ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಪ್ರಮಾಣಪತ್ರದಲ್ಲಿ ಸರ್ಕಾರದ ಲಾಂಛನ ಬಳಕೆ: ಆಕ್ಷೇಪ

Published : 28 ಆಗಸ್ಟ್ 2024, 5:40 IST
Last Updated : 28 ಆಗಸ್ಟ್ 2024, 5:40 IST
ಫಾಲೋ ಮಾಡಿ
Comments

ತುಮಕೂರು: ಬೀಮ್‌ ರೂರಲ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ರಾಜ್ಯ ಸರ್ಕಾರದ ಅಧಿಕೃತ ಲಾಂಛನದ ಚಿತ್ರ ಬಳಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಮಾಣ ಪತ್ರದ ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಪರ– ವಿರೋಧ ಚರ್ಚೆಗಳು ನಡೆಯುತ್ತಿವೆ.

ಕೊರಟಗೆರೆ ಪಟ್ಟಣದ ಶಿವಗಂಗಾ ಚಿತ್ರಮಂದಿರ ಬಳಿ ಸಂಸ್ಥೆ ಕಚೇರಿ ಇದೆ. ಮೊದಲಿಗೆ ತಾಲ್ಲೂಕಿನ ಬೈಚಾಪುರದಲ್ಲಿ ಸಂಸ್ಥೆ ಆರಂಭಿಸಲಾಗಿತ್ತು. ಕಳೆದ ಏಳೆಂಟು ವರ್ಷಗಳ ಹಿಂದೆ ಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಮತ್ತು ಹೊಲಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದ ನಂತರ ವಿತರಿಸುವ ಪ್ರಮಾಣಪತ್ರದಲ್ಲಿ ಸರ್ಕಾರದ ಲಾಂಛನವನ್ನು ಸಹ ಮುದ್ರಿಸಲಾಗುತ್ತಿದೆ. ಸರ್ಕಾರಿ ಸಂಸ್ಥೆಗಳು ಮಾತ್ರ ಬಳಸಬಹುದಾದ ಲಾಂಛನವನ್ನು ಖಾಸಗಿಯವರು ನೀಡುವ ಪ್ರಮಾಣಪತ್ರದಲ್ಲಿ ಬಳಕೆ ಮಾಡುತ್ತಿದ್ದು, ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

‘ಸಾಕಷ್ಟು ವರ್ಷಗಳಿಂದ ಇದೇ ರೀತಿಯಾಗುತ್ತಿದೆ. ಇದುವರೆಗೆ ಸಾವಿರಾರು ಮಂದಿ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದ್ದಾರೆ. ಪಿಯುಸಿಯನ್ನೂ ಪಾಸ್ ಮಾಡದವರು ಸಂಸ್ಥೆಯ ಪ್ರಾಂಶುಪಾಲರು ಎಂದು ಪ್ರಮಾಣಪತ್ರಕ್ಕೆ ಸಹಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರದ ಲಾಂಛನ ಬಳಸುವ ಇಂತಹ ಎಲ್ಲಾ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೊರಟಗೆರೆಯ ಅರುಣ್‌ಕುಮಾರ್‌ ಒತ್ತಾಯಿಸಿದರು.

‘ಸಂಸ್ಥೆಯ ಪ್ರಮಾಣ ಪತ್ರದಲ್ಲಿ ಲಾಂಛನ ಬಳಸುತ್ತಿರುವ ಬಗ್ಗೆ ಈಗಾಗಲೇ ತಹಶೀಲ್ದಾರ್‌ ಗಮನಕ್ಕೆ ತರಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟವರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟ ಆಡುವವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಪಟ್ಟಣದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಲಾಂಛನ ಬಳಸಿದರೆ ಕ್ರಮ

ಸರ್ಕಾರದ ಲಾಂಛನವನ್ನು ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಸ್ವಯಂಸೇವಾ ಸಂಸ್ಥೆಗಳು ಬಳಸುವಂತಿಲ್ಲ. ಇದಕ್ಕೆ ನೀತಿ ಸಂಹಿತೆ ಇದೆ. ಒಂದು ವೇಳೆ ಆ ರೀತಿ ಖಾಸಗಿಯವರು ಬಳಕೆ‌ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಖಾಸಗಿ ಸಂಸ್ಥೆಯವರು ಬಳಸುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೊರಟಗೆರೆ ತಹಶೀಲ್ದಾರ್ ಕೆ.ಮಂಜುನಾಥ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT