೀಲ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂಚಣ್ಣ, ಗ್ರಾ.ಪಂ ಅಧ್ಯಕ್ಷರಾದ ನಾಗಲಕ್ಷ್ಮಮ್ಮ, ಸವಿತಾ ಮಂಜುನಾಥ್, ಮಾಜಿ ಅಧ್ಯಕ್ಷ ಇಂದ್ರಕುಮಾರ್, ಎಸ್.ಎನ್.ರಾಜು, ನಾಗರಾಜು, ರಂಗಪ್ಪ, ರಂಗಶಾಮಯ್ಯ, ಸಿದ್ದಪ್ಪ, ಜೀವಿಕ ಮಂಜುನಾಥ್, ರಂಗಧಾಮಯ್ಯ, ಭರತ್, ವಕೀಲ ನಾಗರಾಜು, ಪಾಂಡುರಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT