ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತವಿದ್ದರೂ ಅಧ್ಯಕ್ಷ ಭಾಗ್ಯವಿಲ್ಲ

ಗುಬ್ಬಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ತೃಪ್ತಿ
Last Updated 7 ನವೆಂಬರ್ 2020, 1:10 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಜಿ.ಎನ್. ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕೆ. ಮಹಾಲಕ್ಷ್ಮಿ ಆಯ್ಕೆಯಾದರು.

ಪಟ್ಟಣ ಪಂಚಾಯಿತಿ‌ಯ 19 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಜಯಗಳಿಸಿದ್ದ ಜೆಡಿಎಸ್ ಅಧಿಕಾರ ಹಿಡಿಯಲು ಸಿದ್ಧವಾಗಿತ್ತು. ಆದರೆ ಅಧ್ಯಕ್ಷ ಸ್ಥಾನ ಪರಿಶಿಷ್ಟಪಂಗಡಕ್ಕೆ ಮೀಸಲಾಗಿದ್ದರಿಂದ ನಿರಾಸೆಯಾಗಿತ್ತು.

6 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿಯಲ್ಲಿ ಮಾತ್ರ ಪರಿಶಿಷ್ಟ ಪಂಗಡದ ಅಭ್ಯರ್ಥಿ ಇದ್ದರು. ಬಹುಮತವಿದ್ದರೂ ಜೆಡಿಎಸ್‌ನಲ್ಲಿ ಪರಿಶಿಷ್ಟ ಪಂಗಡ ಅಭ್ಯರ್ಥಿ ಇಲ್ಲದ ಕಾರಣ ಅನಿವಾರ್ಯವಾಗಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಾಯಿತು. ಹಾಗಾಗಿ 19ನೇ ವಾರ್ಡ್‌ನ ಬಿಜೆಪಿ ಸದಸ್ಯ ಅಣ್ಣಪ್ಪ ಸ್ವಾಮಿ ಅವರಿಗೆ
ಅಧ್ಯಕ್ಷ ಗಾದಿಯ ಹಾದಿ ಸುಗಮವಾಯಿತು.

ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನದ ಆಯ್ಕೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಜೆಡಿಎಸ್ ಬೆಂಬಲಿತ ಕೆ. ಮಹಾಲಕ್ಷ್ಮಿ, ಬಿಜೆಪಿ ಬೆಂಬಲಿತ ಕಾಂಗ್ರೆಸ್‌ ಸದಸ್ಯೆ ಆಯೀಷಾ ತಸ್ಲೇನಾ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸವಿತಾ ಎಸ್. ಗೌಡ ನಾಮಪತ್ರ ಸಲ್ಲಿಸಿದ್ದರು. ಶಾಸಕರ ಮತ ಸೇರಿ 11 ಮತಗಳನ್ನು ಪಡೆದ ಕೆ.ಮಹಾಲಕ್ಷ್ಮಿ ಉಪಾಧ್ಯಕ್ಷರಾಗಿ ಚುನಾಯಿತರಾದರು. ಆಯೀಷಾ ಸಂಸದರ ಮತ ಸೇರಿ 9 ಮತಗಳನ್ನು ಪಡೆದರು.

ಪಟ್ಟಣ ಪಂಚಾಯಿತಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಗೆ ಅಧ್ಯಕ್ಷ ಗಾದಿ ದೊರೆತಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ನಡೆದಾಗ ಬಿಜೆಪಿ ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಸರತ್ತು ನಡೆಸಿತ್ತು.

‘ಪಕ್ಷಕ್ಕಾಗಿ 20 ವರ್ಷಗಳಿಂದ ದುಡಿದರೂ ಬೆಂಬಲ ಸೂಚಿಸದೆ ಶಾಸಕರು ದ್ರೋಹ ಮಾಡಿದ್ದಾರೆ’ ಎಂದು ಸವಿತಾ.ಎಸ್.ಗೌಡ ಬೇಸರ ವ್ಯಕ್ತಪಡಿಸಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದೆವು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಿಗೆ ಕೋರಂ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಸದಸ್ಯರು ಸೇರಿದಂತೆ ಬಂಡಾಯ ಅಭ್ಯರ್ಥಿಯ ಸಹಕಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ, ಎರಡು ವರ್ಷಗಳಿಂದ ನನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದರು.

ತಹಶೀಲ್ದಾರ್ ಡಾ. ಪ್ರದೀಪ್‌ಕುಮಾರ್ ಹಿರೇಮಠ ಚುನಾವಣಾಧಿಕಾರಿಯಾಗಿ ಕಾರ್ಯ
ನಿರ್ವಹಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT