ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ನಾಲೆಗೆ ತ್ಯಾಜ್ಯಯುಕ್ತ ನೀರು !

Published 28 ಮೇ 2023, 23:30 IST
Last Updated 28 ಮೇ 2023, 23:30 IST
ಅಕ್ಷರ ಗಾತ್ರ

ಸುಪ್ರತೀಕ್.ಎಚ್.ಬಿ.

ತಿಪಟೂರು: ಹೇಮಾವತಿ ನಾಲೆ ನೀರಿಗೆ ತಿಪಟೂರಿನ ಒಳಚರಂಡಿ (ಯುಜಿಡಿ) ಪೈಪ್‍ಲೈನ್‍ ಕಲುಷಿತ ನೀರು ಸುಮಾರು ತಿಂಗಳಗಳಿಂದಲೂ ಸೇರುತ್ತಿದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹಾದು ಹೋಗಿರುವ ಒಳಚರಂಡಿ ಯೋಜನೆ ಪೈಪ್‍ಲೈನ್ ಮಳೆ ಬಂದಾಗಲೆಲ್ಲಾ ಬಾಯಿ ತೆರೆದುಕೊಂಡು ರಸ್ತೆಯುದ್ದಕ್ಕೂ ಹರಿಯುತ್ತಾ ಸಾಗುತ್ತದೆ.

ಯುಜಿಡಿ ಮೊದಲ ಹಂತದಲ್ಲಿ ಈಡೇನಹಳ್ಳಿ ಬಳಿಯಲ್ಲಿ ಸ್ಥಾಪಿಸಲಾಗಿರುವ ಜಾಕ್‍ವೆಲ್ ಸ್ಥಾವರದಿಂದ ಸಮರ್ಪಕವಾಗಿ ನೀರು ಪಂಪ್ ಮಾಡಲು ಸಾಧ್ಯವಾಗಿಲ್ಲ. ತ್ಯಾಜ್ಯಯುಕ್ತ ನೀರು ಈಡೇನಹಳ್ಳಿ ರುದ್ರಭೂಮಿ ಎದುರಿನ ಸಣ್ಣ ಹಳ್ಳದ ಮೂಲಕ ರೈಲ್ವೆ ಲೈನ್ ಪಕ್ಕದಲ್ಲಿಯೇ ಹಾದು ಹಿಂಡಿಸ್ಕೆರೆ ಮತ್ತು ಹುಲ್ಲುಕಟ್ಟೆ ಮಧ್ಯೆ ಈಚನೂರು ಕೆರೆಗೆ ನೀರು ಪಂಪ್ ಮಾಡುವ ದೂರದಿಂದ 250 ಮೀಟರ್ ದೂರದಲ್ಲಿ ತೋಟಗಳ ಮೂಲಕವಾಗಿ ಹಾದು ತ್ಯಾಜ್ಯಯುಕ್ತ ನೀರು ಹೇಮಾವತಿ ನಾಲೆಗೆ ಸೇರುತ್ತಿದೆ.

ಕಳೆದ ಎರಡು ವರ್ಷಗಳಿಂದಲೂ ಸಮಸ್ಯೆ ಇದೆ. ಕಲುಷಿತ ನೀರನ್ನು ಇಡೀ ಜಿಲ್ಲೆ ಜನರು ಬಳಸುತ್ತಿದ್ದಾರೆ. ದಿನದಿಂದ ದಿನಕ್ಕೆ ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇದ್ದು ಪರಿಹಾರ ಹುಡುಕುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಚಂದ್ರಣ್ಣ ಕೊಪ್ಪ, ಗ್ರಾಮಸ್ಥ

ತಿಪಟೂರು ನಗರದಲ್ಲಿ ಒಂದು ಲಕ್ಷ ಜನಸಂಖ್ಯೆ ಗಮನದಲ್ಲಿ ಇಟ್ಟುಕೊಂಡು ಸಾಂಕ್ರಾಮಿಕ ರೋಗ ತಡೆಗಟ್ಟುವ ಉದ್ದೇಶದಿಂದಲೇ ₹65ಕೋಟಿ ವೆಚ್ಚದಲ್ಲಿ ಮೂರು ಹಂತದಲ್ಲಿ ಯುಜಿಡಿ ಯೋಜನೆ ರೂಪಿಸಲಾಗಿದೆ. ನಗರದಲ್ಲಿ ನಿತ್ಯ ಸಂಗ್ರಹವಾಗುವ 3.5 ಎಂ.ಎಲ್.ಡಿ (35ಲಕ್ಷ ಲೀಟರ್) ನೀರು ಸಂಸ್ಕರಿಸುವ ಸಲುವಾಗಿ ನಗರದ ಹೊರವಲಯದ ಹೂವಿನ ಕಟ್ಟೆ ಬಳಿಯಲ್ಲಿ ಯುಜಿಡಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ.

ಸಮಸ್ಯೆಗೆ ಪರಿಹಾರ ಕಲ್ಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕಿದೆ. ತ್ಯಾಜ್ಯ ನೀರು ಹೇಮಾವತಿ ಕುಡಿಯುವ ನೀರಿಗೆ ಸೇರುವುದನ್ನು ಶೀಘ್ರವೇ ತಡೆಯುವ ಕಾರ್ಯವಾಗಬೇಕಿದೆ. ಸಮಸ್ಯೆ ತೀವ್ರತೆ ಅರಿತು ಅಧಿಕಾರಿಗಳು ಕಾರ್ಯುನಿರ್ವಹಿಸಬೇಕಿದೆ.
ಯೋಗೇಶ್, ನಗರಸಭಾ ಸದಸ್ಯ ತಿಪಟೂರು

ಮೊದಲ ಹಂತದಲ್ಲಿ ಈಡೇನಹಳ್ಳಿ ಬಳಿರುವ ಜಾಕ್‍ವೆಲ್‍ನ ಬಳಿಯಲ್ಲಿ ಕಠಿಣ ತ್ಯಾಜ್ಯ ಬೇರ್ಪಡಿಸಿ ಉಳಿದ ನೀರನ್ನು ಕಲ್ಲೇಗೌಡನಪಾಳ್ಯದ ಬಳಿ ಇರುವ ಯುಜಿಡಿ ಸಂಸ್ಕರಣ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ನಂತರದಲ್ಲಿ ಹಂತ ಹಂತವಾಗಿ ಸಂಸ್ಕರಣೆ ಮಾಡಿ ಕುಡಿಯಲು ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳಿಗೆ ಉಪಯೋಗಿಸಲು ಯೋಗ್ಯವಾಗುವ ಸಾಧ್ಯತೆ ಇರುವ ನೀರನ್ನು ಹೂವಿನಕಟ್ಟೆಗೆ ಬಿಡಲಾಗುತ್ತದೆ.

ಸಮಸ್ಯೆಗೆ ಮೂಲ ಕಾರಣವೇನು?: ನಗರದ ಹಾಸನ ವೃತ್ತದಿಂದ ರಾಜಕಾಲುವೆ ಮೂಲಕ ಹರಿದು ಬರುವ ನೀರು ನೇರವಾಗಿ ಬಂದು ತಿಪಟೂರು ಅಮಾನಿಕೆರೆಗೆ ಸೇರುತ್ತಿತ್ತು. ಆದರೆ, ಕೆರೆ ಸೌಂದರೀಕಣದ ಸಲುವಾಗಿ ರಾಜಕಾಲುವೆ ನೀರನ್ನು ಕೆ.ಎಸ್.ಆರ್.ಟಿ.ಸಿ ಪಕ್ಕದಲ್ಲಿರುವ ಮ್ಯಾನ್ ಹೋಲ್‍ನ್ನು ದೊಡ್ಡ ರಂಧ್ರ ಮಾಡಿ ಹರಿಸಲಾಗುತ್ತಿದೆ.

ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ಇದೆ. 10 ದಿನದ ಒಳಗಾಗಿ ಸಮಸ್ಯೆ ಬಗೆಹರಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿದೆ. ತಿಪಟೂರು ನಗರ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು.
ಕೆ.ಷಡಕ್ಷರಿ, ಶಾಸಕ

ಅಲ್ಲದೇ ದೋಬಿಘಾಟ್ ಬಳಿಗೆ ಬರುವ ಚರಂಡಿ ನೀರು, ಮಳೆ ನೀರು ಸಹ ಮ್ಯಾನ್‍ಹೋಲ್ ಮೂಲಕವೇ ಯುಜಿಡಿ ಸೇರುತ್ತಿದೆ. ಮಳೆ ಬಂದಾಗ ಈ ರಾಜಕಾಲುವೆ ಮೂಲಕ ಸುಮಾರು 12 ರಿಂದ 15ಎಂ.ಎಲ್.ಡಿ. ನೀರು (120 ರಿಂದ 150 ಲಕ್ಷ ಲೀಟರ್) ಮಳೆ ನೀರು ಯುಜಿಡಿ ನೀರಿನೊಂದಿಗೆ ಸೇರುತ್ತಿದೆ. ಹೆಚ್ಚಿನ ಪ್ರಮಾಣ ನೀರು ಯುಜಿಡಿಗೆ ಬರುವುದರಿಂದ ಕೋಡಿ ಸರ್ಕಲ್ ಮುಂಭಾಗದ ಮ್ಯಾನ್‍ಹೊಲ್ ತೆಗೆದುಕೊಂಡು ನೀರು ಹರಿಯುತ್ತಾ ಸಾಗಿ ಈಡೇನಹಳ್ಳಿ ರುದ್ರಭೂಮಿ ಪಕ್ಕದ ಸಣ್ಣ ಹಳ್ಳದ ತಗ್ಗಿನ ಪ್ರದೇಶಕ್ಕೆ ಹರಿಯುತ್ತದೆ. ಅದೇ ಮಳೆ ಮತ್ತು ಯುಜಿಡಿ ನೀರು ಇದೀಗ ಹೇಮಾವತಿ ನಾಲೆ ಸೇರುತ್ತಿದೆ.

ಬೆಳೆ ನಾಶದ ಆತಂಕ ಹೂವಿನಕಟ್ಟೆ ಮೂಲಕ ಹರಿಯುವ ತ್ಯಾಜ್ಯ ನೀರು ವಾಸನೆಯಿಂದ ಕೂಡಿದೆ. ಸುತ್ತಲಿನ ಜನರಿಗೆ ತೊಂದರೆ ಆಗುತ್ತಿದೆ. ಯೋಜನೆಯೂ ಪ್ರಾರಂಭದಲ್ಲಿ ವರದಾನವಾಗಿದೆ. ಕಲುಷಿತ ನೀರಿನಿಂದಾಗಿ ಸ್ಥಳೀಯ ವಾತಾವರಣ ಹಾಳಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೋಟದಲ್ಲಿನ ಬೆಳೆ ನಾಶವಾಗುವ ಸ್ಥಿತಿಯಲ್ಲಿವೆ.
ದಯಾನಂದ, ಹುಚ್ಚಗೊಂಡನಹಳ್ಳಿ ಗ್ರಾಮಸ್ಥ

ಇನ್ನೂ ಹೂವಿನಕಟ್ಟೆಯಿಂದ ಬರುತ್ತಿರುವ ತ್ಯಾಜ್ಯಯುಕ್ತ ನೀರು ಹಿಂಡಿಸ್ಕೆರೆ ಕೆರೆ ಮೂಲಕ ಈಚನೂರು ಕೆರೆಗೆ ಸೇರ್ಪಡೆಯಾಗುತ್ತಿದ್ದು ತಿಪಟೂರಿನ ಜನರು ಬಳಸುವ ನೀರಿಗೂ ತ್ಯಾಜ್ಯಯುಕ್ತ ನೀರು ಸೇರಿಕೊಳ್ಳುತ್ತಿದೆ. ಮಳೆ ಕಾಲದಲ್ಲಿ ಹೆಚ್ಚಿನ ನೀರು ಹರಿಯಲಿದ್ದು ಸದ್ಯ ಕಡಿಮೆ ಪ್ರಮಾಣದಲ್ಲಿ ಕೊಳಚೆ ನೀರು ಸೇರುತ್ತಿದೆ.

ಒಟ್ಟಿನಲ್ಲಿ ಪ್ರತಿ ವರ್ಷ ಈ ಸಮಸ್ಯೆ ಎದುರಾಗುತ್ತಿದೆ. ಮಳೆ ನೀರು, ಚರಂಡಿ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರೆ ಯುಜಿಡಿ ವ್ಯವಸ್ಥೆಯೂ ಸುಲಲಿತವಾಗಿ ಕಾರ್ಯನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.

ತ್ಯಾಜ್ಯಯುಕ್ತ ನೀರು ಹರಿದು ಬರುತ್ತಿರುವುದು
ತ್ಯಾಜ್ಯಯುಕ್ತ ನೀರು ಹರಿದು ಬರುತ್ತಿರುವುದು
ತ್ಯಾಜ್ಯಯುಕ್ತ ನೀರು ಹೇಮಾವತಿ ನಾಲೆಗೆ ಸೇರುತ್ತಿರುವ ಚಿತ್ರ.
ತ್ಯಾಜ್ಯಯುಕ್ತ ನೀರು ಹೇಮಾವತಿ ನಾಲೆಗೆ ಸೇರುತ್ತಿರುವ ಚಿತ್ರ.
ಚಂದ್ರಣ್ಣ ಕೊಪ್ಪ ಗ್ರಾಮಸ್ಥ
ಚಂದ್ರಣ್ಣ ಕೊಪ್ಪ ಗ್ರಾಮಸ್ಥ
 ದಯಾನಂದ ಹುಚ್ಚಗೊಂಡನಹಳ್ಳಿ
 ದಯಾನಂದ ಹುಚ್ಚಗೊಂಡನಹಳ್ಳಿ
 ಯೋಗೇಶ್ ನಗರಸಭಾ ಸದಸ್ಯ
 ಯೋಗೇಶ್ ನಗರಸಭಾ ಸದಸ್ಯ
ಕೆ.ಷಡಕ್ಷರಿ ಶಾಸಕ
ಕೆ.ಷಡಕ್ಷರಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT