ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಗ್ರಂಥಾಲಯದ 2 ಮಹಡಿ ಖಾಲಿ!

ಉದ್ಘಾಟನೆಯಾಗಿ ವರ್ಷ ಕಳೆದರೂ ಪೂರ್ಣ ಪ್ರಮಾಣದ ಬಳಕೆಗೆ ನಿರಾಸಕ್ತಿ
Published 1 ಮೇ 2024, 23:26 IST
Last Updated 1 ಮೇ 2024, 23:26 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ನಗರ ಕೇಂದ್ರ ಗ್ರಂಥಾಲಯ ಉದ್ಘಾಟನೆಯಾಗಿ ವರ್ಷ ಕಳೆದರೂ ಇದುವರೆಗೆ ಪೂರ್ಣ ಪ್ರಮಾಣದ ಬಳಕೆಗೆ ಲಭ್ಯವಾಗಿಲ್ಲ. 3 ಮತ್ತು 4ನೇ ಮಹಡಿ ಇಂದಿಗೂ ಖಾಲಿಯಾಗಿದೆ.

₹29.94 ಕೋಟಿ ವೆಚ್ಚದಲ್ಲಿ ಒಟ್ಟು ನಾಲ್ಕು ಮಹಡಿಗಳ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುಸಜ್ಜಿತ ಸಭಾಂಗಣ, ಶೌಚಾಲಯಗಳು, ಲಿಫ್ಟ್‌, ಉಪಾಹಾರ ವಿಭಾಗ, ನಿಯತ ಕಾಲಿಕೆಗಳ ವಿಭಾಗ, ಮಹಿಳಾ, ಮಕ್ಕಳ ವಿಭಾಗ, ಸ್ಪರ್ಧಾತ್ಮಕ ವಿಭಾಗ, ದಿನ ಪತ್ರಿಕೆ ವಿಭಾಗ, ಎರವಲು ವಿಭಾಗ ಸೇರಿದಂತೆ ಹಲವು ಸೌಲಭ್ಯಗಳನ್ನು ಗ್ರಂಥಾಲಯದಲ್ಲಿ ಕಲ್ಪಿಸಲಾಗಿದೆ.

ನೆಲಮಹಡಿಯಲ್ಲಿ ಸಭಾಂಗಣ, ಅಧಿಕಾರಿಗಳ ಕಚೇರಿ ಇದೆ. ಮೊದಲ ಮಹಡಿಯನ್ನು ದಿನ ಪತ್ರಿಕೆ ಓದುಗರಿಗೆ ಮೀಸಲಿಡಲಾಗಿದೆ. 2ನೇ ಮಹಡಿಯಲ್ಲಿ ಡಿಜಿಟಲ್‌ ಗ್ರಂಥಾಲಯ, ಅಂಧರ ವಿಭಾಗ, ಮಕ್ಕಳ ವಿಭಾಗ ಪ್ರಾರಂಭಿಸಲಾಗಿದೆ. 3 ಮತ್ತು 4ನೇ ಮಹಡಿಗಳು ಗ್ರಂಥಾಲಯ ಉದ್ಘಾಟನೆಯಾದ ದಿನದಿಂದಲೂ ಬಳಕೆಗೆ ಲಭ್ಯವಾಗಿಲ್ಲ.

ಪ್ರಾರಂಭದಲ್ಲಿ ಈ ಎರಡು ಮಹಡಿಗಳನ್ನು ಅಧಿಕಾರಿಗಳು ಖಾಸಗಿಯವರಿಗೆ ಬಾಡಿಗೆ ಕೊಡುವ ಉದ್ದೇಶ ಹೊಂದಿದ್ದರು. ಇನ್‌ಕ್ಯುಬೇಷನ್‌ ಕೇಂದ್ರ ಪ್ರಾರಂಭಕ್ಕೆ 4ನೇ ಮಹಡಿ ಮೀಸಲಿಡಲಾಗಿದೆ ಎಂದು ಹೇಳುತ್ತಾ ಬಂದಿದ್ದರು. ಆದರೆ, ಇಲ್ಲಿ ಇನ್‌ಕ್ಯುಬೇಷನ್‌ ಕೇಂದ್ರ ಪ್ರಾರಂಭಿಸಲು ಯಾರೊಬ್ಬರೂ ಮುಂದೆ ಬರಲಿಲ್ಲ. ಇದರಿಂದ ಖಾಲಿಯಾಗಿಯೇ ಉಳಿದಿದೆ.

2023ರ ಮಾರ್ಚ್‌ 5ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರಂಥಾಲಯ ಉದ್ಘಾಟಿಸಿದ್ದರು. ಉದ್ಘಾಟನೆಯಾದ ಹದಿನೈದು ದಿನಗಳ ನಂತರ ಸಾರ್ವಜನಿಕರ, ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆರಂಭದಲ್ಲಿ ಕೇವಲ ಮೂರು ಮಹಡಿಗಳನ್ನು ಮಾತ್ರ ಗ್ರಂಥಾಲಯಕ್ಕೆ ಬಿಟ್ಟುಕೊಡಲಾಗಿತ್ತು.

ಗ್ರಂಥಾಲಯಕ್ಕೆ ಪ್ರತಿ ದಿನ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದಾರೆ.‌ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಗ್ರಂಥಾಲಯವನ್ನೇ ಅವಲಂಬಿಸಿದ್ದಾರೆ. ಪ್ರತಿ ದಿನ ತಮ್ಮ ಊರುಗಳಿಂದ ಊಟದ ಬುತ್ತಿ ಕಟ್ಟಿಕೊಂಡು ಅಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೆ ಆಸನಗಳು ಸಿಗುತ್ತಿಲ್ಲ. ಇದರಿಂದಾಗಿ ಕಟ್ಟಡದ ಮುಂಭಾಗದ ಉದ್ಯಾನದಲ್ಲಿ ಅಭ್ಯಾಸ ನಡೆಸುತ್ತಾರೆ.

‘ಉಳಿದ ಎರಡು ಮಹಡಿಗಳಲ್ಲೂ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರೆ ಹಲವರಿಗೆ ಪ್ರಯೋಜನವಾಗಲಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಕಟ್ಟಡ ಉದ್ಘಾಟನೆಯಾದ ದಿನದಿಂದಲೂ ಮಹಡಿಗಳು ಖಾಲಿ ಇವೆ. ಇದರ ಬದಲಾಗಿ ಓದುಗರಿಗೆ ಅವಕಾಶ ನೀಡುವುದು ಉತ್ತಮ’ ಎಂದು ವಿದ್ಯಾರ್ಥಿ ಕುಮಾರ್‌ ಪ್ರತಿಕ್ರಿಯೆ ನೀಡಿದರು.

₹29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಗ್ರಂಥಾಲಯದಲ್ಲಿ ಅತ್ಯಾಧುನಿಕ ಸೌಲಭ್ಯ ಓದುಗರಿಗೆ ಆಸನಗಳ ಕೊರತೆ

ಇಡೀ ಕಟ್ಟಡ ಬಳಕೆ

ಸ್ಮಾರ್ಟ್‌ ಸಿಟಿಯಿಂದ ಅಭಿವೃದ್ಧಿಪಡಿಸಿದ ಇಡೀ ಕಟ್ಟಡವನ್ನು ಗ್ರಂಥಾಲಯಕ್ಕೆ ಬಳಸಿಕೊಳ್ಳುತ್ತೇವೆ. ಈಗಾಗಲೇ ಇದಕ್ಕಾಗಿ ಕಾರ್ಯಯೋಜನೆ ರೂಪಿಸಲಾಗಿದೆ. ಮೂರು ಮತ್ತು ನಾಲ್ಕನೇ ಮಹಡಿಯನ್ನೂ ಓದುಗರಿಗೆ ಮೀಸಲಿಡುವ ಕೆಲಸವಾಗುತ್ತಿದೆ. ಇದರಿಂದ ತುಂಬಾ ಜನರಿಗೆ ಅನುಕೂಲವಾಗಲಿದೆ. ಸರೋಜಮ್ಮ ಉಪ ನಿರ್ದೇಶಕರು ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT