ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾದರೂ ಸಂದಾಯವಾಗಿಲ್ಲ ಹಣ!

ನಾಫೆಡ್‌ ಖರೀದಿ ಕೇಂದ್ರದಲ್ಲಿ ಕೊಬ್ಬರಿ ಮಾರಾಟ ಮಾಡಿದ ರೈತರ ಆತಂಕ
Last Updated 27 ಸೆಪ್ಟೆಂಬರ್ 2020, 2:22 IST
ಅಕ್ಷರ ಗಾತ್ರ

ತಿಪಟೂರು: ಮೂರು ದಿನಗಳಿಂದ ಕೊಬ್ಬರಿ ಬೆಲೆ ಏರಿಕೆಯಾಗಿದ್ದು, ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸುವ ನಾಫೆಡ್ ಕೇಂದ್ರ ಮುಚ್ಚಲಾಗಿದೆ. ಆದರೆ ಈ ಹಿಂದೆಯೇ ನಾಫೆಡ್‌ ಕೇಂದ್ರಕ್ಕೆ ಕೊಬ್ಬರಿಯನ್ನು ಮಾರಾಟ ಮಾಡಿರುವ ರೈತರಿಗೆ ತಿಂಗಳಾದರೂ ಹಣ ಸಂದಾಯವಾಗಿಲ್ಲ.

ನಾಫೆಡ್‌ ನಿಯಮಾವಳಿಯಲ್ಲಿ ಕೊಬ್ಬರಿ ಮಾರಾಟ ಮಾಡಿದ ಮೂರು ದಿನಗಳ ಒಳಗಾಗಿ ರೈತರ ಖಾತೆಗೆ ಹಣ ಜಮಾವಣೆಯಾಗಬೇಕು ಎಂದು ನಮೂದಿಸಿದೆ. ಆದರೆ ತಾಲ್ಲೂಕಿನ ರೈತರಿಗೆ ತಿಂಗಳಾದರೂ ಹಣ ಸಂದಾಯವಾಗಿಲ್ಲ.

‘ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣ ವರ್ಗಾವಣೆಯು ಕರ್ನಾಟಕ ಕೋ ಆಪರೇಟಿವ್ ಮಾರ್ಕೆಟ್ ಫೆಡೆರೇಷನ್ (ಕೆಎಸ್‍ಸಿಎಂಎಫ್) ಮೂಲಕ ಆಗಬೇಕು ಎನ್ನುತ್ತಾರೆ. ಅಲ್ಲಿನ ಅಧಿಕಾರಿಗಳಿಗೆ ವಿಚಾರಿಸಿದೆ ಸರ್ಕಾರದಲ್ಲಿ ಹಣವಿಲ್ಲ. ಹಾಗಾಗಿ ಸದ್ಯಕ್ಕೆ ಹಣ ವರ್ಗಾವಣೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸುತ್ತಾರೆ’ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕ್ವಿಂಟಲ್‌ ಕೊಬ್ಬರಿಗೆ ₹ 10,300ಕ್ಕೆ ನಾಫೆಡ್‌ನಲ್ಲಿ ಮಾರಾಟ ಮಾಡಿದ ರೈತರಿಗೆ ಆಗಸ್ಟ್ 22ರ ವರಗೆ ಮಾತ್ರ ಹಣ ಸಂದಾಯವಾಗಿದೆ. ನಂತರ ಹಣ ಜಮೆಯಾಗಿಲ್ಲ. ಸದ್ಯ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹ 11,225 ತಲುಪಿದೆ. ಹಾಗಾಗಿ ರೈತರು ಹಣ ನೀಡದಿದ್ದರೂ ಚಿಂತೆಯಿಲ್ಲ ಕೊಬ್ಬರಿ ಹಿಂದುರುಗಿಸಿ ಎಂದು ಒತ್ತಾಯಿಸುತ್ತಿದ್ದಾರೆ.

ಜಿಲ್ಲೆಯ ತುಮಕೂರು, ತಿಪಟೂರು, ಚೇಳೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹುಳಿಯಾರು, ಕುಣಿಗಲ್, ಶಿರಾ, ತುರುವೇಕೆರೆಯಲ್ಲಿ ನಾಫೆಡ್ ಕೇಂದ್ರ ಆರಂಭಿಸಲಾಗಿತ್ತು. 4,536 ರೈತರು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 1,899 ರೈತರು ಮಾತ್ರ 25,151 ಕ್ವಿಂಟಲ್ ಕೊಬ್ಬರಿಯನ್ನು ನಾಫೆಡ್‌ ಕೇಂದ್ರದಲ್ಲಿ ಮಾರಾಟ ಮಾಡಿದ್ದರು.‌

ನಾಫೆಡ್‌ ಪ್ರಾರಂಭವಾಗಿ ವಾರದ ನಂತರ ರಾಜ್ಯಸರ್ಕಾರ ಕೇಂದ್ರ ಸರ್ಕಾರದ ₹ 10,300ರ ಜತೆಗೆ ಹೆಚ್ಚುವರಿಯಾಗಿ ₹ 1,000 ಬೆಂಬಲ ಬೆಲೆ ನಿಗದಿ ಮಾಡಿತ್ತು. ಆದರೆ ಈ ಹಣ ಇಲ್ಲಿವರೆಗೆ ಖಾತೆಗೆ ಜಮೆಯಾಗಿಲ್ಲ ಎನ್ನುತ್ತಾರೆ ರೈತರು.

ಬದ್ಧತೆ ತೋರದ ಅಧಿಕಾರಿಗಳು

ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹ 10,300ಕ್ಕಿಂತ ಹೆಚ್ಚಾದ ತಕ್ಷಣ ನಾಫೆಡ್‌ ಕೇಂದ್ರವನ್ನು ಸ್ಥಗಿತಗೊಳಿಸುವ ಅಧಿಕಾರಿಗಳು ರೈತರಿಗೆ ಹಣ ವರ್ಗಾವಣೆಯಲ್ಲಿ ಆ ಬದ್ಧತೆ ತೋರುವುದಿಲ್ಲ. ಸರ್ಕಾರದ ಅಂಗ ಸಂಸ್ಥೆಯಿಂದಲೇ ಹಣ ಪಡೆಯಲು ರೈತರು ಅಲೆಯಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯಾದರೆ ಕಾರ್ಪೊರೇಟ್‌ ಕಂಪನಿಗಳ ನಡುವೆ ಹೋರಾಡಲು ಸಾಧ್ಯವೆ ಎನ್ನುತ್ತಾರೆ ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT