ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಡಿಲ: ತರಕಾರಿಗೆ ಸಿಕ್ಕಿತು ಮಾರುಕಟ್ಟೆ ದಾರಿ

ರೈತರ ಬೆಳೆದ ಉತ್ಪನ್ನಗಳ ಸಾಗಾಟಕ್ಕೆ ಅನುವು ಮಾಡಿಕೊಡುತ್ತಿರುವ ಪೊಲೀಸರು
Last Updated 2 ಏಪ್ರಿಲ್ 2020, 16:45 IST
ಅಕ್ಷರ ಗಾತ್ರ

ತುಮಕೂರು: ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದಿನಸಿ ಪದಾರ್ಥಗಳನ್ನು ಸರಬರಾಜು ಮಾಡುವ ವಾಹನಗಳಿಗೆ ಈ ಮೊದಲು ಅಡ್ಡಗಾಲುಹಾಕುತ್ತಿದ್ದ ಪೊಲೀಸರು ಗುರುವಾರ ಈ ವಾಹನಗಳ ಸರಾಗ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಇದರಿಂದ ಜಮೀನುಗಳಲ್ಲಿ ಬೆಳೆದಿದ್ದ ತರಕಾರಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ರೈತರಿಗೆ ಕೊಂಚ ಅನುಕೂಲವಾಯಿತು.

ನಮ್ಮ ಊರಿಂದ ಮಾರುಕಟ್ಟೆಗೆ ತರಕಾರಿ ಒಯ್ಯಲು 18 ಕಿ.ಮೀ. ಕ್ರಮಿಸಬೇಕಿತ್ತು. ದಾರಿಯಲ್ಲಿ ಯಾವ ಪೊಲೀಸರು ನಮ್ಮನ್ನು ತಡೆಯಲಿಲ್ಲ. ಯಲ್ಲಾಪುರದಲ್ಲಿ ಪೊಲೀಸರು ಎದುರಾದಾಗ ನಾವೇ ಮೂಲಂಗಿ ತುಂಬಿದ್ದ ವಾಹನ ನಿಲ್ಲಿಸಿದೆವು. ಪೊಲೀಸರು ವಿಚಾರಿಸಿ, ‘ಬಿರ ಬಿರನೇ ಹೋಗಿ, ಮಾರಿಕೊಂಡು ಬರಪ್ಪ, ಮಾರ್ಕೆಟ್‌ನಲ್ಲಿ ತುಂಬ ಹೊತ್ತು ಇರಬೇಡಿ’ ಎಂದೇಳಿ ಕಳುಹಿಸಿದರು ಎಂದು ಕೊರಟಗೆರೆ ತಾಲ್ಲೂಕಿನ ಜೋನಿಗರಹಳ್ಳಿ ರೈತ ಲೋಕೇಶ್‌ ತಿಳಿಸಿದರು.

ಸಾಮಾನ್ಯ ದಿನಗಳಲ್ಲಿ 55 ಕೆ.ಜಿ ಮೂಲಂಗಿ ತುಂಬಿದ್ದ ಚೀಲಕ್ಕೆ ₹1,500ರ ವರೆಗೂ ಬೆಲೆ ಸಿಗುತ್ತಿತ್ತು. ಈಗ ₹700ರಿಂದ ₹ 800ರ ವರೆಗೆ ದರವಿದೆ.ನಿರೀಕ್ಷಿಸಿದಷ್ಟು ಲಾಭ ಸಿಗುತ್ತಿಲ್ಲ ಎಂದರು.

ಹಮಾಲಿಗಳಿಗೂ ವಿನಾಯಿತಿ ನೀಡಿ: ಲಾಕ್‌ಡೌನ್‌ ಇದ್ದರೂ ದಿನಗೂಲಿಗಾಗಿ ಹಮಾಲಿಗಳು ಎಪಿಎಂಸಿಗೆ ಬರುತ್ತಾರೆ. ಅವರು ಮನೆಯಿಂದ ಮಾರುಕಟ್ಟೆಗೆ ಬರುವಾಗ ಪೊಲೀಸರು ತಡೆಯುತ್ತಿದ್ದಾರೆ. ಅವರು ಬರದಿದ್ದರೆ, ವಹಿವಾಟಿಗೆ ಅಡಚಣೆ ಆಗುತ್ತದೆ. ಕಾರ್ಮಿಕರು ಮಾರುಕಟ್ಟೆಗೆ ಬಂದು ಹೋಗಲು ಪೊಲೀಸರು ಅನುವು ಮಾಡಿಕೊಡಬೇಕು ಎಂದು ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಸಗಟು ವ್ಯಾಪಾರಿ ಟಿ.ಎಸ್‌.ಯದುಕುಮಾರ್‌ ಮನವಿ ಮಾಡಿದರು.

ಊರಿಗೆ ಬಂದ ವ್ಯಾಪಾರಿಗಳು

ಲಾಕ್‌ಡೌನ್‌ನಿಂದಾಗಿ ರೈತರು ಮಾರುಕಟ್ಟೆಗೆ ಬರಲು ತೊಂದರೆ ಆಗುತ್ತಿದೆ ಎಂದು ಎಪಿಎಂಸಿ ಸಗಟು ವ್ಯಾಪಾರಿಗಳೇ ಕೆಲವು ಹಳ್ಳಿಗಳಿಗೆ ಹೋಗಿ ರೈತರಿಂದ ತರಕಾರಿ ಕೊಳ್ಳುತ್ತಿದ್ದಾರೆ.

ತುಮಕೂರು ತಾಲ್ಲೂಕಿನ ಹಿರೇತೊಟ್ಲುಕೆರೆಗೆ ಗುರುವಾರ ಬಂದಿದ್ದ ಆರು ವ್ಯಾಪಾರಿಗಳು ಸ್ಥಳೀಯ ರೈತರು ಬೆಳೆದಿದ್ದ ಟೊಮೆಟೊ, ಬಾಳೆಕಾಯಿ, ಹುರಳಿಕಾಯಿ ಕೊಂಡುಕೊಂಡು ಹೋದರು.

ವ್ಯಾಪಾರಿಗಳು ಬಂದಿದ್ದರಿಂದ ಸಾಗಾಟ ವೆಚ್ಚವೂ ಉಳಿಯಿತು. ಎಪಿಎಂಸಿಯಲ್ಲಿ ಕೊಡಬೇಕಾಗಿದ್ದ ಅಂದಾಜು ₹1,000 ಕಮಿಷನ್‌ ಹಣವೂ ಉಳಿಯಿತು. ಊರಿಗೆ ಬಂದು ಕೊಳ್ಳುವ ಇದೇ ಪದ್ಧತಿ ಮುಂದುವರೆದರೆ ಒಳ್ಳೆಯದು ಎಂದು ರೈತ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT