ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ | ಸಕಾಲಕ್ಕಿಲ್ಲ ಬಸ್‌: ವಿದ್ಯಾರ್ಥಿಗಳ ಪರದಾಟ

Published 21 ಆಗಸ್ಟ್ 2023, 7:21 IST
Last Updated 21 ಆಗಸ್ಟ್ 2023, 7:21 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬರಲು ಹಾಗೂ ಶಾಲಾ, ಕಾಲೇಜು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ತೆರಳಲು ಸಕಾಲಕ್ಕೆ ಬಸ್‍ ಇಲ್ಲದೆ ವಿದ್ಯಾರ್ಥಿಗಳು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆಂಗ್ಲಮಾದ್ಯಮ ಶಿಕ್ಷಣ ಹಾಗೂ ವಿವಿಧ ಕೋರ್ಸ್‍ಗಳ ಕಾಲೇಜು ಇಲ್ಲದಿರುವುದರಿಂದ ಹಾಗೂ ಟ್ಯೂಷನ್‍ಗಾಗಿ ಪೋಷಕರು ತಮ್ಮ ಮಕ್ಕಳನ್ನು ಪಟ್ಟಣಕ್ಕೆ ಕಳುಹಿಸುತ್ತಾರೆ.

ನಿತ್ಯ ಶಾಲೆ, ಕಾಲೇಜುಗಳಿಗೆ ಬರುವ ಸುಮಾರು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‍ ಅವಲಂಬಿಸಿದ್ದಾರೆ.

ಏಲ್ಲಲ್ಲಿ ಸಮಸ್ಯೆ: ದ್ವಾರನಹಳ್ಳಿ, ಸಂಪಿಗೆಹೊಸಹಳ್ಳಿ, ಅಮ್ಮಸಂದ್ರ, ಅರೇಮಲ್ಲೇನಹಳ್ಳಿ, ಜಡೆಯಾ, ವಿಠಲಾಪುರ, ಬ್ಯಾಡರಹಳ್ಳಿ, ದೇವಿಹಳ್ಳಿ, ಆನೇಕೆರೆ, ಕೋಳಘಟ್ಟ, ನಾಯಕನಘಟ್ಟ, ಮುತ್ತುಗದಹಳ‍್ಳಿ ಮಾವಿನಕೆರೆ, ತೊವಿನಕೆರೆ, ಮೇಲಿನ ವಳಗೇರಹಳ್ಳಿ, ಬೋಚಿಹಳ್ಳಿ, ಕಣತೂರು, ಹುಲಿಕಲ್‍, ಸೋಪ್‍ನಹಳ್ಳಿ, ಬಿಗಿನೇಹಳ್ಳಿ ಹಾಗೆಯೇ ಕೆಲ ಮಾರ್ಗಗಳಿಗೆ ಒಂದೇ ಬಸ್‍ ಇರುವುದು ಆ ಬಸ್‍ ತಪ್ಪಿದರೆ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಹಾಗೂ ಗ್ರಾಮಕ್ಕೆ ಮರಳಲು ಕಷ್ಟ. ಎ.ಹೊಸಹಳ್ಳಿ, ಕುಣಿಕೇನಹಳ್ಳಿ, ಕುರುಬರಹಳ್ಳಿ ಬ್ಯಾಲಾ, ಕೊಪ್ಪ ಸೇರಿದಂತೆ ಹಲವು ಗಡಿಭಾಗದ ಗ್ರಾಮಗಳಿಗೆ ಬಸ್‍ ಸಂಚಾರವೇ ಇಲ್ಲ. ಇಲ್ಲೆಲ್ಲ ವಿದ್ಯಾರ್ಥಿಗಳ ಪಜೀತಿ ಹೇಳತೀರದು.

ಪಟ್ಟಣದ ಬಾಣಸಂದ್ರ ವೃತ್ತ, ಪ್ರವಾಸಿ ಮಂದಿರ, ಮಾಯಸಂದ್ರ, ತಿಪಟೂರು, ದಬ್ಬೇಘಟ್ಟ ರಸ್ತೆಗಳಲ್ಲಿ ನೂರಾರು ಮಕ್ಕಳು ಬಸ್‍ಗಾಗಿ ಹೆಗಲ ಮೇಲೆ ಬಾರವಾದ ಬ್ಯಾಗ್‍ ಹೊತ್ತು ಕಾಯುವಂತಿದೆ.

ಮಾಯಸಂದ್ರ ಕಾಲೇಜು ಬಸ್‍ ನಿಲ್ದಾಣ ಮತ್ತು ದಬ್ಬೇಘಟ್ಟ ಬಸ್‍ ನಿಲ್ದಾಣಗಳಲ್ಲಿ ಕೆಲವು ಊರುಗಳಿಗೆ ಬಸ್‍ ಇಲ್ಲದ ಮಕ್ಕಳು ರಸ್ತೆಯಲ್ಲಿ ಹೋಗುವ ಬೈಕ್‍ಗಳಿಗೆ ಅಡ್ಡ ಹಾಕುವ ದೃಶ್ಯ ಸಾಮಾನ್ಯವಾಗಿದೆ. ಪ್ರತಿ ಶನಿವಾರ ಮತ್ತು ರಾಷ್ಟ್ರೀಯ ಹಬ್ಬಗಳಂದು ಮುಂಜಾನೆ ಶಾಲೆಗೆ ಹೋಗಲು ಮಕ್ಕಳ ಪರದಾಡುತ್ತಾರೆ.

ಪಟ್ಟಣದ ಶಾಲಾ, ಕಾಲೇಜು ಸಂಜೆ 4.20ಕ್ಕೆ ಮುಗಿಯುತ್ತದೆ. ಆದರೆ 4.15ಕ್ಕೆ ಇಲ್ಲಿನ ನಿಲ್ದಾಣದಿಂದ ಬಸ್‍ಗಳು ಹೊರಟು ಹೋಗಿರುತ್ತವೆ. ಹಾಗಾಗಿ ಸಂಜೆ 6ರಿಂದ 7ರತನಕ ಮಕ್ಕಳು ನಿಲ್ದಾಣದಲ್ಲೇ ಕಾಯುವಂತಾಗಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಡವಾಗಿ ಬಂದ ಬಸ್‍ಗೆ ಹತ್ತಲು ಮಕ್ಕಳು ಪ್ರಯಾಣಿಕರೊಂದಿಗೆ ಹೆಣಗಾಡುತ್ತಾರೆ. ಇನ್ನು ಬಸ್‍ ಬರದ ಕೆಲವು ಮಾರ್ಗಗಳಲ್ಲಿ ಪೋಷಕರೇ ತಮ್ಮ ಮಕ್ಕಳನ್ನು ನಿತ್ಯ ಬೈಕ್‍ನಲ್ಲಿ ಶಾಲಾ ಕಾಲೇಜಿಗೆ ಬಿಡುವಂತಾಗಿದೆ.

ಬಸ್‍ ಬವಣೆ: ಮಾಯಸಂದ್ರ, ಕೆ.ಬಿ.ಕ್ರಾಸ್‍, ದಂಡಿನಶಿವರ, ಸಂಪಿಗೆ, ಕಲ್ಲೂರ್‌ ಕ್ರಾಸ್‍ನ ತಾಳ್ಕೆರೆ-ಗೊರಾಘಟ್ಟ, ದಬ್ಬೇಘಟ್ಟ, ತಿಪಟೂರು, ತಂಡಗ ಮಾರ್ಗದಲ್ಲಿ ಶಾಲಾ ಸಮಯಕ್ಕೆ ಸೂಕ್ತ ಬಸ್‍ ಸಂಚಾರ ಅತ್ಯಗತ್ಯ.

‘ಸೋಮವಾರ ಸಂತೆ ದಿನವಂತೂ ಬಸ್‍ ಬಂದ ತಕ್ಷಣ ಹತ್ತಿಪ್ಪತ್ತು ಪ್ರಯಾಣಿಕರು, ಮಕ್ಕಳು ಬಸ್‍ ಹತ್ತಲು ಯತ್ನಿಸಿ ಮಕ್ಕಳು ಗಾಯಗೊಂಡ ಉದಾಹರಣೆಗಳಿವೆ. ಎಲ್ಲ ಬಸ್‍ಗಳು ತುಂಬಿರುತ್ತವೆ. ಹೆಣ್ಣು ಮಕ್ಕಳು, ಬಾಲಕರು ಮನೆಗೆ ಶಾಲೆಯಿಂದ ಸಕಾಲಕ್ಕೆ ಬರದಿದ್ದರೆ ಆತಂಕ ಹೆಚ್ಚುತ್ತದೆ’ ಎನ್ನುತ್ತಾರೆ ಪೋಷಕ ತೊವಿನಕೆರೆ ಗಿರಿಯಪ್ಪ.

‘ಹತ್ತನೇ ತರಗತಿ ಮಕ್ಕಳಿಗೆ ವಿಶೇಷ ತರಗತಿ ಮಾಡಲು ಬಸ್‍ ಸಮಸ್ಯೆಯಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಹಾಗಾಗಿ ಶಾಲಾ ಸಮಯಕ್ಕೆ ಬಸ್‍ಗಳನ್ನು ಬಿಡಬೇಕು’ ಎನ್ನುತ್ತಾರೆ ಮುಖ್ಯ ಶಿಕ್ಷಕ ತುಕಾರಾಂ.

ಚಾರ್ವಿ
ಚಾರ್ವಿ
ವಿದ್ಯಾಶ್ರೀ
ವಿದ್ಯಾಶ್ರೀ
ಮೋನಿಷಾ
ಮೋನಿಷಾ
ದಬ್ಬೇಘಟ್ಟ ಮಾರ್ಗದಿಂದ ಪಟ್ಟಣಕ್ಕೆ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಉಚಿತ ಬಸ್‍ ವ್ಯವಸ್ಥೆ ಇರುವುದರಿಂದ ಯಾವಾಗಲೂ ಬಸ್ ಭತ್ತಿಯಾಗಿರುತ್ತದೆ. ವಿದ್ಯಾರ್ಥಿಗಳಿಗೆ ಹತ್ತಲು ಕಷ್ಟವಾಗುತ್ತದೆ. ಶಾಲಾ ಸಮಯಕ್ಕೆ ಸಿಟಿ ಬಸ್‍ ಕಲ್ಪಿಸಿದರೆ ಅನುಕೂಲ.
ಚಾರ್ವಿ ಪ್ರಿಯಾ ಆಂಗ್ಲ ಪ್ರೌಢಶಾಲೆ
ಗಡಿಗ್ರಾಮ ಬೋಚಿಹಳ್ಳಿಯಿಂದ ತುರುವೇಕೆರೆಗೆ ಹೋಗುವ ಬಸ್‍ಗಳ ಸಂಖ್ಯೆ ವಿರಳ. ಬೆಳಿಗ್ಗೆ ಮತ್ತು ಶಾಲೆ ಬಿಟ್ಟ ನಂತರ ಮನೆಗೆ ಹೋಗಲು ಕಷ್ಟವಾಗುತ್ತಿದ್ದು ಬಸ್‍ ಬರುವುದು ತಡವಾದರೆ ಮನೆಯವರು ಆತಂಕಗೊಳ್ಳುತ್ತಾರೆ.
ವಿದ್ಯಾಶ್ರೀ ಬೋಚಿಹಳ್ಳಿ
ಮೇಲಿನವಳಗೇರಹಳ್ಳಿ ಗ್ರಾಮದಿಂದ ಶಾಲಾ ಸಮಯಕ್ಕೆ ಬರುವ ಬಸ್‍ಗಳೇ ಕಡಿಮೆ. ಒಂದು ಬೇಳೆ ಈ ಬಸ್‍ ಬರದಿದ್ದರೆ 4 ಕಿ.ಮೀಟರ್‌ ದೂರದ ಕಡೇಹಳ್ಳಿಗೆ ನಡೆದೇ ಹೋಗಿ ಬಸ್‍ ಹತ್ತಬೇಕಿದೆ. ಶಾಲೆ ಬಿಟ್ಟಾಗಲೂ ಇದೇ ಸಮಸ್ಯೆ ಇದೆ.
ಮೋನಿಷಾ ರಾಜ್‍ ಜೆ.ಪಿ ಆಂಗ್ಲ ಪ್ರೌಢಶಾಲೆ

ಹೆಚ್ಚುವರಿ 10 ಬಸ್‌ ಅಗತ್ಯ ಮಕ್ಕಳಿಗೆ ಬಸ್‍ ತೊಂದರೆಯಾಗದಂತೆ ಚಾಲಕರು ಮತ್ತು ನಿರ್ವಾಹಕರಿಗೆ ಕಿವಿಮಾತು ಹೇಳಿದ್ದೇನೆ. ಕೋವಿಡ್‌ಗಿಂತ ಮೊದಲು 110 ಬಸ್‍ ಚಾಲನೆಯಾಗುತ್ತಿದ್ದವು. ಈಗ 97 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. ಇನ್ನೂ ಒಂದು ಹತ್ತು ಬಸ್‍ ಆದರೆ ಸಮಸ್ಯೆ ಬಗೆಹರಿಯಲಿದೆ ಆರ್‌ ಮೂರ್ತಿ ಡಿಪೊ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT