ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಂಗಾರದ ಫಸಲು ತೆಗೆದ ನಾರಿಯರು, ಮೆಕ್ಯಾನಿಕ್‌ ಮಗಳಿಗೆ 2 ಚಿನ್ನದ ಪದಕ

Published 7 ಆಗಸ್ಟ್ 2023, 13:51 IST
Last Updated 7 ಆಗಸ್ಟ್ 2023, 13:51 IST
ಅಕ್ಷರ ಗಾತ್ರ

ತುಮಕೂರು: ಬಡ, ಮಧ್ಯಮ ವರ್ಗದ, ಕೃಷಿಕರ ಮಕ್ಕಳು ಬಂಗಾರದ ಫಸಲು ತೆಗೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಗೊಲ್ಲರ ಹಟ್ಟಿಯಿಂದ ಮೌಢ್ಯಾಚರಣೆ ತೊಲಗಿಸುವ ಕನಸು ಕಂಡಿರುವ ಎಲ್‌.ಇ.ಆಶಾ 3 ಚಿನ್ನದ ಪದಕ ಪಡೆದರೆ, ಪಿಯುಸಿ ಓದುವಾಗಲೇ ತಂದೆಯನ್ನು ಕಳೆದುಕೊಂಡು, ತಾಯಿ ಕೂಲಿ ಕೆಲಸ ಮಾಡಿ ನೀಡಿದ ಹಣದಲ್ಲಿ ವ್ಯಾಸಂಗ ಮಾಡಿದ ಡಿ.ಸಿ.ಕಾವ್ಯಾ 4, ಮೆಕ್ಯಾನಿಕ್‌ ಮಗಳು ಹುಸ್ನ ಬೇಗಂ 2 ಚಿನ್ನದ ಪದಕ ಪಡೆಯುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

‘ಮೌಢ್ಯ ತೊಲಗಿಸುವ ಕನಸು’

ಗಣಿತ ಎಂದರೆ ಕೆಲವರಿಗೆ ಕಬ್ಬಿಣದ ಕಡಲೆಯಾಗಿರುತ್ತದೆ. ಈ ವಿಷಯದಲ್ಲಿ ಉತ್ತೀರ್ಣರಾಗಲು ಕೆಲವರು ಹಗಲು ರಾತ್ರಿ ಎನ್ನದೆ ಅಭ್ಯಾಸ ಮಾಡುವುದುಂಟು. ಅದೇ ಕಠಿಣ ವಿಷಯದಲ್ಲಿ ಗುಬ್ಬಿ ತಾಲ್ಲೂಕಿನ ಲಕ್ಕೇನಹಳ್ಳಿ ಗೊಲ್ಲರಹಟ್ಟಿಯ ಎಲ್‌.ಇ.ಆಶಾ 3 ಸ್ವರ್ಣ ಪದಕ ಪಡೆದು ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಸ್ನಾತಕೋತ್ತರ ಪದವಿಯ ಗಣಿತ ವಿಭಾಗದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. ಗೊಲ್ಲರಹಟ್ಟಿಯ ಜನರು ಇಂದಿಗೂ ಮೌಢ್ಯಾಚರಣೆ, ಕಂದಾಚಾರ, ಸಂಪ್ರದಾಯಗಳಿಂದ ಹೊರ ಬರುತ್ತಿಲ್ಲ. ಗೊಲ್ಲರ ಹಟ್ಟಿಯಿಂದ ಬಂದ ಆಶಾ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಹಲವರು ಹಟ್ಟಿಗಳಿಂದ ಆಚೆ ಬಂದು ಬದುಕು ಕಟ್ಟಿಕೊಳ್ಳಲು ಮಾದರಿಯಾಗಿ ನಿಂತಿದ್ದಾರೆ.

ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಯುಜಿಸಿ, ಎನ್‌ಇಟಿ) ಉತ್ತೀರ್ಣರಾಗಿದ್ದು, ಪಿಎಚ್‌.ಡಿ ಮಾಡುವ ಗುರಿ ಹೊಂದಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಈಗಾಗಲೇ ಕೆಲಸಕ್ಕೆ ಸೇರಿಕೊಂಡಿದ್ದಾರೆ.

‘ಗೊಲ್ಲರಹಟ್ಟಿಗಳ ಹೆಣ್ಣು ಮಕ್ಕಳು ಶಿಕ್ಷಣ ಪಡೆದು, ಕಟ್ಟುಪಾಡುಗಳಿಂದ ಹೊರ ಬರಬೇಕು. ಎಲ್ಲ ನಿರ್ಬಂಧಗಳನ್ನು ದಾಟಿ ಮುಂದೆ ಸಾಗಬೇಕು. ಮೂಢನಂಬಿಕೆಯನ್ನು ಹಟ್ಟಿಗಳಿಂದ ತೊಲಗಿಸಬೇಕಿದೆ’ ಎಂದು ಆಶಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹಲವರಿಗೆ ಸ್ಫೂರ್ತಿ ಕಾವ್ಯಾ

ಈ ಬಾರಿ ಅತಿ ಹೆಚ್ಚು 4 ಚಿನ್ನದ ಪದಕ ಪಡೆದ ಡಿ.ಸಿ.ಕಾವ್ಯಾ ಬಡತನದ ಹಿನ್ನೆಲೆಯಿಂದ ಬಂದವರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ, ಅಜ್ಜ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ತಾಯಿ ಕೂಲಿ ಮಾಡಿ ಕೂಡಿಟ್ಟ ಹಣದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಇದುವರೆಗೆ ತನ್ನ ಬೆನ್ನೆಲುಬಾಗಿ ನಿಂತ ತಾಯಿಯ ಮುಂದೆ ಬಂಗಾರದ ಪದಕ ಸ್ವೀಕರಿಸಿ ಖುಷಿಪಟ್ಟರು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೊಡ್ಡಚೆಲ್ಲೂರು ಗ್ರಾಮದವರು. ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು ವಿ.ವಿ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಯಶಸ್ವಿಯಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ರಜೆಯ ಸಮಯದಲ್ಲಿ ತಾಯಿಯ ಜತೆ ಕೆಲಸಕ್ಕೆ ಹೋಗುತ್ತಾ ಬಂದ ಹಣದಲ್ಲಿ ಕಾಲೇಜು ಶುಲ್ಕ ಪಾವತಿಸುತ್ತಿದ್ದರು. ವಿದ್ಯಾರ್ಥಿ ವೇತನವೂ ಇವರ ವಿದ್ಯಾಭ್ಯಾಸಕ್ಕೆ ನೆರವಾಯಿತು. ಎಲ್ಲ ಕಷ್ಟಗಳನ್ನು ಬದಿಗೊತ್ತಿ 4 ಚಿನ್ನದ ಪದಕ ಗಿಟ್ಟಿಸಿಕೊಳ್ಳುವ ಮೂಲಕ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.‌

‘ಹೈಸ್ಕೂಲು ಸಮಯದಲ್ಲೇ ಕನ್ನಡ ಶಿಕ್ಷಕಿಯಾಗಬೇಕು ಎಂಬ ಆಸೆ ಇತ್ತು. ಈಗ ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ. ಚಿನ್ನದ ಪದಕ ನನ್ನೆಲ್ಲ ಗುರುಗಳು, ತಾಯಿಯ ಮಾರ್ಗದರ್ಶನದಿಂದ ಸಾಧ್ಯವಾಗಿದೆ’ ಎಂದು ಕಾವ್ಯಾ ನಗುತ್ತಲೇ ಹೇಳಿದರು.

ಮೆಕ್ಯಾನಿಕ್‌ ಮಗಳಿಗೆ ಎರಡು ಚಿನ್ನ

ಮೆಕ್ಯಾನಿಕ್ ಕೆಲಸ ಮಾಡುತ್ತಾ, ಬದುಕು ಕಟ್ಟಿಕೊಂಡಿದ್ದವರ ಮಗಳು ತುಮಕೂರು ವಿ.ವಿಯಿಂದ ಎರಡು ಬಂಗಾರದ ಪದಕ ಗಳಿಸಿದ್ದಾರೆ.

ತಾಲ್ಲೂಕಿನ ಬೆಳ್ಳಾವಿಯ ಹುಸ್ನ ಬೇಗಂ ಸ್ನಾತಕೋತ್ತರ ಪದವಿಯ ಅರ್ಥಶಾಸ್ತ್ರ ವಿಭಾಗದಲ್ಲಿ ಎರಡು ಪದಕ ಪಡೆದರು. ಸದ್ಯ ಬಿ.ಇಡಿ ಅಭ್ಯಾಸ ಮಾಡುತ್ತಿದ್ದಾರೆ. ತಂದೆ, ತಾಯಿ ಬೆಂಬಲ, ಪ್ರಾಧ್ಯಾಪಕರ ಸಲಹೆಯಿಂದ ಚಿನ್ನದ ಪದಕ ಬಂದಿದೆ ಎನ್ನುತ್ತಾರೆ ಹುಸ್ನ ಬೇಗಂ.

‘ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಒಳ್ಳೆಯ ಬದುಕು ಕಟ್ಟಿ ಕೊಳ್ಳುತ್ತಾರೆ. ಆದರೆ ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಕಾಶ ಸಿಗುವುದಿಲ್ಲ. ಇದು ಬದಲಾಗಬೇಕು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿ.ಎ ಆಗುವ ಗುರಿ

ಬಿ.ಕಾಂ ಪದವಿಯಲ್ಲಿ ಮೂರು ಸ್ವರ್ಣ ಪದಕ ಪಡೆದ ದೀಪಿಕಾ ಡಿ.ಜೈನ್ ಅವರಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು. ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಕುಟುಂಬ, ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡುತ್ತಾ, ಉತ್ತಮ ಸಾಧನೆ ತೋರಿದ್ದಾರೆ.

ಕಠಿಣ ಪರಿಶ್ರಮದಿಂದ ಬಂಗಾರದ ಪದಕ ಪಡೆಯಲು ಸಾಧ್ಯವಾಯಿತು. ಯಾರೇ ಆಗಲಿ, ಸದಾ ಕಲಿಕೆಯಲ್ಲಿ ಇರಬೇಕು. ಓದು ನಿರಂತರವಾಗಿದ್ದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ದೀಪಿಕಾ ಹೇಳುತ್ತಾರೆ.

ಪೋಷಕರ ಬೆಂಬಲ ಮುಖ್ಯ

ತಿಪಟೂರು ತಾಲ್ಲೂಕಿನ ರಾಮೇನಹಳ್ಳಿಯ ಎಸ್‌.ಸಂಧ್ಯಾ ಎಂ.ಕಾಂ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದು ಸಂಭ್ರಮಿಸಿದರು. ಊರಿಂದ ಪ್ರತಿ ನಿತ್ಯ ಬಸ್‌ನಲ್ಲಿ ಓಡಾಡುತ್ತಾ ತರಗತಿಗಳಿಗೆ ಹಾಜರಾಗುತ್ತಿದ್ದರು. ಓದಿನಲ್ಲಿ ಸದಾ ಮುಂದಿದ್ದರು. ಈಗಾಗಲೇ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರ ಬೆಂಬಲ ಸಿಕ್ಕರೆ ಏನು ಬೇಕಾದರೂ ಸಾಧನೆ ಮಾಡಬಹುದು. ಅಮ್ಮ, ಅಪ್ಪನ ಸಹಕಾರದಿಂದಲೇ ಇಂದು ಬಂಗಾರದ ಪದಕ ಪಡೆಯಲು ಸಾಧ್ಯವಾಯಿತು. ಎಲ್ಲ ಸಾಧನೆಗೆ ಕುಟುಂಬವೇ ಕಾರಣ ಎನ್ನುತ್ತಾರೆ.

ಸಾಧನೆಯ ಮೊದಲ ಹೆಜ್ಜೆ

ಐಎಎಸ್‌ ಆಗುವ ಕನಸು ಕಂಡಿರುವ ಎ.ಆಕಾಶ್‌ ಇದರ ಮೊಲದ ಹೆಜ್ಜೆಯಾಗಿ 2 ಚಿನ್ನದ ಪದಕಗಳೊಂದಿಗೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಈಗಾಗಲೇ ಯುಜಿಸಿ, ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

‘ಎರಡು ವರ್ಷದ ಪ್ರಯತ್ನ ಫಲ ಚಿನ್ನದ ಪದಕ ಕೈಸೇರಿದೆ. ಇದೇ ಸಾಧನೆಯಲ್ಲ, ಜೀವನದಲ್ಲಿ ಇನ್ನೂ ಉನ್ನತ ಸ್ಥಾನಕ್ಕೆ ಹೋಗಬೇಕು. ಅದೇ ಉದ್ದೇಶದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದೇನೆ. ಗುರಿಯ ಕಡೆಗೆ ದೃಷ್ಟಿ ನೆಟ್ಟಿದ್ದೇನೆ. ಯಶಸ್ಸು ನಿಶ್ಚಿತ’ ಎಂಬ ಭರವಸೆಯ ಮಾತುಗಳನ್ನಾಡಿದರು.

ಎಂ.ಫಿಲ್‌ ಮಾಡುವಾಸೆ

‘ನಮ್ಮದು ಸಂಪೂರ್ಣವಾಗಿ ಕೃಷಿ ಕುಟುಂಬ. ಮನೆಯ ಮಂದಿ ವ್ಯವಸಾಯ ನಂಬಿ ಬದುಕುತ್ತಿದ್ದಾರೆ. ವಿ.ವಿ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮುಂದುವರಿಸಿದೆ. ಇನ್ನೂ ಹೆಚ್ಚಿನ ಶಿಕ್ಷಣ ಪಡೆಯಬೇಕು, ಎಂ.ಫಿಲ್‌ ಮಾಡಬೇಕು ಎಂಬ ಆಸೆ ಇದೆ’ ಎನ್ನುತ್ತಾರೆ ಎಂಎಸ್‌ಡಬ್ಲ್ಯೂ ವಿಭಾಗದಲ್ಲಿ 2 ಬಂಗಾರದ ಪದಕ ಪಡೆದ ಜಿ.ಉಮೇಶ್‌.

ಶಿರಾ ತಾಲ್ಲೂಕಿನ ಮೂಕನಹಳ್ಳಿಯವರು. ತಮ್ಮೆಲ್ಲ ಕಷ್ಟಗಳನ್ನು ಬದಿಗೊತ್ತಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡ ಪರಿಣಾಮ ಇಂದು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.

ಹುಸ್ನ ಬೇಗಂ
ಹುಸ್ನ ಬೇಗಂ
ಎ.ಆಕಾಶ್‌
ಎ.ಆಕಾಶ್‌
ಜಿ.ಉಮೇಶ್‌
ಜಿ.ಉಮೇಶ್‌
ಚಿನ್ನದ ಪದಕ ಪಡೆದ ನಂತರ ಡಿ.ಸಿ.ಕಾವ್ಯಾ ಅವರಿಗೆ ತಾಯಿ ಮುತ್ತಿಟ್ಟು ಸಂಭ್ರಮಿಸಿದರು
ಚಿನ್ನದ ಪದಕ ಪಡೆದ ನಂತರ ಡಿ.ಸಿ.ಕಾವ್ಯಾ ಅವರಿಗೆ ತಾಯಿ ಮುತ್ತಿಟ್ಟು ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT