ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಗಿರಿ: ‘ಆದರ್ಶ’ ಗ್ರಾಮಕ್ಕಿಲ್ಲ ಅನುದಾನ

Published 23 ಸೆಪ್ಟೆಂಬರ್ 2023, 7:36 IST
Last Updated 23 ಸೆಪ್ಟೆಂಬರ್ 2023, 7:36 IST
ಅಕ್ಷರ ಗಾತ್ರ

ಮಧುಗಿರಿ: ಸಂಸದರ ಆದರ್ಶ ಗ್ರಾಮ ವೆಂದರೆ ಅಭಿವೃದ್ಧಿಯಲ್ಲಿ ತಾಲ್ಲೂಕಿನ ಮಾದರಿಯಾಗಿರುತ್ತದೆ ಎಂದು ಜನರು ನಂಬಿದ್ದರು. ಆದರೆ ತಾಲ್ಲೂಕಿನ ಗಂಜಲುಗುಂಟೆ ಗ್ರಾಮ ಪಂಚಾಯಿತಿ ಇಂತಹ ಯಾವುದೇ ಅಭಿವೃದ್ಧಿ ಕಾಣದೇ ಸೌಕರ್ಯಗಳಿಂದ ವಂಚಿತವಾಗಿದೆ.

2019ರಲ್ಲಿ ಕಸಬಾ ವ್ಯಾಪ್ತಿಯ ಗಂಜಲುಗುಂಟೆ ಗ್ರಾಮ ಪಂಚಾಯಿತಿಯನ್ನು ಸಂಸದರ ಆದರ್ಶ ಗ್ರಾಮವನ್ನಾಗಿ ಜಿ.ಎಸ್.ಬಸವರಾಜು ಅವರು ಆಯ್ಕೆ ಮಾಡಿಕೊಂಡು ಒಂದಷ್ಟು ಕ್ರಿಯಾ ಯೋಜನೆಯನ್ನು ಮಾಡಿಸಿದ್ದರು. ಆದರ್ಶ ಗ್ರಾಮ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸಂಸದರು ಹಾಗೂ ಅಧಿಕಾರಿಗಳು ನುಡಿದ ಮಾತುಗಳನ್ನು ಕೇಳಿದ ಈ ಗ್ರಾಮ ಪಂಚಾಯಿತಿ ಜನರು ಅಭಿವೃದ್ಧಿಯ ಕನಸು ಕಂಡಿದ್ದರು. ಆದರೆ ದಿನ ಕಳೆದಂತೆ ಅಧಿಕಾರಿಗಳು ನೀಡಿದ ಭರವಸೆ ಹುಸಿಯಾದವು. ಆದರ್ಶ ಗ್ರಾಮಕ್ಕೆ ತಯಾರಿಸಿದ ಕ್ರಿಯಾ ಯೋಜನೆಗಳು ಕಾಗದದಲ್ಲಿ ಉಳಿಯುವಂತಾಗಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಗ್ರಂಥಾಲಯ, ಅಂಗನವಾಡಿ, ಶಾಲೆ, ವಿದ್ಯುತ್ ದೀಪ, ಮೈದಾನ, ಚರಂಡಿ, ಒಳಚರಂಡಿ, ಆಸ್ಪತ್ರೆ, ಸಾರಿಗೆ, ಸ್ವಚ್ಛತೆ ಸೇರಿದಂತೆ ಅನೇಕ ಸೌಕರ್ಯಗಳು ಸಂಸದರ ಆದರ್ಶ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾರಾಜಿಸಬೇಕು. ಆದರೆ ಹೇಳಿಕೊಳ್ಳುವಂತಹ ಯಾವುದೇ ಕಾರ್ಯ ನಡೆದಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ, ರಸ್ತೆಯ ಮೇಲೆ ತ್ಯಾಜ್ಯ ನೀರು ಹರಿಯುವಂತಾಗಿದೆ. ಅಲ್ಲಲ್ಲಿ ಕೊಳಚೆ ನೀರು ನಿಂತು ಸೊಳ್ಳೆ ಮತ್ತು ಕ್ರಿಮಿಕೀಟಗಳ ಅವಾಸ ಕೇಂದ್ರವಾಗಿ ಪರಿವರ್ತನೆಯಾಗಿದೆ. ರೋಗಗಳ ಆತಂಕವೂ ಎದುರಾಗಿದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳಿಗೆ ಸಾರಿಗೆ ಸೌಕರ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ದ್ವಿಚಕ್ರ ವಾಹನ, ಆಟೊ ಮತ್ತಿತರ ವಾಹನಗಳಿಗೆ ಅವಲಂಬಿತವಾಗಬೇಕಿದೆ. ರೋಗಿಗಳ ಪಾಡು ಹೇಳತೀರದು. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಸಂಸದರ ಆದರ್ಶ ಗ್ರಾಮದ ಉದ್ಘಾಟನೆಗೆ ಸಂಸದ ಜಿ.ಎಸ್.ಬಸವರಾಜು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರೆ ಹೊರತು ಈವರೆಗೆ ಒಮ್ಮೆಯೂ ತಿರುಗಿ ನೋಡಿಲ್ಲ. ಯಾವ ಅಭಿವೃದ್ಧಿ ಕಾರ್ಯ ನಡೆದಿವೆ ಎಂದು ಪರಿಶೀಲನೆಯೂ ಮಾಡಲಿಲ್ಲ. ಸಂಸದರ ನಿಧಿಯಿಂದ ಅನುದಾನ ಹಾಕಿರುವುದು ಜನರ ಕಣ್ಣಿಗೆ ಕಂಡಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. 

ಆದರ್ಶ ಗ್ರಾಮ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನವಿಲ್ಲ. ಆದರೆ ನರೇಗಾ ಯೋಜನೆ ಬಳಸಿಕೊಂಡು ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ಪಿಡಿಒ ರಂಗನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT