ಶುಕ್ರವಾರ, ನವೆಂಬರ್ 22, 2019
20 °C
ವಸಂತನರಸಾಪುರಕ್ಕೆ ಸಚಿವ ಜಗದೀಶ್‌ ಶೆಟ್ಟರ್‌ ಭೇಟಿ : ಅಧಿಕಾರಿಗಳೊಂದಿಗೆ ಸಮಾಲೋಚನೆ

ಕೈಗಾರಿಕೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆ

Published:
Updated:
Prajavani

ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ವಹಿಸುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ತುಮಕೂರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಫುಡ್‍ಪಾರ್ಕ್ ಸೇರಿದಂತೆ ವಿವಿಧ ಕೈಗಾರಿಕಾಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಕೈಗಾರಿಕೆಗಳ ಸ್ಥಾಪನೆಗೆ ರೈತರು ಜಮೀನು ಕಳೆದುಕೊಂಡಿದ್ದಾರೆ. ಅವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸಚಿವರಿಗೆ ಮನವಿ ಮಾಡಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) 2007ರಲ್ಲಿ ಮೊದಲ ಹಂತವಾಗಿ 700 ಎಕರೆ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದೆ. ಈಗ 2 ಮತ್ತು 3ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಆಗಲಿದೆ ಎಂದು ಕೆ.ಐ.ಎ.ಡಿ.ಬಿ. ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

529 ಎಕರೆ ಪ್ರದೇಶದಲ್ಲಿ ತುಮಕೂರು ಮೆಷನ್ ಟೂಲ್‍ಪಾರ್ಕ್ ಮತ್ತು 519 ಎಕರೆ ಪ್ರದೇಶದಲ್ಲಿ ‘ಜಪಾನೀಸ್ ಪಾರ್ಕ್‌’ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೈಗಾರಿಕಾ ಪ್ರದೇಶಕ್ಕಾಗಿ 220 ಕೆ.ವಿ. ವಿದ್ಯುತ್ ಪೂರೈಕೆ ಸ್ಥಾವರ ನಿರ್ಮಾಣ ಆಗುತ್ತಿದೆ. ಅಕ್ಟೋಬರ್ ತಿಂಗಳೊಳಗೆ ಸ್ಥಾವರ ಕಾರ್ಯಾರಂಭ ಮಾಡಲಿದೆ. ಕುಪ್ಪೂರು ಕೆರೆಯಿಂದ ಕೈಗಾರಿಕಾ ವಲಯಕ್ಕೆ ನಿತ್ಯ 50 ಲಕ್ಷ ಲೀಟರ್‌ ನೀರನ್ನು ಹರಿಸಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ರೂಪಿಸಲು ಕೇಂದ್ರೀಕೃತ ಕೌಶಲ ತರಬೇತಿ ಕೇಂದ್ರವನ್ನು ಈ ಪ್ರದೇಶದಲ್ಲಿ ಸ್ಥಾಪಿಸಬೇಕು. ಸ್ಮಾರ್ಟ್‍ಸಿಟಿ ಹಾಗೂ ಕೌಶಲ್ಯ ತರಬೇತಿ ಇಲಾಖೆಯಿಂದ ಪ್ರತ್ಯೇಕವಾಗಿ ಕೌಶಲ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ತರಬೇತಿಯನ್ನು ಕೇಂದ್ರೀಕೃತವಾಗಿ ನೀಡಿದರೆ ಒಳಿತು ಎಂದು ಶಾಸಕ ಜ್ಯೋತಿಗಣೇಶ್ ಅವರು ಸಚಿವರಿಗೆ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‍ ಗುಪ್ತ, ಆಯುಕ್ತ ಗುಂಜನ್‍ ಕೃಷ್ಣ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜ್ ಇದ್ದರು.

ಪ್ರತಿಕ್ರಿಯಿಸಿ (+)