ಶುಕ್ರವಾರ, ಡಿಸೆಂಬರ್ 4, 2020
22 °C
ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಆತಂಕ

‘ಈಗಿನ ರಾಜಕಾರಣ ಕರಾಳ ದಿನ ಸೃಷ್ಟಿಸಲಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಜ್ಜನರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿಲ್ಲ. ಈಗಿನ ರಾಜಕಾರಣ ನೋಡುತ್ತಿದ್ದರೆ ಮುಂದಿನ ಕರಾಳ ದಿನಗಳಿಗೆ ಸಾಕ್ಷಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಇಲ್ಲಿ ಶುಕ್ರವಾರ ಆತಂಕ ವ್ಯಕ್ತಪಡಿಸಿದರು.

ಮಾಜಿ ಸಂಸದ ಸಿ.ಎನ್.ಭಾಸ್ಕರಪ್ಪ ಅವರ 78ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಬದುಕು, ಬರಹ, ಸೇವಾ ಕಾರ್ಯವನ್ನು ಒಳಗೊಂಡ ‘ವನಸುಮ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾಸ್ಕರಪ್ಪ ಸಜ್ಜನ ರಾಜಕಾರಣಿ. ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರ ಹಿಂದೆ ಹಿಂದುಳಿದ ವರ್ಗಗಳ ಶಕ್ತಿ ಕಾರಣವಾಗಿದೆ. ಇಂದಿಗೂ ಎಲ್ಲ ಪಕ್ಷಗಳಿಗೂ ಮಾದರಿಯಾಗಿದ್ದಾರೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಬಾರಿ ಗೆದ್ದರೆ ಮನೆಮಂದಿಗೆಲ್ಲ ಆಸ್ತಿ ಮಾಡುತ್ತಾರೆ. ಆದರೆ ಭಾಸ್ಕರಪ್ಪ ವೈಯಕ್ತಿಕ ಬೆಳವಣಿಗೆಗೆ ಒತ್ತುನೀಡದೆ ಸಾರ್ವಜನಿಕರ ಕೆಲಸ ಮಾಡಿದರು’ ಎಂದು ಸ್ಮರಿಸಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ‘1996ರಲ್ಲಿ ಲೋಕಸಭೆಗೆ ಭಾಸ್ಕರಪ್ಪ ಸ್ಪರ್ಧಿಸಿದ್ದಾಗ ಅವರ ಪರವಾಗಿ ಕೆಲಸ ಮಾಡಿದೆ. ಯಾವ ಪಕ್ಷವೂ ನಮಗೆ ಸಂಬಳ ಕೊಡುವುದಿಲ್ಲ. ಪಿಂಚಣಿಯೂ ಇಲ್ಲ. ನನ್ನ ಸೈದ್ಧಾಂತಿಕ ವಿಚಾರಕ್ಕೆ ಬದ್ಧನಾಗಿ ಕೆಲಸ ಮಾಡುತ್ತೇನೆ. ಇದರಲ್ಲಿ ರಾಜಿಯಾಗುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ‍ಪ್ರಾಮಾಣಿಕರು, ಮನುಷ್ಯತ್ವ ಇರುವವರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ದರೋಡೆಕೋರರು ಮಾತ್ರ ಗೆಲ್ಲುತ್ತಿದ್ದಾರೆ’ ಎಂದು ವಿಷಾದಿಸಿದರು.

ಶ್ರೀರಾಮನಗರದ ಗುಂಚಿಚೌಕದಿಂದ ಹೊರಪೇಟೆ ವರೆಗಿನ ರಸ್ತೆಗೆ ಸಿ.ಎನ್.ಭಾಸ್ಕರಪ್ಪ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವಂತೆ ಮಹಾನಗರ ಪಾಲಿಕೆಯನ್ನು ಒತ್ತಾಯಿಸಿದರು.

ಪ್ರಾಧ್ಯಾಪಕ ಬಿ.ಕೆ.ರವಿ, ‘ಹಿಂದುಳಿದ ವರ್ಗಗಳ ನಾಯಕರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ದಾಖಲಿಸುವ ಕೆಲಸವನ್ನು ಶೋಷಿತ ವರ್ಗಗಳು ಮಾಡುತ್ತಿಲ್ಲ. ಹಿಂದುಳಿದ ವರ್ಗಗಳ ಚಳವಳಿಗೆ ಕಾರಣರಾದ ಕೋಳೂರು ಮಲ್ಲಯ್ಯ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ನಾಗನಗೌಡರ ಬಗ್ಗೆ ದಾಖಲೆಗಳಿಲ್ಲದೆ ಇರುವುದು ಶೋಚನೀಯ’ ಎಂದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಕೃತಿಯ ಲೇಖಕ ಕವಿತಾಕೃಷ್ಣ, ಕುರುಬರ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪಜ್ಜ ಮಾತನಾಡಿದರು. ಮೇಯರ್ ಫರೀದಾ ಬೇಗಂ, ಮುಖಂಡರಾದ ಡಾ.ಹುಲಿನಾಯ್ಕರ್, ಎಚ್.ನಿಂಗಪ್ಪ, ಬಿ.ಲಕ್ಕಪ್ಪ, ಡಾ.ಸಿ.ಎನ್.ಎನ್.ರಾಜು, ಸಿ.ಎನ್.ಬಾಲವರ್ಧನ್, ಆಚಾರ್ಯ ನಾಗರಾಜು, ಸಿ.ಶಿವಮೂರ್ತಿ, ಟಿ.ಆರ್.ಸುರೇಶ್, ಮೈಲಾರಪ್ಪ, ಟಿ.ಇ.ರಘುರಾಮ್ ಉಪಸ್ಥಿತರಿದ್ದರು.

ಪಾಲಿಕೆ ಸದಸ್ಯರಾದ ನಳಿನಾ ಇಂದ್ರಕುಮಾರ್, ಮಲ್ಲಿಕಾರ್ಜುನ್, ಬಿ.ಎಸ್.ಮಂಜುನಾಥ್, ಲಕ್ಷ್ಮಿನರಸಿಂಹರಾಜು, ತುಮಕೂರು ಟೈಮ್ಸ್ ಪತ್ರಿಕೆಯಲ್ಲಿ ಭಾಸ್ಕರಪ್ಪ ಅವರೊಂದಿಗೆ ಕಾರ್ಯನಿರ್ವಹಿಸಿದ್ದ ಟಿ.ಎಸ್.ಗಟ್ಟಿ, ಆರ್.ಕಾಮರಾಜು, ಪ್ರಸನ್ನ, ಮಣ್ಣೆರಾಜು, ಕೆ.ಬಿ.ಚಂದ್ರಮೌಳಿ, ಗೋಪಾಲರಾವ್, ಚಿ.ನಿ.ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.