ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನೇತೃತ್ವದಲ್ಲಿ ಪ್ರತಿಭಟನೆ

ವಕ್ಫ್ ಆಸ್ತಿ ರಕ್ಷಣೆಗೆ ಒತ್ತಾಯ; ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

Published:
Updated:
Prajavani

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ನಾಗೇನಹಳ್ಳಿಯಲ್ಲಿ 1924ರಲ್ಲಿ ಪ್ರಾರಂಭಗೊಂಡ ಉರ್ದುಶಾಲೆ ಮತ್ತು ಈದ್ಗಾ ಮೈದಾನದ ಸ್ಥಳವನ್ನು ಗೌಸ್‌ಪೀರ್‌ಖಾನ್ ಎಂಬುವರು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕವು ಸೋಮವಾರ ಪ್ರತಿಭಟನೆ ನಡೆಸಿತು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.

‘ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ‘94 ವರ್ಷಗಳಿಂದ ಶಾಲೆ ನಡೆಯುತ್ತಿದೆ. ಸರ್ವೆ ನಂಬರ್ 56ರಲ್ಲಿನ 1.20 ಗುಂಟೆ ಜಮೀನನ್ನು 1965ರಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಷನ್ ಮಾಡಿದೆ’ ಎಂದು ತಿಳಿಸಿದರು.

ಇದು ಸರ್ಕಾರಿ ಜಮೀನಾಗಿದ್ದು, ಇದನ್ನೇ ಗೌಸ್ ಪೀರ್ ಎಂಬುವರು ಜಮೀನು ಕಬಳಿಕೆ ಯತ್ನಿಸುತ್ತಿದ್ದಾರೆ. ಈ ಕುರಿತು ಜೂನ್ ತಿಂಗಳಲ್ಲಿಯೇ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಮೀನಿನ ದಾಖಲೆ ತೆಗೆಸಿದಾಗ ಗೌಸ್ ಪೀರ್ ಹೆಸರು ಬರುತ್ತಿದೆ. ಅಧಿಕಾರಿಗಳು ಗೌಸ್‌ ಪೀರ್ ಅವರೊಂದಿಗೆ ಶಾಮೀಲಾಗಿ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಕೂಡಲೇ ಗೌಸ್ ಪೀರ್ ಅವರ ಹೆಸರಿನಲ್ಲಿ ಬರುತ್ತಿರುವ ಪಹಣಿಯನ್ನು ರದ್ದುಪಡಿಸಬೇಕು. 94 ವರ್ಷ ಇತಿಹಾಸವುಳ್ಳ ಶಾಲೆಯ ಜಾಗವನ್ನು ಗೌಸ್ ಪೀರ್ ಖಾನ್ ಮತ್ತು ಕೆಲ ಭೂಮಾಫಿಯಾಗಳು ಕಬಳಿಸಲು ಸಂಚು ರೂಪಿಸಿದ್ದಾರೆ. ವಕ್ಫ್ ಆಸ್ತಿಯನ್ನು ಉಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಈಗ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯೊಳಗೆ ಗೌಸ್ ಪೀರ್‌ ಅವರು ಅಕ್ರಮವಾಗಿ ಅಂಗಡಿ ತೆರೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಪಾಠ ಮಾಡಲು ಶಿಕ್ಷಕರಿಗೂ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ವಿವರಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಕರೀಂಖಾನ್, ಅಸ್ಗರ್ ಅಲಿಖಾನ್, ಬಾಬಾ, ಇರ್ಫಾನ್ ಅಹ್ಮದ್, ವಸೀಂ ಇದ್ದರು.

 

Post Comments (+)