ತುಮಕೂರು: ‘ಸರ್ಕಾರ ಪುಕ್ಕಟೆಯಾಗಿ ಅಕ್ಕಿ ಕೊಟ್ಟು ರೈತರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ರೈತರು ಹಲವು ಸೌಲಭ್ಯ ಪಡೆದು ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವುದನ್ನೇ ಮರೆತಿದ್ದಾರೆ’ ಎಂದು ಸಂಸದ ಜಿ.ಎಸ್.ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು.
ಹಿರೇಹಳ್ಳಿಯ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಮಾರಂಭದಲ್ಲಿ ಯುವಜನರಿಗೆ ತೆಂಗಿನ ಮರ ಹತ್ತುವ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಬಡವರು ಮತ್ತು ಮಧ್ಯಮ ವರ್ಗದ ರೈತರಿಗಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿದೆ. ದೊಡ್ಡ ಹಿಡುವಳಿದಾರರು ಈ ಸೌಲಭ್ಯ ಪಡೆಯುವುದು ಅಪರಾಧ. ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡಿ ಜಲಾಶಯ ನಿರ್ಮಿಸಿ, ನೂರಾರು ಕಿ.ಮೀ ದೂರದಿಂದ ನಾಲೆ ನಿರ್ಮಿಸಿ, ನೀರು ತಂದು ಕೆರೆಗಳಿಗೆ ತುಂಬಿಸಲಾಗಿದೆ. ಆದರೆ, ರೈತರು ಇಂದು ಕೃಷಿ ಕೆಲಸದಿಂದ ಹಿಂದೆ ಸರಿಯುತ್ತಿದ್ದಾರೆ ಎಂದರು.
ಬೀಜ, ರಸಗೊಬ್ಬರ, ಕೃಷಿ ಕಾರ್ಯಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ನೆರವಾಗುತ್ತದೆ. ಈ ವರ್ಷದ ಮೂರನೇ ಕಂತನ್ನು ಸೋಮವಾರ ಪ್ರಧಾನಿ ಮೋದಿ ಅವರೇ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ‘ಆದಾಯ ತೆರಿಗೆ ಪಾವತಿಸುವ ರೈತರು, ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರರು ಹಾಗೂ ಸಂವಿಧಾನಿಕ ಹುದ್ದೆಗಳಲ್ಲಿ ಇರುವವರು ಈ ಯೋಜನೆಯ ಲಾಭ ಪಡೆಯುವಂತಿಲ್ಲ’ ಎಂದು ಮಾಹಿತಿ ನೀಡಿದರು.
ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಲೋಗಾನಂದನ್, ಹಿರೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಉಪ ಕೃಷಿ ನಿರ್ದೇಶಕ ಟಿ.ಎನ್.ಅಶೋಕ್, ಕೃಷಿ ಇಲಾಖೆ ಮಧುಗಿರಿ ವಿಭಾಗದ ಉಪನಿರ್ದೇಶಕಿ ಜಿ.ದೀಪಾಶ್ರೀ, ಕೃಷಿ ತಜ್ಞರಾದ ಡಾ.ಜಗದೀಶ್, ಡಾ.ಪ್ರಶಾಂತ್ ಇತರರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.