ಸೋಮವಾರ, ಸೆಪ್ಟೆಂಬರ್ 20, 2021
21 °C
ಎಚ್.ವಿಶ್ವನಾಥ್ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು

ಟಿಪ್ಪುವಿಗೆ ಎರಡು ಮುಖವಿತ್ತು: ಸಚಿವ ಸಿ.ಟಿ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಟಿಪ್ಪುವಿನ ಬಗ್ಗೆ ಅರ್ಧ ಸತ್ಯವನ್ನಷ್ಟೇ ತಿಳದುಕೊಂಡು ಟಿಪ್ಪುವನ್ನು ಈ ಮಣ್ಣಿನ ಮಗ ಎಂದಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಧ ಸತ್ಯ ಸುಳ್ಳಿಗಿಂತ ಹೆಚ್ಚು ಅಪಾಯಕಾರಿ. ನನ್ನ ಅಧ್ಯಯನ ಪ್ರಕಾರ ಟಿಪ್ಪುವಿಗೆ 2 ಮುಖವಿದೆ. 1781 ರಿಂದ 1793ರವರೆಗೆ ಆತನಿಗೆ ಒಂದು ಮುಖವಿತ್ತು. ಈ ವೇಳೆ ಟಿಪ್ಪು ಅತ್ಯಂತ ಕ್ರೂರಿಯಾಗಿ ವರ್ತಿಸಿದ್ದ. ಆಗ ಕನ್ನಡ ಆಡಳಿತ ಭಾಷೆಯ ಬದಲಿಗೆ ಪರ್ಷಿಯನ್‌ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದ್ದ. ಆಗ ಮೈಸೂರು–ನಜರಾಬಾದ್, ಸಕಲೇಶಪುರ–ಮುಜರಬಾದ್ ಹೀಗೆ ಹಲವು ಊರುಗಳ ಹೆಸರನ್ನು ಟಿಪ್ಪು ಬದಲಾಯಿಸಿದ್ದ. ಆ ಸಂದರ್ಭದಲ್ಲಿಯೇ ಮದಕರಿ ವಂಶಸ್ಥರು ಸೇರಿದಂತೆ ಅನೇಕರ ಕಗ್ಗೊಲೆಯನ್ನು ಮಾಡಿದ್ದ’ ಎಂದರು.

ಆದರೆ, 1793ರಿಂದ 1799ರವರೆಗೆ ಇನ್ನೊಂದು ಮುಖವಿತ್ತು. ಈ ವೇಳೆ ಟಿಪ್ಪು ಉದಾರವಾದಿಯಾಗಿ ವರ್ತಿಸಿದ್ದ. ಶೃಂಗೇರಿ ಮಠಕ್ಕೆ ದಾನ ಹೀಗೆ ಹಲವು ಕೆಲಸಗಳನ್ನು ಮಾಡಿದ್ದಾನೆ. ಇದು ಮನ ಪರಿವರ್ತನೆಯೋ, ಇಲ್ಲವೇ ರಾಜಕೀಯ ತಂತ್ರಗಾರಿಕೆಯೋ ಎಂಬ ಬಗ್ಗೆ ಅಧ್ಯಯನ ನಡೆಯಬೇಕಿದೆ. ಆತ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಉದಾರವಾದಿತನ ತೋರಿದರೇ ಅದನ್ನು ಒಪ್ಪಲಾಗದು. ಆದರೆ, ನಿಜವಾಗಿಯೂ ಮನಪರಿವರ್ತನೆಯಾದರೇ ನಾವು ಅದನ್ನು ಸ್ವೀಕರಿಸುತ್ತೇವೆ ಎಂದು ಹೇಳಿದರು.

ಹಾಗಾಗಿ ಎಚ್.ವಿಶ್ವನಾಥ್ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಮಹಾರಾಣಿ ಲಕ್ಷ್ಮಮ್ಮಣ್ಣಿಯ ಅಧಿಕಾರ ಸೇರಿದಂತೆ ಹಲವರ ಅಧಿಕಾರವನ್ನು ಹೈದರಾಲಿ ಮತ್ತು ಟಿಪ್ಪು ಮೋಸದಿಂದ ಕಬಳಿಸುತ್ತಾರೆ. ಮೋಸದಿಂದ ಕಬಳಿಸಿದವನು ಮಣ್ಣಿನ ಮಗನಾಗಲು ಹೇಗೆ ಸಾಧ್ಯ ಎಂಬುದನ್ನು ವಿಶ್ವನಾಥ್ ಸ್ಪಷ್ಟಪಡಿಸಬೇಕು. ‘ನನ್ನ ಪ್ರಕಾರ ಮಣ್ಣಿನ ಮಗನ ಬಿರುದು ಕೊಡುವುದೇ ಆದರೆ, ಅದು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ ಹೀಗೆ ಈ ಮಣ್ಣಿನ ತತ್ವವನ್ನು ಮೈಗೂಡಿಸಿಕೊಂಡವರಿಗೆ ಕೊಡಬೇಕು’ ಎಂದರು.

ಹೊಸ ಶಿಕ್ಷಣ ನೀತಿ ವಿರೋಧ ಅರ್ಥ ಹೀನ: ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ಭಾಷೆಯನ್ನು ಏರಿಕೆ ಮಾಡಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ಇಲ್ಲಿ ಕೊಡಲಾಗಿದೆ. ದೇಶದ ಅಧಿಕೃತ 22 ಭಾಷೆಗಳಲ್ಲಿ ಯಾವ ಭಾಷೆಯನ್ನಾದರೂ ಓದಬಹುದು. ಹಿಂದಿಯನ್ನೆ ಕಲಿಯಬೇಕು ಅಂತೇನಿಲ್ಲ. ಇದು ಆಯ್ಕೆಯಷ್ಟೇ. ಇದನ್ನು ತಿಳಿಯದ ವಿರೋಧ ಮಾಡುವುದು ಅರ್ಥ ಹೀನ ಎಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಅಥವಾ ರಾಜ್ಯಭಾಷೆಯಲ್ಲಿ ಕಡ್ಡಾಯವಾಗಿ ಮಾಡಲು ಇದೊಂದು ಸುವರ್ಣಾವಕಾಶ. ಹಿಂದಿ ವಿರೋಧಿಸುವುದೇ ಕನ್ನಡದ ಉಳಿವು ಎಂದು ಭಾವಿಸುವವರಿಗೆ ನಾನೊಂದು ಪ್ರಶ್ನೆಯನ್ನು ಕೇಳುತ್ತೇನೆ. ಕರ್ನಾಟಕದಲ್ಲಿ ಕನ್ನಡ ಶಾಲೆಗಳು ಬಾಗಿಲು ಹಾಕುತ್ತಿರುವುದು ಹಿಂದಿಯ ಕಾರಣಕ್ಕಾಗಿ ಅಲ್ಲ. ಇಂಗ್ಲಿಷ್‌ನ ಕಾನ್ವೆಂಟ್‌ ಶಾಲೆಗಳ ಕಾರಣದಿಂದಾಗಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು