ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಪರಿಹಾರ ಸಿಗಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿಕೆ
Last Updated 21 ಜನವರಿ 2022, 7:39 IST
ಅಕ್ಷರ ಗಾತ್ರ

ತುಮಕೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆದರೆ ಸರ್ಕಾರದ ಕಡೆಯಿಂದ ಯಾವುದೇ ಸೌಲಭ್ಯ ಹಾಗೂ ಪರಿಹಾರ ಸಿಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದವರಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸಲಾಗಿತ್ತು. ಆದರೆ, 3ನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚ ನೀಡುವುದಿಲ್ಲ. ಮೃತಪಟ್ಟರೆ ಪರಿಹಾರದ ಹಣವೂ ಸಿಗುವುದಿಲ್ಲ’ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಬಿಟ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್ 3ನೇ ಅಲೆಯಲ್ಲಿ ಜಿಲ್ಲೆಯ ಜನ ಸಾಕಷ್ಟು ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ಕೋವಿಡ್ ತೀವ್ರತೆ ಕಡಿಮೆ ಇದೆ ಎಂದು ಜನತೆ ಅಸಡ್ಡೆ ಮಾಡಬಾರದು. ಆದರೆ ವಿನಾಕಾರಣ ಆತಂಕ ಸೃಷ್ಟಿಸಬಾರದು. ಎಚ್ಚರಿಕೆವಹಿಸಿ, ಅಂತರ ಕಾಪಾಡಿಕೊಂಡು ಬದುಕಬೇಕು ಎಂದರು.

ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಗೆ ಅಗತ್ಯ ಇರುವ ಔಷಧಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸರಬರಾಜು ಮಾಡುವಂತೆ ಸಭೆಯಲ್ಲಿ ಸೂಚಿಸಲಾಗಿದೆ. ಯಾವುದಾದರೂ ಔಷಧಿ ಕೊರತೆ ಎದುರಾದರೆ ಜಿಲ್ಲಾಧಿಕಾರಿ ನೇರವಾಗಿ ಖರೀದಿಸಿ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 1ರಿಂದ 18 ವರ್ಷದ ಮಕ್ಕಳು, 60 ವರ್ಷ ಮೇಲ್ವಟ್ಟವರು, ಗರ್ಭಿಣಿಯರ ಮೇಲೂ ನಿಗಾವಹಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಕ್ರಿಯರಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಪ್ರತಿ ಆರೋಗ್ಯ ಕೇಂದ್ರದಲ್ಲೂ ಆಮ್ಲಜನಕದ ಕಾನ್ಸನ್‍ಟ್ರೇಟರ್ ಒದಗಿಸಲಾಗಿದೆ. ತುರ್ತುಸ್ಥಿತಿ ಎದುರಾದರೆ ಹಳ್ಳಿಯಲ್ಲೇ ಚಿಕಿತ್ಸೆ ಕೊಡಿಸಲು ಕ್ರಮಕೈಗೊಳ್ಳಲಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಯಾವುದೇ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದರು.

ಶಾಲಾ ಮಕ್ಕಳಿಗೂ ಸೋಂಕು ತಗುಲಿದ್ದು, ಈವರೆಗೆ 1,376 ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಇದರಲ್ಲಿ 1ರಿಂದ 18 ವರ್ಷದ ಮಕ್ಕಳು ಸೇರಿದ್ದಾರೆ. ಯಾವುದಾದರೂ ಶಾಲೆಯಲ್ಲಿ 20ರಿಂದ 25 ಮಕ್ಕಳಿಗೆ ಸೋಂಕು ತಗುಲಿದ್ದರೆ ಅಂತಹ ಶಾಲೆ ಮುಚ್ಚಿಸಲು ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ 7 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. 4 ಸಾವಿರದಿಂದ 4,500 ಪರೀಕ್ಷೆ ಮಾಡಲು ಗುರಿ ನೀಡಲಾಗಿತ್ತು. ಆದರೆ, ಮೊದಲಿನಿಂದಲೂ ಜಿಲ್ಲೆಯಲ್ಲಿ 7 ಸಾವಿರ ಪರೀಕ್ಷೆ ಮಾಡಿಕೊಂಡು ಬರುತ್ತಿರುವುದರಿಂದ ಈಗಲೂ ಅದನ್ನೇ ಮುಂದುವರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT