ಪಾವಗಡ: ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ತಾಲ್ಲೂಕಿನಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ನಿರುಪಯುಕ್ತವಾಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.
ತಾಲ್ಲೂಕಿನ 225 ಜನವಸತಿ ಪ್ರದೇಶಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ₹118.10 ಕೋಟಿ ಮಂಜೂರಾಗಿದ್ದು, ಕೆಲ ಪಂಚಾಯಿತಿಗಳಲ್ಲಿ ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ.
225 ಜನವಸತಿ ಪ್ರದೇಶಗಳಲ್ಲಿ 89 ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯವಾಗುವ ಹಂತದಲ್ಲಿದೆ. 125 ಗ್ರಾಮಗಳಲ್ಲಿ ಭಾಗಶಃ ಕಾಮಗಾರಿ ಪ್ರಾರಂಭವಾಗಿದೆ. ವೈ.ಎನ್. ಹೊಸಕೋಟೆ, ಕೆ.ಟಿ. ಹಳ್ಳಿ ಸೇರಿದಂತೆ 9 ಗ್ರಾಮಗಳಲ್ಲಿ ಈವರೆಗೆ ಕಾಮಗಾರಿಯೇ ಆರಂಭವಾಗಿಲ್ಲ.
ಮುಗದಾಳಬೆಟ್ಟ, ಶೈಲಾಪುರ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಆರ್ಧದಷ್ಟು ಕಾಮಗಾರಿ ಮುಗಿಸಿ ಗುತ್ತಿಗೆದಾರರು ಈವರೆಗೆ ಗ್ರಾಮಗಳಿಗೆ ಬಂದಿಲ್ಲ. ಗುತ್ತಿಗೆ ಅವಧಿ ಮುಗಿದಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ರಸ್ತೆ ಅಗೆದು, ಮನೆಗಳ ಮುಂದೆ ಗುಂಡಿ ನಿರ್ಮಿಸಿ ತಿಂಗಳುಗಳು ಕಳೆದರೂ ಅವುಗಳನ್ನು ಮುಚ್ಚಿಲ್ಲ. ಇದರಿಂದ ಮಕ್ಕಳು, ವೃದ್ಧರು ಓಡಾಡಲೂ ಭಯಪಡುತ್ತಿದ್ದಾರೆ.
ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮಾತ್ರ ಮೀಟರ್ ಅಳವಡಿಸಲಾಗಿದೆ. ಕೆಲವೆಡೆ ಮೀಟರ್ ಅಳವಡಿಸಿಲ್ಲ. ಅದರಲ್ಲಿಯೂ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಗುತ್ತಿಗೆ ಪಡೆದವರು ಈವರೆಗೆ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಇಂತಹ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸುವಂತೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಅಧಿಕಾರಿಗಳು ನೋಟಿಸ್ ನೀಡಿ ಸುಮ್ಮನಾಗುತ್ತಿದ್ದಾರೆ. ಗುತ್ತಿಗೆ ರದ್ದುಪಡಿಸಿ ಬೇರೆಯವರಿಗೆ ಕೆಲಸ ನೀಡುವ ಗೋಜಿಗೂ ಹೋಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೆಲಸ ತಡವಾಗುತ್ತಿರುವುದಕ್ಕೆ ಗುತ್ತಿಗೆದಾರರು ತಮ್ಮದೇ ಕಾರಣಗಳನ್ನು ಹೇಳುತ್ತಿದ್ದಾರೆ. ಕಾಮಗಾರಿಯಲ್ಲಿ ಬಳಸಲಾದ ಪೈಪ್‌ಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದು 3ರಿಂದ 4 ತಿಂಗಳು ಕಳೆದರೂ ವರದಿ ನೀಡುವುದಿಲ್ಲ. ವರದಿ ನೀಡದೆ ಬಿಲ್ ಮಾಡುವುದಿಲ್ಲ. ಹೀಗಾಗಿ ಕಾಮಗಾರಿ ತಡವಾಗುತ್ತಿದೆ ಎನ್ನುವುದು ಗುತ್ತಿಗೆದಾರರ ವಾದ.
