ತುಮಕೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಗಳ ಮುಖ್ಯಸ್ಥರು ತರಬೇತಿ ವಾಹನಗಳೊಂದಿಗೆ ಬೆಂಗಳೂರಿಗೆ ಜಾಥಾ ನಡೆಸಲಿದ್ದಾರೆ.
ನಗರದಲ್ಲಿ ಬುಧವಾರ ಮೋಟಾರು ವಾಹನ ತರಬೇತಿ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ತರಬೇತಿ ಶಾಲೆಗಳ ಮುಖ್ಯಸ್ಥರು ಜಾಥಾ ನಡೆಸಲು ನಿರ್ಧರಿಸಿದ್ದಾರೆ.
ಒಕ್ಕೂಟದ ಅಧ್ಯಕ್ಷ ಆನಂದ ಪಾಟೀಲ್, ‘ರಸ್ತೆ ಸುರಕ್ಷತೆ ದೃಷ್ಟಿಯಿಂದ ವಾಹನ ಚಾಲನಾ ಪರವಾನಿಗೆ ನೀಡುವ ಮುನ್ನ ನಡೆಸುವ ಪರೀಕ್ಷೆಯನ್ನು ತರಬೇತಿ ಶಾಲೆಗಳಲ್ಲೇ ಮಾಡಬೇಕು. ಕಲಿಕಾ ಚಾಲನಾ ಪತ್ರ ಪಡೆಯುವ ಅಭ್ಯರ್ಥಿಗೆ ವಾಹನ ಚಾಲನಾ ತರಬೇತಿ ಶಾಲೆಗಳಿಂದ ಫಾರಂ-14 ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು. ಪ್ರತಿ ಜಿಲ್ಲೆಯಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಲು ಜಮೀನು ನೀಡಬೇಕು’ ಎಂದು ಒತ್ತಾಯಿಸಿದರು.
ರೋಸ್ ಸ್ಮಾರ್ಟ್ ಕಂಪನಿಯವರು ಸ್ಮಾರ್ಟ್ ಕಾರ್ಡ್ ಹಾಗೂ ಇತರೆ ಸಾಮಗ್ರಿ ಪೂರೈಸಲು ವಿಫಲರಾಗಿದ್ದು, ಕೂಡಲೇ ಒಪ್ಪಂದ ರದ್ದು ಮಾಡಬೇಕು. ಅನಧಿಕೃತವಾಗಿ ವಾಹನ ಚಾಲನಾ ತರಬೇತಿ ನೀಡುತ್ತಿರುವ ಶಾಲೆಗಳಿಗೆ ಕಡಿವಾಣ ಹಾಕಬೇಕು. ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರ ಕೊರತೆ ಇದ್ದು ಕೂಡಲೇ ಭರ್ತಿ ಮಾಡಬೇಕು. ತರಬೇತಿ ಶಾಲೆಗಳ ವಾಹನ ತರಬೇತಿ ದರಪಟ್ಟಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಟಿ.ಆರ್.ಸದಾಶಿವಯ್ಯ, ಕಾರ್ಯದರ್ಶಿ ನಾಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ಡಿ.ಶಿವಕುಮಾರ್, ಕಾರ್ಯದರ್ಶಿ ಬಸವರಾಜಪ್ಪ, ಖಜಾಂಚಿ ಎಚ್.ಆರ್.ನಾಗೇಶ್, ಮಧುಗಿರಿ ತಾಲ್ಲೂಕು ಅಧ್ಯಕ್ಷ ಶರತ್ ಇತರರು ಉಪಸ್ಥಿತರಿದ್ದರು.