ಏತ ನೀರಾವರಿ ಯೋಜನೆಯಲ್ಲಿ ನೀರು ಹಂಚಿಕೆ ಅವೈಜ್ಞಾನಿಕ: ಮಾಧುಸ್ವಾಮಿ

ತುಮಕೂರು: ‘ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಯಲ್ಲಿ ತಲಾವಾರು ನೀರು ಹಂಚಿಕೆ ಮಾಡಿರುವುದು ಅವೈಜ್ಞಾನಿಕ. ಇದು ಸತ್ಯ. ಯಾರಿಗೆ ಬೇಕಾದರೂ ದೂರು ನೀಡಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸವಾಲು ಹಾಕಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ ವಿರುದ್ಧ ಕಿಡಿಕಾರಿದರು. ‘ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ’ ಎಂದು ಸಚಿವರು ನೀಡಿದ ಹೇಳಿಕೆ ವಿರುದ್ಧ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡುವುದಾಗಿ ಸುರೇಶ್‌ಗೌಡ ಹೇಳಿದ್ದರು.
‘ನೀರು ಹಂಚಿಕೆ ಮಾಡುವುದು ರಾಜಕಾರಣಿಗಳ ಕೆಲಸವಲ್ಲ. ಇವರು ಯಾಕೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನ್ನ ಜತೆ ಸುರೇಶ್‌ಗೌಡ ಮಾತನಾಡಿಲ್ಲ. ಅವರನ್ನು ಓಲೈಸುವ ಅಗತ್ಯವಿಲ್ಲ. ನಾಲೆಯಿಂದ ಹರಿದು ಹೋಗುವ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಗ್ರಾಮಾಂತರದಲ್ಲಿ ಪಂಪ್ ಮಾಡಿ ಹರಿಸಿದರೂ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಸಾಮರ್ಥ್ಯ ಇಲ್ಲದ ಪಂಪ್ ಅಳವಡಿಸಲಾಗಿದ್ದು, ನೀರು ತುಂಬಿಸುವುದು ಕಷ್ಟಕರವಾಗಿದೆ. ಈಗ 20 ಗಂಟೆ ಪಂಪ್ ಮಾಡಲು ಸೂಚಿಸಲಾಗಿದೆ’ ಎಂದು ವಿವರಿಸಿದರು.
ಜಿಲ್ಲೆಗೆ ನೀರಿನ ಕೊರತೆಯಾಗಿಲ್ಲ. ನಾಲೆ ಮೂಲಕ ಗ್ರಾಮಾಂತರ ಕ್ಷೇತ್ರಕ್ಕೆ ಹರಿಸುವ ಅವಕಾಶವಿದ್ದರೆ ಯಾರನ್ನು ಕೇಳುತ್ತಿರಲಿಲ್ಲ. ಈಗ ಎರಡನೇ ಹಂತದ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ನಾಲೆಯಿಂದ ಹೋಗಬಹುದಾದ ಕೆರೆಗಳಿಗೂ ನೀರು ಹರಿಸಲಾಗಿದೆ ಎಂದರು.
ಕೃಷಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹಂಚಿಕೆಯಾಗದ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಅಮಾನಿಕೆರೆ, ಹೆಬ್ಬಾಕ, ಮರಳೂರು ಕೆರೆಗೆ ಹರಿಸಲಾಗುವುದು. ಅಮಾನಿಕೆರೆಯಲ್ಲಿ ಹೂಳು ತುಂಬಿರುವುದರಿಂದ ಅದನ್ನು ತೆಗೆಯುವುದು ದುಬಾರಿಯಾಗಲಿದೆ. ಆದರೆ ನೀರು ತುಂಬಿಸುವುದರಿಂದ ಕೊಳವೆ ಬಾವಿ ಮರುಪೂರಣವಾಗಲಿದೆ. ಡಿಸೆಂಬರ್ ಅಂತ್ಯದವರೆಗೆ ಹರಿಸಲು ಅವಕಾಶವಿದ್ದು, ಎಲ್ಲ ಪ್ರಮುಖ ಕೆರೆಗಳನ್ನು ತುಂಬಿಸಲಾಗುವುದು ಎಂದು ಹೇಳಿದರು.
ಕೆರೆಗಳಲ್ಲಿ ನೀರು ಇದ್ದರೆ ವಾತಾವರಣ ತಂಪಾಗುವುದಲ್ಲದೆ, ಅಂತರ್ಜಲ ಮಟ್ಟ ಹೆಚ್ಚುತ್ತದೆ. ಜತೆಗೆ ಮಳೆ ಮೋಡಗಳ ಆಕರ್ಷಣೆಗೆ ಸಹಕಾರಿಯಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಕೆರೆಗಳನ್ನು ತುಂಬಿದ್ದರಿಂದ ಮಳೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಕುಂದಿದ್ದು, ಅದಕ್ಕೆ ಕಾಂಗ್ರೆಸ್ ಕಡೆ ಹೋಗುತ್ತಿದ್ದಾರೆ. ಬಿಜೆಪಿ ಬೆಳೆಸಲು ನನ್ನಿಂದ ನಿರೀಕ್ಷೆ ಮಾಡಿದರೆ ಸಹಾಯ ಮಾಡುತ್ತೇನೆ. ಜೆಡಿಎಸ್‌ನ ಯಾರ ಜತೆಗಾದರೂ ಮಾತನಾಡಿ ಎಂದರೆ ಮಾತನಾಡುತ್ತೇನೆ. ಪಕ್ಷ ಸೂಚನೆ ನೀಡಿದರೆ ಈ ಕೆಲಸಕ್ಕೆ ಸಿದ್ಧ. ನಾನಾಗಿಯೇ ಮುಂದಾದರೆ ಈ ಕೆಲಸ ಮಾಡಲು ನಿಮಗೆ ಯಾರು ಹೇಳಿದವರು ಎಂದು ಕೇಳಿದರೆ ಉತ್ತರ ಕೊಡುವುದು ಕಷ್ಟಕರವಾಗುತ್ತದೆ’ ಎಂದು ಪಕ್ಷ ಸಂಘಟನೆಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.