ಕೆಲ ಗುತ್ತಿಗೆದಾರರು ಮೊದಲ ಅಥವಾ ಎರಡನೇ ಬಿಲ್‌ಗಳನ್ನು ಪಡೆದುಕೊಂಡು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಹೋಗುತ್ತಾರೆ. ಮತ್ತೆ ಅಂತಹ ಕೆಲಸ ಬೇರೆಯವರಿಗೆ ಕೊಡಲೂ ಆಗುವುದಿಲ್ಲ. ಕೆಲಸ ಪೂರ್ಣಗೊಳಿಸಲೂ ಸಾಧ್ಯವಾಗದೆ ಅಧಿಕಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಡಾಂಬಾರು ರಸ್ತೆ, ಸಿಸಿ ರಸ್ತೆಗಳನ್ನು ಎಲ್ಲೆಂದರಲ್ಲಿ ಕಿತ್ತು ಹಾಕಲಾಗಿದೆ. ರಸ್ತೆಯನ್ನು ಪೈಪ್ ಹಾಕುವಷ್ಟು ಮಾತ್ರ ಕತ್ತರಿಸದೆ ಮೂರರಿಂದ ನಾಲ್ಕು ಅಡಿ ಅಗಲ ಅಗೆದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯನ್ನು ಹಾಳು ಮಾಡಲಾಗುತ್ತಿದೆ. ಕಾಮಗಾರಿ ಮುಕ್ತಾಯವಾದ ನಂತರ ಮತ್ತೆ ರಸ್ತೆ ಹಾಕಿಸಲು ಹರಾಜು ಪ್ರಕ್ರಿಯೆ ನಡೆಸುವ ಅನಿವಾರ್ಯತೆ ಇದೆ. ಇದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸಲಿದೆ.
ಜೆಜೆಎಂ ಕಾಮಗಾರಿಗೆ ನೀರಿನ ಪೈಪ್‌ಗಳನ್ನು ಭೂಮಿಯ ಒಳ ಭಾಗದಲ್ಲಿ ಅಳವಡಿಸಬೇಕು. ಆದರೆ ಬಹುತೇಕ ಪೈಪ್‌ಗಳು ಮೇಲ್ಭಾಗದಲ್ಲಿ ಕಾಣುತ್ತಿವೆ. ವಾಹನಗಳು ಸಂಚರಿಸಿದರೆ, ಪೈಪ್‌ಗಳು ಒಡೆದು ಹೋಗಿ ನೀರು ವ್ಯರ್ಥವಾಗುತ್ತಿದೆ. ಜಾನುವಾರುಗಳು ಓಡಾಡಿ ಪೈಪ್‌ನಿಂದ ನೀರು ಚಿಮ್ಮಿದ ಸಾಕಷ್ಟು ನಿದರ್ಶನಗಳನ್ನು ಗ್ರಾಮಸ್ಥರು ಹೇಳುತ್ತಾರೆ.
ಪೈಪ್ ಅಳವಡಿಸುವಾಗ ಚರಂಡಿಗಳನ್ನು ಒಡೆದು ಹಾಳು ಮಾಡಲಾಗಿದೆ. ಕೆಲವೆಡೆ ಚರಂಡಿಯಲ್ಲಿಯೇ ಪೈಪ್ ಹಾಕಲಾಗಿದೆ. ಪೈಪ್ ಒಡೆದು ಕೊಳಚೆ ನೀರು ಮನೆಗಳಿಗೆ ಸರಬರಾಜಾಗುವ ಸಂಭವವಿದೆ.
ಕಾಮಗಾರಿ ಪೂರ್ಣಗೊಳಿಸುವ ಮುನ್ನವೇ ಕೆಲವೆಡೆ ಕಾಮಗಾರಿ ಹೆಸರಿರುವ ನಾಮಫಲಕಗಳ ಫ್ಲಾಟ್‌ಫಾರಂಗಳು ಬಿರುಕು ಬಿಟ್ಟಿವೆ. ಕಾಮಗಾರಿ ಮಾಡಿ ವರ್ಷವಾದರೂ ಹನಿ ನೀರು ಕೊಟ್ಟಿಲ್ಲ. ಜೆಜೆಎಂ ನಲ್ಲಿಗಳು ನೆಪಕ್ಕೆ ಮಾತ್ರ ದೃಷ್ಟಿಗೊಂಬೆಯಂತೆ ನಿಂತಿವೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗುತ್ತಿಗೆದಾರರು ಕೇವಲ ಬಿಲ್ ಮಾಡಿಕೊಳ್ಳವತ್ತ ಗಮನಹರಿಸದೆ ಗುಣಮಟ್ಟದ ಕೆಲಸ ಮಾಡಬೇಕು. ಇದರಿಂದ ಗುತ್ತಿಗೆದಾರರಿಗೆ ಒಳ್ಳೆಯ ಹೆಸರು ಬರುತ್ತದೆ. ಜನತೆಗೆ ನೀರು ಕೊಟ್ಟಂತಾಗುತ್ತದೆ.
-ಹೇಮಂತ್ ಪಾವಗಡ
ಬಿಲ್ ಪಾವತಿಸುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಕಚೇರಿಯಲ್ಲಿ ಕೂತು ಯಾವುದೋ ಆಸೆಗೆ ಒತ್ತಡಕ್ಕೆ ಮಣಿದು ಸಹಿ ಹಾಕಬಾರದು.
-ನರಸಿಂಹ ಕೆ.ಟಿ. ಹಳ್ಳಿ
ಖಾಸಗಿ ವ್ಯಕ್ತಿಗಳು ಪೈಪ್‌ಲೈನ್ ಅಳವಡಿಸಲು ಚರಂಡಿ ನೀರು ಹೋಗಲು ರಸ್ತೆ ಅಗೆದರೆ ಸ್ಥಳಕ್ಕೆ ಧಾವಿಸಿ ದಂಡ ವಿಧಿಸುವ ಅಧಿಕಾರಿಗಳು ಕಾಮಗಾರಿ ಹೆಸರಿನಲ್ಲಿ ಕಿ.ಮೀ ಗಟ್ಟಲೆ ರಸ್ತೆ ಹಾಳು ಮಾಡಿದರೂ ಸುಮ್ಮನಿರುವುದಾದರೂ ಏಕೆ?
- ನರಸಿಂಹ ನಲಿಗಾನಹಳ್ಳಿ
ಚರಂಡಿಗಳನ್ನು ಹಾಳು ಮಾಡಲಾಗುತ್ತಿದೆ. ಚರಂಡಿಯಲ್ಲಿಯೇ ಪೈಪ್ ಅಳವಡಿಸಲಾಗುತ್ತಿದೆ. ಇಂತಹ ಅವೈಜ್ಞಾನಿಕ ಕಾಮಗಾರಿ ಸರಿಪಡಿಸಬೇಕು.
-ನರಸಿಂಹಪ್ಪ ಪಳವಳ್ಳಿ
ತುಂಗಭದ್ರಾ ಯೋಜನೆಗೂ ಹಿನ್ನಡೆ ತುಂಗಭದ್ರಾ ಕುಡಿಯುವ ನೀರು ಸರಬರಾಜಾದಲ್ಲಿ ಜೆಜೆಎಂ ಪೈಪ್‌ಲೈನ್ ಮೂಲಕ ಮನೆ ಮನೆಗೆ ತುಂಗಭದ್ರಾ ಕುಡಿಯುವ ನೀರು ಪೂರೈಸುವ ಯೋಜನೆ ಇದೆ. ಆದರೆ ಜೆಜೆಎಂ ಅಪೂರ್ಣ ಅವೈಜ್ಞಾನಿಕ ಕಾಮಗಾರಿ ಗುಣಮಟ್ಟದ ಕೊರತೆಯಿಂದ ತುಂಗಭದ್ರಾ ಯೋಜನೆಗೂ ಹಿನ್ನಡೆಯಾಗಲಿದೆ. ಸುಮಾರು ₹2 ಸಾವಿರ ಕೋಟಿ ವೆಚ್ಚದಲ್ಲಿ ತಾಲ್ಲೂಕಿಗೆ ನೀರು ಹರಿಸಿದರು ಜೆಜೆಎಂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಮನೆ ಮನೆಗೆ ಕುಡಿಯುವ ನೀರು ಪೂರೈಸುವುದು ಕಷ್ಟ ಸಾಧ್ಯ ಎನ್ನುವುದು ಸಾರ್ವಜನಿಕರ ಬೇಸರದ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.