ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾದಲ್ಲಿ ಕೊರೊನಾ 2ನೇ ಪ್ರಕರಣ ದೃಢ; ಹೆಚ್ಚಿದ ಆತಂಕ

ತರಕಾರಿ ಮಾರುಕಟ್ಟೆಯಲ್ಲಿ ಕ್ಷೀಣಿಸದ ಜನಸಂದಣಿ; ಸಾಮಾಜಿಕ ಅಂತರ ಇಲ್ಲ
Last Updated 30 ಮಾರ್ಚ್ 2020, 16:52 IST
ಅಕ್ಷರ ಗಾತ್ರ

ಶಿರಾ: ನಗರದ ಬೇಗಂಮೊಹಲ್ಲಾದಲ್ಲಿ ನಾಲ್ಕು ದಿನದ ಹಿಂದೆ ಕೊರೊನಾದಿಂದ ಮೃತಪಟ್ಟ ವೃದ್ಧನ 13 ವರ್ಷದ ಮಗನಿಗೆ ಸಹ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗುಲಿದ ಎರಡನೇ ಪ್ರಕರಣ ಇದಾಗಿದ್ದು, ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ನಿತ್ಯ ಮುಂಜಾನೆ ಬಾಲಾಜಿ ನಗರದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ನೂರಾರು ಜನರು ಗುಂಪು ಸೇರುತ್ತಿದ್ದರು ಸಹ ಅದನ್ನು ತಡೆಯಲು ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ. ನಗರದಲ್ಲಿ ಕೊರೊನಾದ ಎರಡು ಪ್ರಕರಣಗಳು ವರದಿಯಾದರೂ ಜನತೆ ಗುಂಪು ಸೇರುವುದನ್ನು ತಡೆಯಬೇಕಿದ್ದ ಸ್ಥಳೀಯ ಆಡಳಿತ ಈ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ. ಸೋಮವಾರ ಸಹ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿ ಮಾಡಿದರು.

ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಕೆ ಮಾಡುವುದಾಗಿ ಹೇಳುವ ಅಧಿಕಾರಿಗಳು ಇದುವರೆಗೂ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವಂತಾಗಿದೆ. ಕೇವಲ ನಿರಂತರವಾಗಿ ಸಭೆಗಳನ್ನು ನಡೆಸುವುದರಲ್ಲೇ ಮಗ್ನರಾಗಿರುವ ಅಧಿಕಾರಿಗಳು ಅವುಗಳನ್ನು ಕಾರ್ಯರೂಪಕ್ಕೆ ತರುವುದು ಯಾವಾಗ ಎನ್ನುವಂತಾಗಿದೆ. ಮಾರುಕಟ್ಟೆಯನ್ನು ಬಂದ್ ಮಾಡಲು ಸಹ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ಜನತೆ ತರಕಾರಿ ಖರೀದಿಗೆ ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ.

ಪಾಸು ವಿತರಣೆ: ದಿನಸಿ ಪದಾರ್ಥಗಳ ಮಾರಾಟಗಾರರು ಹಾಗೂ ತರಕಾರಿ ಮಾರಾಟಗಾರರಿಗೆ ಪಾಸು ವಿತರಣೆ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಆರೋಗ್ಯ ತಪಾಸಣೆ: ಕೊರೊನಾ ವ್ಯಾಪಕವಾಗಿ ವ್ಯಾಪಿಸುತ್ತಿರುವ ಕಾರಣ ನಗರದಲ್ಲಿ ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 130 ತಂಡಗಳು ತಪಾಸಣೆಯಲ್ಲಿ ತೊಡಗಿದ್ದು, ಮನೆಯಲ್ಲಿರುವವರ ಮಾಹಿತಿ ಪಡೆಯುತ್ತಿದ್ದಾರೆ.

ಉಸ್ತುವಾರಿ ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ನಗರಕ್ಕೆ ಬಂದು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಡಾ.ಚಂದ್ರಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT