ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಲಿಂಕ್‌ ಕಳುಹಿಸಿ ₹1.94 ಲಕ್ಷ ವಂಚನೆ

ಹೊಸ ಹಾದಿ ಕಂಡುಕೊಂಡ ಸೈಬರ್‌ ವಂಚಕರು, ಒಟಿಪಿ ನೀಡದಿದ್ದರೂ ಹಣ ವರ್ಗಾವಣೆ
Published 25 ಮೇ 2024, 4:43 IST
Last Updated 25 ಮೇ 2024, 4:43 IST
ಅಕ್ಷರ ಗಾತ್ರ

ತುಮಕೂರು: ಸೈಬರ್‌ ಕಳ್ಳರ ಜಾಲ ಮತ್ತಷ್ಟು ಸಕ್ರಿಯವಾಗಿದ್ದು, ಜನರ ಗಮನಕ್ಕೆ ಬಾರದಂತೆ ಅವರ ಬ್ಯಾಂಕ್‌ ಖಾತೆಗಳಿಂದ ಹಣ ಎಗರಿಸುತ್ತಿದ್ದಾರೆ. ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ಹೇಳದಿದ್ದರೂ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ.

ಸೈಬರ್‌ ಆರೋಪಿಗಳು ಬ್ಯಾಂಕ್‌ ಹೆಸರಿನಲ್ಲಿ ಮೊಬೈಲ್‌ಗೆ ಲಿಂಕ್‌ ಕಳುಹಿಸುತ್ತಾರೆ. ಸಾರ್ವಜನಿಕರು ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಸಾಕು ಅವರ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಇದೇ ರೀತಿಯಾಗಿ ನಗರದ ಸಿದ್ಧಗಂಗಾ ಬಡಾವಣೆಯ ಜಿ.ಎಚ್‌.ಹೊನ್ನಪ್ಪ ಎಂಬುವವರಿಗೆ ₹1.94 ಲಕ್ಷ ವಂಚಿಸಲಾಗಿದೆ.

ಮೇ 21ರಂದು ಅವರ ಮೊಬೈಲ್‌ಗೆ ‘ಎಪಿಕೆ ಕೆನರಾ ಬ್ಯಾಂಕ್‌ 12 ಎಪಿಕೆ 6.6ಎಂಬಿ ಎಪಿಕೆ’ ಎಂದು ಇಂಗ್ಲಿಷ್‌ನಲ್ಲಿ ಲಿಂಕ್‌ ಬಂದಿದೆ. ಬ್ಯಾಂಕ್‌ನಿಂದ ಲಿಂಕ್‌ ಬಂದಿದೆ ಎಂದು ನಂಬಿ ಅದರ ಮೇಲೆ ಕ್ಲಿಕ್‌ ಮಾಡಿದ್ದಾರೆ. ಅದೇ ದಿನ ಸಂಜೆ ಹೊನ್ನಪ್ಪ ಖಾತೆಯಿಂದ ₹1.90 ಲಕ್ಷ, ₹4,900 ಹಣ ಆನ್‌ಲೈನ್‌ ಮೂಲಕ ಎರಡು ನಂಬರ್‌ಗಳಿಗೆ ವರ್ಗಾವಣೆಯಾಗಿದೆ. ಈ ಕುರಿತು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಗೆ ₹1.54 ಲಕ್ಷ ಮೋಸ: ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ನಗರದ ಮಂಜುನಾಥ ನಗರದ ನಿವಾಸಿ ಎಸ್‌.ಪುಷ್ಪಾ ಎಂಬುವರು ₹1.30 ಲಕ್ಷ ಕಳೆದುಕೊಂಡಿದ್ದಾರೆ.

ಟೆಲಿಗ್ರಾಮ್‌ ಮುಖಾಂತರ ಪರಿಚಯಿಸಿಕೊಂಡ ಸೈಬರ್‌ ಆರೋಪಿಗಳು ಆನ್‌ಲೈನ್‌ ಮೂಲಕ ಟಾಸ್ಕ್‌ಗಳನ್ನು ಮುಗಿಸಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿ 2023ರ ಏ. 18ರಿಂದ 2024ರ ಏ. 19ರ ವರೆಗೆ ₹1.30 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ಹಣ ವಾಪಸ್‌ ಹಾಕಿಲ್ಲ.

ಮೇ 21ರಂದು ಪುಷ್ಪಾ ಅವರ ಮೊಬೈಲ್‌ಗೆ ‘ಸಿಎಸ್‌ಸಿ ಸರ್ವೀಸ್‌ ಜಾಯಿನ್ಸ್‌’ ಎಂಬ ಎಪಿಕೆ ಫೈಲ್‌ ಬಂದಿದೆ. ಇದನ್ನು ಅವರು ಇನ್‌ಸ್ಟಾಲ್‌ ಮಾಡಿದ್ದಾರೆ. ನಂತರ ಅವರ ಕೆನರಾ ಬ್ಯಾಂಕ್‌ ಖಾತೆಯಲ್ಲಿದ್ದ ₹24,900 ಹಣ ವರ್ಗಾವಣೆಯಾಗಿದೆ. ವಂಚನೆಯ ಬಗ್ಗೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

‘ಲಿಂಕ್‌ ಕ್ಲಿಕ್‌ ಮಾಡಬೇಡಿ’

‘ಎಪಿಕೆ ಫೈಲ್‌’ ಆ್ಯಪ್‌ಗಳ ಲಿಂಕ್‌ ಕ್ಲಿಕ್‌ ಮಾಡಿದರೆ ನಿಮ್ಮ ಮೊಬೈಲ್‌ಗೆ ಬರುವ ಎಲ್ಲ ಮೆಸೇಜ್‌ ಸೈಬರ್ ವಂಚಕರಿಗೆ ಫಾರ್ವರ್ಡ್‌ ಆಗುತ್ತದೆ. ನಂತರ ಅವರು ಸುಲಭವಾಗಿ ಹಣ ದೋಚುತ್ತಾರೆ. ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಯ ವಾಟ್ಸ್‌ಆ್ಯಪ್‌ ಟೆಕ್ಸ್ಟ್‌ ಮೆಸೇಜ್‌ ಮುಖಾಂತರ ಬರುವ ಲಿಂಕ್‌ ಕ್ಲಿಕ್‌ ಮಾಡಬೇಡಿ. ಒಂದು ವೇಳೆ ಕ್ಲಿಕ್‌ ಮಾಡಿದರೆ ತಕ್ಷಣಕ್ಕೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ’ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಕ್ಲಿಕ್‌ ಮಾಡಿದ ನಂತರ ಬ್ಯಾಂಕ್‌ ಸಂಪರ್ಕಿಸಿ ತಕ್ಷಣಕ್ಕೆ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಬೇಕು. ಹಣ ವಂಚನೆಯಾದರೆ ಸೈಬರ್‌ ಕ್ರೈಮ್‌ ಸಹಾಯವಾಣಿ 1930 ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT