ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣವಾದರೂ ಉದ್ಘಾಟನೆ ಭಾಗ್ಯವಿಲ್ಲದ ಮಾವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ

ಸಾರ್ವಜನಿಕರ ಉಪಯೋಗಕ್ಕೆ ಇಲ್ಲ
Last Updated 30 ಏಪ್ರಿಲ್ 2021, 3:51 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಮಾವಿನಕೆರೆಯಲ್ಲಿ ನಿರ್ಮಾಣವಾಗಿರುವ ನೂತನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ.

ತುಮಕೂರು ಜಿಲ್ಲೆಯ ಕೊನೆಯ ಗ್ರಾಮವಾದ ಮಾವಿನಕೆರೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಮೂಲ ಸೌಕರ್ಯ ಹಾಗೂ ಕೊಠಡಿ ಸಮಸ್ಯೆ ಇತ್ತು. ಹಾಗಾಗಿ ₹1.80 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಯಿತು.

2019ರಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭವಾಗಿತ್ತು. 2020ರ ಸೆಪ್ಟಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿತು. ಅದನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿ ಏಳು ತಿಂಗಳು ಕಳೆದಿದ್ದರೂ ಆಸ್ಪತ್ರೆ ಕಟ್ಟಡ ಉದ್ಘಾಟನೆಯಾಗಿಲ್ಲ.

ಈ ಕಟ್ಟಡವು 534 ಚ.ಮೀ ಸುತ್ತಳತೆ ಹೊಂದಿದೆ. ಸಂದರ್ಶಕರ ಕೊಠಡಿ, ಆಸ್ಪತ್ರೆ ಕಚೇರಿ, ವೈದ್ಯಾಧಿಕಾರಿ ಕೊಠಡಿ, ಚಿಕಿತ್ಸಾ ಕೊಠಡಿ, ಹೆರಿಗೆ ವಿಭಾಗ, ಶಸ್ತ್ರಚಿಕಿತ್ಸೆ, ಪುರುಷ ಮತ್ತು ಮಹಿಳಾ ವಾರ್ಡ್‌, ಪ್ರಯೋಗಾಲಯ, ಔಷಧಾಲಯ, ಔಷಧಿ ಶೇಖರಣಾಲಯ, ಮೀಟಿಂಗ್ ರೂಂ, ಶೌಚಾಲಯ, ಹೆಚ್ಚುವರಿ ವಿದ್ಯುತ್ ಪೂರೈಕೆಗೆ ಜನರೇಟರ್, ವಾಟರ್‌ ಹೀಟರ್, ಸಂಪ್‍, ನೈರ್ಮಲೀಕರಣ ವ್ಯವಸ್ಥೆ ಇದೆ.

ಮಾವಿನಕೆರೆ ಮತ್ತು ಮುತ್ತಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನವಳಗೇರಹಳ್ಳಿ, ಬ್ಯಾಡರಹಳ್ಳಿ, ಮುತ್ತಗದಹಳ್ಳಿ, ಒಬ್ಬೇನಾಗಸಂದ್ರ, ನಾಗಲಾಪುರ, ಮುದಿಗೆರೆ,ಕಾಡಸೂರು, ಕರಡಿಗೆರೆ ಹೀಗೆ 26 ಹಳ್ಳಿಗಳ ಜನರಿಗೆ ಈ ಆಸ್ಪತ್ರೆಯ ಉಪಯೋಗವಿದೆ.

ಈಗಿರುವ ಹಳೆಯ ಕಟ್ಟಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನವೂ ಸುಮಾರು 50ರಿಂದ 60 ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅವರಿಗೆ ಆಸನದ ವ್ಯವಸ್ಥೆ, ಔಷಧಿಗಳನ್ನು ಶೇಖರಿಸಲು ಸರಿಯಾಗಿ ಜಾಗವಿಲ್ಲ. ಕೇವಲ ಮೂರು ಕೊಠಡಿಗಳು ಮಾತ್ರ ಇವೆ. ಅಲ್ಲಿಯೇ ಕೋವಿಡ್‍ ಸೋಂಕು ಪರೀಕ್ಷೆ ಮತ್ತು ಕೋವಿಡ್‍ ಲಸಿಕೆ ನೀಡಲಾಗುತ್ತಿದೆ. ಆಸ್ಪತ್ರೆಯ ಹೊರಾಂಡದಲ್ಲಿ ಲಸಿಕೆ ನೋಂದಣಿ ಮಾಡುತ್ತಿದ್ದಾರೆ. ಆಯುಷ್‍ ವೈದ್ಯರೊಬ್ಬರನ್ನು ಬಿಟ್ಟರೆ ಇಲ್ಲಿ ಖಾಯಂ ವೈದ್ಯರಿಲ್ಲ. ಹೆರಿಗೆ ನೋವು, ಅಪಘಾತ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗೆ 20 ಕಿ.ಮೀ ದೂರದ ತುರುವೇಕೆರೆ ಮತ್ತು ಆದಿಚುಂಚನಗಿರಿ ಆಸ್ಪತ್ರೆಗೆ ಹೋಗಬೇಕಿದೆ. ಸಮರ್ಪಕ ಬಸ್‍ ವ್ಯವಸ್ಥೆಯೂ ಇಲ್ಲದೇ ತುರ್ತು ಸಮಯದಲ್ಲಿ ರೋಗಿಗಳು ಪರದಾಡುವಂತಾಗಿದೆ.

ಹೊಸದಾಗಿ ನಿರ್ಮಾಣವಾಗಿರುವ ಆಸ್ಪತ್ರೆಯಲ್ಲಿ ಇಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ಸಿಬ್ಬಂದಿಗಳಿಗೆ ವಸತಿ ಗೃಹಗಳಿಲ್ಲ. ಪೂರ್ಣ ಪ್ರಮಾಣದ ಕಾಂಪೌಂಡ್‍ ಇಲ್ಲ. ತುರ್ತು ಸಂದರ್ಭಗಳ ಬಳಕೆಗೆ ಆಂಬುಲೆನ್ಸ್‌ ವ್ಯವಸ್ಥೆಯಿಲ್ಲ ಎನ್ನುತ್ತಾರೆ ಮಾವಿನಕೆರೆ ಸಿದ್ದಲಿಂಗೇಗೌಡ.

ಮಾವಿನಕೆರೆ ಗ್ರಾಮದ 13 ಮಂದಿ ರೈತರು ತಮ್ಮ ಬೆಲೆ ಬಾಳುವ 3 ಎಕರೆ 13 ಕುಂಟೆ ಜಮೀನನ್ನು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ದಾನನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT