3

ಕುಡಿಯುವ ನೀರಿಗೆ ಪರದಾಟ

Published:
Updated:
ತುರುವೇಕೆರೆ ತಾಲ್ಲೂಕಿನ ಗಡಿಭಾಗದ ಶೆಟ್ಟಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನರಿಗೇಹಳ್ಳಿ ಗ್ರಾಮದ ಸಿಸ್ಟನ್‌ಗಳಿಗೆ ವಾರದಿಂದ ನೀರು ಹರಿದಿಲ್ಲ

ತುರುವೇಕೆರೆ: ತಾಲ್ಲೂಕಿನ ಗಡಿಭಾಗ ಶೆಟ್ಟಿಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ನರಿಗೇಹಳ್ಳಿ ಗ್ರಾಮಸ್ಥರು ವಾರದಿಂದ ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಎದುರಾಗಿದೆ. ಈ ಗ್ರಾಮದಲ್ಲಿ ಸುಮಾರು 60 ವಾಸದ ಮನೆಗಳಿದ್ದು, 250ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಮೂರು ಸಿಸ್ಟನ್‌ಗಳನ್ನು ಅಳವಡಿಸಲಾಗಿದೆ. ಈ ಮೂರು ಸಿಸ್ಟನ್‌ಗಳಿಗೂ ನೀರು ಸರಬರಾಜು ಮಾಡುತ್ತಿದ್ದ ಕೊಳವೆಬಾವಿ ಮೋಟರ್ ಕೆಟ್ಟು ವಾರಗಳೆ ಉರುಳಿವೆ.

ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೋಟರ್ ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ನರಿಗೆಹಳ್ಳಿ ಗ್ರಾಮಸ್ಥರು ಗ್ರಾಮದ ಹೊರ ವಲಯದಲ್ಲಿರುವ ಜಮೀನುಗಳಲ್ಲಿನ ಕೊಳವೆಬಾವಿಗಳಿಂದ ನೀರು ಹೊತ್ತು ತರಬೇಕಾಗಿದೆ.

‘ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಶೀಘ್ರ ಸಮಸ್ಯೆ ಬಗೆಹರಿಯದಿದ್ದರೆ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡದೊಂದಿಗೆ ಧರಣಿ ನಡೆಸಲಾಗುವುದು’ ಎಂದು ತಿಳಿಸಿದರು.

ಮೋಟರ್ ದುರಸ್ತಿಯಾಗುವರೆಗೂ ಗ್ರಾಮದಲ್ಲಿರುವ ಒತ್ತುವ ಬೋರನ್ನಾದರೂ ಸರಿ ಪಡಿಸಬೇಕು ಎಂದು ಗ್ರಾಮಸ್ಥರಾದ ನರಸೇಗೌಡ, ಗೋಪಾಲಯ್ಯ, ರಾಮಚಂದ್ರು, ಪುರುಷೋತ್ತಮ್, ಹರೀಶ್ ಒತ್ತಾಯಿಸಿದರು.

ಇ.ಒ. ಜಿ.ಡಿ ಗಂಗಾಧರನ್ ಮಾತನಾಡಿ, ‘ಶೆಟ್ಟಿಗೊಂಡನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !