ಭಾನುವಾರ, ಆಗಸ್ಟ್ 9, 2020
25 °C
ಗೋಡೆಕೆರೆ ಗೊಲ್ಲರಹಟ್ಟಿ ಮೇಕೆಗಳ ಗಂಟಲು ದ್ರಾವಣ,

ಚಿಕ್ಕನಾಯಕನಹಳ್ಳಿ | ಮೇಕೆಗೆ ಪಿಪಿಆರ್ ರೋಗದ ಶಂಕೆ

ಸಿ.ಗುರುಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಸಾವನ್ನಪ್ಪಿದ್ದ ಮೂರು ತಿಂಗಳ ಆರು ಮೇಕೆ ಮರಿಗಳಿಗೂ ಪಿಪಿಆರ್ (ಹೀರೆ ಬೇನೆ) ರೋಗವಿರಬಹುದು ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಾವನ್ನಪ್ಪಿರುವ ಮೇಕೆಗಳು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಭೇದಿಯಿಂದ ಸತ್ತಿವೆ. ಅವು ವೈರಲ್ ಡಿಸೀಸ್ ಪಿಪಿಆರ್‌ನ ಲಕ್ಷಣಗಳಾಗಿರುವುದರಿಂದ ಕುರಿಗಾಹಿಗಳು ಆತಂಕ ಪಡುವುದು ಬೇಡ. ಮೂರು ತಿಂಗಳ ಎಲ್ಲ ಮರಿಗಳಿಗೆ ಪಿಪಿಆರ್‌ನ ಲಸಿಕೆಗಳನ್ನು ಹಾಕಿಸಿ, ದೊಡ್ಡ ಮೇಕೆಗಳಿಗೆ ಎಚ್.ಎಸ್. ಲಸಿಕೆ ಹಾಕಿಸುವುದು ಸೂಕ್ತ ಎಂದಿದ್ದಾರೆ.

ಭೂಪಾಲ್‌ಗೆ ಗಂಟಲು ಸ್ರಾವ ಮಾದರಿ: ಮೇಕೆ ಮರಿಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪಶು ಇಲಾಖೆಯ ತಜ್ಞರ ತಂಡ ನಾಲ್ಕು ಮರಿಗಳ ಗಂಟಲು ಸ್ರಾವ ತೆಗೆದು ಪರೀಕ್ಷೆಗೆ ಭೂಪಾಲ್‌ಗೆ ಕಳುಹಿಸಿದ್ದಾರೆ.

ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಎರಡು ಮೇಕೆ ಮರಿಗಳು ಹಾಗೂ ತಿಪಟೂರು ತಾಲ್ಲೂಕಿನ ಜಕ್ಕನಹಳ್ಳಿಯಲ್ಲಿನ ಎರಡು ಮೇಕೆಗಳ ಗಂಟಲು ಸ್ರಾವ, ಮೂಗಿನ ದ್ರವ, ರಕ್ತದ ಮಾದರಿ, ಸಿರಂ ಮಾದರಿ ಹಾಗೂ ಸತ್ತ ಮೇಕೆ ಮರಿಗಳ ಶವ ಪರೀಕ್ಷಾ ವರದಿಗಳನ್ನುಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯ ಹಾಗೂ ಭೂಪಾಲ್‌ನಲ್ಲಿರುವ ಪ್ರಯೋಗಾಲಯಗಳಿಗೆ ತಪಾಸಣೆಗೆ ಕಳುಹಿಸಿದೆ.

ಮೇಕೆಗಳು ಜ್ವರ, ಕೆಮ್ಮು, ಬೇಧಿ ಮತ್ತು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗೋಡೆಕೆರೆ ಗೊಲ್ಲರಹಟ್ಟಿ ಹಾಗೂ ಜಕ್ಕನಹಳ್ಳಿಯಲ್ಲಿದ್ದ ಮೇಕೆಗಳನ್ನು ಕ್ವಾರಂಟೈನ್ ಮಾಡಲು ಸೂಚಿಸಿತ್ತು.

ಕುರಿ, ಮೇಕೆ ಮಾಂಸ ತಿನ್ನಲು ಯೋಗ್ಯ: ಪ್ರಪಂಚದಲ್ಲಿ ಎಲ್ಲಿಯೂ ಕುರಿ, ಮೇಕೆಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ವರದಿಯಾಗಿಲ್ಲ. ಆದ್ದರಿಂದ ಮಾಂಸ ಪ್ರಿಯರು ಆತಂಕ ಪಡುವ ಅಗತ್ಯವಿಲ್ಲ. ಇವುಗಳ ಮಾಂಸವನ್ನು ತಿನ್ನಲು ಯೋಗ್ಯವಾಗಿದೆ. ನಿಗಮದಿಂದ ಕುರಿ, ಮೇಕೆ ಮಾಂಸ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.

***

ಪಿಪಿಆರ್ ರೋಗ ಲಕ್ಷಣ

ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಸತ್ತಿರುವ ಮೇಕೆ ಮರಿಗಳ ಶವ ಪರೀಕ್ಷಾ ವರದಿಯನಲ್ಲಿನ ಕೆಲವು ಅಂಶಗಳು ಪಿಪಿಆರ್ ರೋಗ ಲಕ್ಷಣಗಳನ್ನು ಹೋಲುತ್ತವೆ. ಈಗಿರುವ ಮೇಕೆ ಮರಿಗಳ ಗಂಟಲು ಸ್ರಾವ, ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಗಳನ್ನು ಕಾಯುತ್ತಿದ್ದೇವೆ.

ಡಾ.ನಂದೀಶ್, ಉಪ ನಿರ್ದೇಶಕ, ಪಶುಪಾಲನಾ
ಮತ್ತು ಪಶು ವೈದ್ಯ ಇಲಾಖೆ, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು